ಮಹಿಳೆಯರು ಅಸಹಾಯಕರಾಗದೇ ಎದಿರೇಟು ನೀಡಬೇಕು: ಡಾ.ವಿದ್ಯಾನಾರಾಯಣ್

| Published : Mar 22 2024, 01:01 AM IST

ಮಹಿಳೆಯರು ಅಸಹಾಯಕರಾಗದೇ ಎದಿರೇಟು ನೀಡಬೇಕು: ಡಾ.ವಿದ್ಯಾನಾರಾಯಣ್
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯಾ ನಂತರ ಮಹಿಳೆಯರಿಗೆ ಸಾಮಾಜಿಕ ಆದ್ಯತೆಗಳು ಸಿಗುತ್ತಿವೆ. ಆದರೆ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ಈ ವಿಷಯದಲ್ಲಿ ಅಸಹಾಯಕರಾಗದೇ ಎದಿರೇಟು ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಿಳೆಯರು, ಪುರುಷರಿಗೆ ಸರಿ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಇಂದು ಮಹಿಳೆಯರು ಮನೆಗೆ ಜೀವಾಧಾರ. ಮಹಿಳೆಯರ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಅತ್ಯಾಚಾರ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ಅಸಹಾಯಕರಾಗದೇ ಎದಿರೇಟು ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜೆಎಸ್ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಸೂತಿಶಾಸ್ತ್ರಿ ಮತ್ತು ಸ್ತ್ರೀ ರೋಗ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ನಾರಾಯಣ್ ತಿಳಿಸಿದರು.

ನಗರದ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನ ಐಕ್ಯೂಎಸಿ ಹಾಗೂ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕೋಶದ ವತಿಯಿಂದ ನವಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ಮಹಿಳೆಯರಿಗೆ ಸಾಮಾಜಿಕ ಆದ್ಯತೆಗಳು ಸಿಗುತ್ತಿವೆ. ಆದರೆ ಅತ್ಯಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ಈ ವಿಷಯದಲ್ಲಿ ಅಸಹಾಯಕರಾಗದೇ ಎದಿರೇಟು ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಮಹಿಳೆಯರು, ಪುರುಷರಿಗೆ ಸರಿ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಇಂದು ಮಹಿಳೆಯರು ಮನೆಗೆ ಜೀವಾಧಾರ. ಮಹಿಳೆಯರ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದರು.

ಆಯುರ್ವೇದ ಆಸ್ಪತ್ರೆಯ ಮತ್ತೋರ್ವ ಸಹಾಯಕ ಪ್ರಾಧ್ಯಾಪಕಿ ಡಾ.ಕೆ.ಒ. ನಂದಾ ಮಾತನಾಡಿ, ಒಡವೆ ಮತ್ತು ಬೆಲೆ ಬಾಳುವ ವಸ್ತ್ರ ಧರಿಸಿದರೆ ಸಮಾಜದಲ್ಲಿ ಉತ್ತಮ ಸ್ಥಾನ ಲಭಿಸುವುದಿಲ್ಲ. ಸಾಧನೆಯಿಂದ ಮಾತ್ರ ಮಹಿಳೆಗೆ ಘನತೆ ಲಭಿಸುತ್ತದೆ. ಮಹಿಳೆಯರು ಜೀವನದಲ್ಲಿ ಯಾವುದೇ ಸಂಕಷ್ಟ ಎದುರಾದರೂ ಎದೆಗುಂದದೆ ಮುನ್ನುಗ್ಗಬೇಕು. ಹೆಣ್ಣು ಮಗುವನ್ನು ಉಳಿಸಿ, ಬೆಳೆಸಿ ಓದಿಸಿದರೆ ಉನ್ನತ ಹುದ್ದೆಗೆ ಏರಲು ಅವಕಾಶ ಮಾಡಬೇಕು. ಎಲ್ಲಾ ರಂಗದಲ್ಲೂ ಪ್ರೇರೇಪಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಜೆಎಸ್ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಪೂರ್ಣಿಮಾ, ಡೀನ್ ಡಾ. ರೇಚಣ್ಣ ಇದ್ದರು.

ಮಹಾಜನ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸಂವಾದ

ಮೈಸೂರು ನಗರದ ಎಸ್.ಬಿ.ಆರ್.ಆರ್.ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ವಿಭಾಗ, ಸ್ಪರ್ಶ್, ಮಹಿಳಾ ಸಬಲೀಕರಣ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಪೌಷ್ಟಿಕತೆ ಮತ್ತು ನಿಮ್ಮ ಯಶಸ್ಸು ಮತ್ತು ಮಹಿಳಾ ಆರೋಗ್ಯ ಮತ್ತು ಹಾರ್ಮೋನ್ ನಿಯಂತ್ರಣ ಕುರಿತು ಸಂವಾದಾತ್ಮಕ ಚರ್ಚೆ ಆಯೋಜಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಯಾಗಿದ್ದ ನ್ಯೂಟ್ರಿಷಿಯನ್ ಮತ್ತು ಡಯಟ್ಸಲ್ಯೂಷನ್ಸ್ನ ಕೌನ್ಸಿಲರ್ ಡಾ. ಸುಷ್ಮಾ ಅಪ್ಪಯ್ಯ ಮಾತನಾಡಿ, ಉತ್ತಮ ನಾಳೆಗಾಗಿ ಜೀವನಶೈಲಿ ಮತ್ತು ಆಹಾರ ಪದ್ಧತಿಗಳ ಪ್ರಭಾವದ ಮೇಲೆ ಬೆಳಕು ಚೆಲ್ಲಿದರು. ಸ್ಥೂಲಕಾಯತೆ, ಅಧಿಕ ತೂಕ, ರಕ್ತದೊತ್ತಡ, ಸಿ.ಎಚ್.ಡಿ, ಹಾರ್ಮೋನ್ ಗಳ ಅಸಮತೋಲನ, ಕ್ಯಾನ್ಸರ್, ಮಾನಸಿಕ ಒತ್ತಡ ಮತ್ತು ಪೋಷಕಾಂಶಗಳ ಕೊರತೆಯ ಕುರಿತು ಅರಿವು ಮೂಡಿಸಿದರು.ನಂತರ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಸಂವಾದ ನಡೆಸಿ, ದೀರ್ಘಕಾಲದ ಬೆನ್ನುನೋವು, ಸ್ಥೂಲಕಾಯತೆ, ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ಪಿ.ಸಿ.ಒ.ಎಸ್, ಥೈರಾಯಿಡ್ ನಂತಹ ಸಮಸ್ಯೆ ಇತ್ತೀಚ್ಚಿನ ದಿನಗಳಲ್ಲಿ ವೃತ್ತಿಪರ ಮಹಿಳೆ ಮತ್ತು ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಐಕ್ಯೂಎಸಿ ಸಂಚಾಲಕಿ ಡಿ.. ಗೀತಾ ಇದ್ದರು.