ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಮಹಿಳೆಯರು ಸಂಘಟಿತರಾದರೆ ಸರ್ಕಾರದ ಸಕಲ ಸೌಲಭ್ಯ ಪಡೆಯಲು ಸಾಧ್ಯ ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.ಸ್ಥಳೀಯ ಸಿದ್ದಾರೂಢ ಬೃಹ್ಮವಿದ್ಯಾಶ್ರಮದಲ್ಲಿ ಜಿಲ್ಲಾಡಳಿತ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಪುರಸಭೆ ಕಾರ್ಯಾಲಯದ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಪ್ರತಿವರ್ಷ ಮಹಿಳೆಯರಿಗಾಗಿ ಸಾಕಷ್ಟು ಯೋಜನೆ ತರುತ್ತಿದ್ದು, ಅದರ ಸದುಪಯೋಗವನ್ನು ಎಲ್ಲ ಬಡವರ್ಗದ ಮಹಿಳೆಯರು ಪಡೆದು ಆರ್ಥಿಕವಾಗಿ ಮುಂದೆ ಬರಬೇಕು ಎನ್ನುವುದೇ ಸರ್ಕಾರದ ಉದ್ದೇಶವಾಗಿದೆ. ಕಾರಣ ಎಲ್ಲರೂ ಸಂಘಟಿತರಾಗಬೇಕು, ಒಬ್ಬರಿಂದಾಗದ ಕೆಲಸವನ್ನು ಸಂಘಟನೆಯಿoದ ಪಡೆಯಬಹುದು ಎಂದು ಹೇಳಿದರು.
ಪುರಸಭೆ ಸದಸ್ಯ ಶೇಖರ ಅಂಗಡಿ ಮಾತನಾಡಿ, ಮಹಿಳಾ ಸಂಘಗಳಿಗೆ ಪ್ರತಿವರ್ಷ ಹತ್ತು ಹಲವಾರು ಯೋಜನೆಗಳು ಸರ್ಕಾರದಿಂದ ಬರುತ್ತಲೆ ಇವೆ.ಅರ್ಹ ಫಲಾನುಭವಿಗಳು ಮಾತ್ರ ಸರ್ಕಾರ ಯೋಜನೆಗಳ ಪ್ರಯೋಜನ ಪಡೆಯಬೇಕು. ಮಹಿಳಾ ಸಂಘಗಳಿಗೆ ಒಂದು ಸಮುದಾಯ ಭವನದ ಅವಶ್ಯಕತೆ ಇದ್ದು, ಪುರಸಭೆ ಅಧ್ಯಕ್ಷರು ಮನಸ್ಸು ಮಾಡಿ ಸಮುದಾಯ ಭವನವನ್ನು ಸರ್ಕಾರದಿಂದ ಮಂಜೂರಿ ಮಾಡಿಸಿ ಮಹಿಳೆಯರು ಸಭೆ, ಸಮಾರಂಭ ಮಾಡುವ ಮೂಲಕ ಅವರ ಬೇಕು ಬೇಡಗಳ ಬಗ್ಗೆ ಚರ್ಚಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.ಉಪನ್ಯಾಸಕ ಐ.ಆರ್.ಡಿ ಸಂಸ್ಥೆಯ ಸಿ.ಇಒ ಡಾ. ಬಾಬು ಸಜ್ಜನ, ಬೀದಿಬದಿ ವ್ಯಾಪಾರಿಗಳ ರಕ್ಷಣಾ ಕಾನೂನುಗಳ ಬಗ್ಗೆ ವಿವರಿಸಿ, ಬೀದಿ ಬದಿ ವ್ಯಾಪಾರಿಗಳು ಬ್ಯಾಂಕುಗಳ ಜೊತೆಗೆ ಉತ್ತಮ ಸಂಬಂಧ ಹೊಂದಿರಬೇಕು. ತೆಗೆದುಕೊಂಡ ಸಾಲ ಸರಿಯಾದ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ಒಳ್ಳೆಯ ಗ್ರಾಹಕರಾಗಿ ಎಂದು ಸಲಹೆ ನೀಡಿದರು.
ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಸಿದ್ದಾನಂದ ಭಾರತಿ ಶ್ರೀಗಳು ಮಾತನಾಡಿ, ಮಹಿಳೆ ಮನಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು. ಎಂತಹ ಕಷ್ಟದ ಸಮಯದಲ್ಲಿಯೂ ಸಹ ಸಮಚಿತ್ತದಲ್ಲಿ ಯೋಚಿಸಿ, ಸರಿಯಾದ ಮಾರ್ಗದಿಂದ ಸಂಸಾರ ನಡೆಸುವ ಜಾಣ್ಮೆ ಮಹಿಳೆಯರಲ್ಲಿ ಇದೆ ಎಂದು ಹೇಳಿದರು.ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಲಕ್ಷಣ ಮಾಂಗ, ತರಬೇತುದಾರರಾದ ಸುಮಿತ್ರಾ ಬೊರಗಿ, ಸುಮಿತ್ರಾ ಜಗದಾಳ, ಬೀದಿ ವ್ಯಾಪಾರಸ್ಥರ ಸಂಘದ ಜಿಲ್ಲಾಧ್ಯಕ್ಷ ಮನೋಹರ ಕಲಾಲ, ವರ್ಷಾ ಜಗದಾಳ, ಮೀನಾಕ್ಷಿ ಹಿರೇಮಠ, ಬಿ.ವೈ. ಮರ್ಧಿ, ಮಾನಿಂಗ ಕಿರಿಕರಿ, ಶಿವಾನಂದ ಬಾಡನವರ ಸೇರಿದಂತೆ ಹಲವರು ಇದ್ದರು. ಸಿಎಒ ಚಿದಾನಂದ ಮಠಪತಿ ಸ್ವಾಗತಿಸಿ, ವಂದಿಸಿದರು.