ಪಂಚಾಯತ್‌ ರಾಜ್ ಆಯುಕ್ತಾಲಯದಿಂದ ಇಂತಹ ನಿರ್ಣಯ ಕೈಗೊಂಡು ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿರುವುದು ನಿಜಕ್ಕೂ ಶ್ಲಾಘನೀಯ

ಕೊಪ್ಪಳ: ಆಧುನಿಕ ಬದುಕಿನ ಒತ್ತಡದಲ್ಲಿರುವ ಪ್ರತಿಯೊಬ್ಬ ಮಹಿಳೆ ಕೆಲಸದ ಜತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕೊಪ್ಪಳ ತಾಪಂ ಸಹಾಯಕ ನಿರ್ದೇಶಕ ಮಹೇಶ ಹೇಳಿದರು.

ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಮಹಿಳಾ ನೌಕರರು ಮತ್ತು ಸಿಬ್ಬಂದಿಗೆ ಮುಟ್ಟಿನ ಕಪ್ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲಸದ ಒತ್ತಡದಲ್ಲಿರುವ ನಾವು ಆರೋಗ್ಯದ ಬಗ್ಗೆ ಗಮನಹರಿಸದಿರುವುದರಿಂದ ದೇಹದ ಆರೋಗ್ಯದಲ್ಲಿ ಏರುಪೇರು ಆಗುತ್ತವೆ. ಮಾಸಿಕ ಋತುಚಕ್ರ ಸಂದರ್ಭದಲ್ಲಿ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಲು ಜಿಪಂನಿಂದ ವಿತರಿಸಲಾದ ಮುಟ್ಟಿನ ಕಪ್ ಸಹಕಾರಿಯಾಗಲಿವೆ ಎಂದರು.

ಪಂಚಾಯತ್‌ ರಾಜ್ ಆಯುಕ್ತಾಲಯದಿಂದ ಇಂತಹ ನಿರ್ಣಯ ಕೈಗೊಂಡು ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಜಿಪಂ ಸ್ಯಾನಿಟೇಶನ್ ಮತ್ತು ಹೈಜಿನ್ ಸಮಾಲೋಚಕಿ ಬಸಮ್ಮ ಹುಡೇದ ಮಾತನಾಡಿ, ಮುಟ್ಟಿನ ಸಮಯದಲ್ಲಿ ಮಾಸಿಕ ಋತುಚಕ್ರ ನಿರ್ವಹಣೆ, ಶುಚಿಯಾದ ಬಟ್ಟೆ ಬಳಕೆ ಹಾಗೂ ಸ್ಯಾನಿಟೆರಿ ಪ್ಯಾಡ್ ಬಳಕೆಯಿಂದ ಆಗುವ ಅನುಕೂಲಗಳು, ವೈಯಕ್ತಿಕ ಶುಚಿತ್ವ ಕುರಿತು ಮಹತ್ವದ ಮಾಹಿತಿ ನೀಡಿದರು. ಮಹಿಳೆಯರ ವೈಯಕ್ತಿಕ ಶುಚಿತ್ವ ಹಾಗೂ ಸ್ಯಾನಿಟರಿ ಪ್ಯಾಡ್‌ಗಳ ಬಳಕೆ ಹಾಗೂ ಬಳಸಿದ ಪ್ಯಾಡ್‌ಗಳನ್ನು ಇನ್ಸಿನರೇಟರ್ ಮೂಲಕ ವೈಜ್ಞಾನಿಕ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು.

ಇತ್ತೀಚಿನ ದಿನಗಳಲ್ಲಿ ನಾವು ಆರೋಗ್ಯದ ಬಗ್ಗೆ ನಾವು ಕಾಳಜಿವಹಿಸದೇ ಇರುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇವೆ. ಮುಟ್ಟನ್ನು ಗುಟ್ಟನ್ನಾಗಿಸದೇ ಮುಟ್ಟನ್ನು ಒಗ್ಗೂಡಿಕೊಂಡು ಆರೋಗ್ಯದ ಬದಲಾವಣೆಗೆ ಮುನ್ನುಡಿ ಬರೆಯೋಣ ಎಂದು ಕರೆ ನೀಡಿದರು.

ಮಹಿಳೆಯರು ಋತುಚಕ್ರ ಸಂದರ್ಭದಲ್ಲಿ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಬಳಕೆಯಾದ ಪ್ಯಾಡ್‌ಗಳನ್ನು ಸಂಗ್ರಹಿಸಿ ವೈಜ್ಞಾನಿಕ ನಿರ್ವಹಣೆ ಮಾಡಲು ಇನ್ಸಿನರೇಟರ್ ಅಳವಡಿಸಲಾಗುತ್ತಿದ್ದು, ಎಲ್ಲ ಮಹಿಳೆಯರು ಅವುಗಳಿಗೆ ನೀಡಬೇಕು. ಎಲ್ಲಿ ಬೇಕಾದಲ್ಲಿ ಬಿಸಾಡದೇ ಗ್ರಾಪಂ ವಾಹನಕ್ಕೆ ನೀಡಬೇಕು ಅಥವಾ ನಿಗದಿಪಡಿಸಿದ ಸ್ಥಳದಲ್ಲಿ ಅವುಗಳನ್ನು ವಿಲೇವಾರಿ ಮಾಡಬೇಕು. ಬಯಲು ಶೌಚಕ್ಕೆ ಹೋಗುವುದರಿಂದ ರೋಗ ಹರಡುವ ಸಾಧ್ಯತೆ ಶೇ. 80ರಷ್ಟು ಇರುವುದರಿಂದ ಜನರಿಗೆ ಅರಿವು ಮೂಡಿಸಬೇಕು ಎಂದರು.

ತಾಪಂ ವಿಬಿ ಜಿ ರಾಮ್ ಜಿ ಯೋಜನೆಯ ಸಹಾಯಕ ನಿರ್ದೇಶಕಿ ಸೌಮ್ಯಾ ಕೆ., ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ, ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುನೀಲ ಇದ್ದರು..