ಸಾರಾಂಶ
ಮಹಿಳೆಯರು ಆರ್ಥಿಕವಾಗಿ ಪ್ರಗತಿ ಸಾಧಿಸಿದರೆ ಇಡೀ ಕುಟುಂಬವೇ ಪ್ರಗತಿ ಸಾಧಿಸುತ್ತದೆ. ಮಹಿಳೆಯರು ಸಂಘಗಳ ಮೂಲಕ ಆರ್ಥಿಕತೆಗೆ ಹೆಚ್ಚಿಸಿಕೊಳ್ಳಿ. ಉದ್ದಿಮೆ ಯಶಸ್ಸಿಗೆ ಆರ್ಥಿಕ ಶಿಸ್ತು ಮುಖ್ಯವಾಗಿದೆ ಎಂದು ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಮಹಿಳೆಯರು ಆರ್ಥಿಕವಾಗಿ ಪ್ರಗತಿ ಸಾಧಿಸಿದರೆ ಇಡೀ ಕುಟುಂಬವೇ ಪ್ರಗತಿ ಸಾಧಿಸುತ್ತದೆ. ಮಹಿಳೆಯರು ಸಂಘಗಳ ಮೂಲಕ ಆರ್ಥಿಕತೆಗೆ ಹೆಚ್ಚಿಸಿಕೊಳ್ಳಿ. ಉದ್ದಿಮೆ ಯಶಸ್ಸಿಗೆ ಆರ್ಥಿಕ ಶಿಸ್ತು ಮುಖ್ಯವಾಗಿದೆ ಎಂದು ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಮಂಜುನಾಥ್ ತಿಳಿಸಿದರು. ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಧಾನ್ ಫೌಂಡೇಷನ್ ಕಳಂಜಿಯಂ ಕಟ್ಟೆ ಗಣಪತಿ ಮಹಿಳಾ ಒಕ್ಕೂಟದಿಂದ ಆಯೋಜಿಸಲಾದ ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ತಾಲೂಕಿನ ರೈತ ಉತ್ಪಾದಕ ಕಂಪನಿ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಕಟ್ಟೆ ಗಣಪತಿ ಮಹಿಳಾ ಒಕ್ಕೂಟದ ಸರ್ವ ಸದಸ್ಯರ ಸಭೆ ಯಶಸ್ವಿಯಾಗಿದೆ. ತಾಲೂಕಿನಲ್ಲಿ ೩೦೦ಕ್ಕೂ ಹೆಚ್ಚು ಮಹಿಳಾ ಒಕ್ಕೂಟ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಿದ್ದು, ಎಸ್‌ಬಿಐ ಬ್ಯಾಂಕ್‌ನಿಂದ ೧೦ಕೋಟಿಗೂ ಅಧಿಕ ಹಣವನ್ನು ಮಹಿಳಾ ಒಕ್ಕೂಟದ ಸದಸ್ಯರು ಸಾಲ ಪಡೆದು ಸ್ವಾವಲಂಬಿ ಜೀವನವನ್ನು ರೂಪಿಸಿಕೊಂಡಿದ್ದಾರೆ. ಪ್ರತಿ ವರ್ಷ ಮಹಿಳೆಯರ ಆರ್ಥಿಕತೆಯ ಬೆಳವಣಿಗೆಯನ್ನು ಕಂಡು ಸಂತೋಷವಾಗಿದೆ ಎಂದು ಹೇಳಿದರು. ಮಹಿಳಾ ಕಳಂಜಿಯಂನ ಕ್ಷೇತ್ರ ಸಂಯೋಜಕಿ ಮಾನಮ್ಮ ಮಾತನಾಡಿ, ೨೦೦೪ರಲ್ಲಿ ಕಟ್ಟೆ ಗಣಪತಿ ಮಹಿಳಾ ಒಕ್ಕೂಟ ಪ್ರಾರಂಭವಾಗಿದ್ದು, ೩೮೬ ಮಹಿಳಾ ಕಳಂಜಿಯಂ ಸಂಘಗಳು ಯಶಸ್ವಿಯಾಗಿ ನಡೆಯುತ್ತಿದೆ. ಸದಸ್ಯರ ಉಳಿತಾಯ ೧೦ಕೋಟಿಗೂ ಅಧಿಕವಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ನಿಂದ ಮಹಿಳೆಯರಿಗೆ ೧೧ಕೋಟಿಗೂ ಅಧಿಕ ಹಣವನ್ನು ಸಾಲ ಕೊಡಿಸಲಾಗಿದೆ. ವಿದ್ಯಾಭ್ಯಾಸ, ಉದ್ಯೋಗ, ಕೃಷಿ ಇತರೆ ಉದ್ದಿಮೆಗಳಿಗೆ ಬಳಸಿಕೊಂಡು ಸ್ವಾವಲಂಭಿ ಜೀವನವನ್ನು ರೂಪಿಸಿಕೊಂಡಿದ್ದಾರೆ. ೩ವರ್ಷದಿಂದ ಶುಗರ್ ಫೆಡರೇಷನ್ ಪ್ರಾರಂಭಿಸಿ ಉಚಿತ ಆರೋಗ್ಯ ಶಿಬಿರ ಮತ್ತು ಶಂಕರ್ ಕಣ್ಣಿನ ಆಸ್ಪತ್ರೆ ವೈದ್ಯರ ತಂಡದಿಂದ ಅನೇಕ ಆರೋಗ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದೇವೆ ಎಂದು ಹೇಳಿದರು. ಮಹಿಳಾ ಕಳಂಜಿಯಂನ ಎಫ್‌ಪಿಒ ನಿರ್ವಾಹಕ ಉಮೇಶ್ ಎಚ್.ವಿ ಮಾತನಾಡಿ, ಕಳಂಜಿಯಂ ಮಹಿಳಾ ಒಕ್ಕೂಟದಲ್ಲಿ ಆರ್ಥಿಕತೆಯಲ್ಲಿ ಹಿಂದೆ ಉಳಿದ ಮಹಿಳೆಯರಿಗೆ ಸದಸ್ಯತ್ವ ನೀಡಿ ಮಹಿಳಾ ಸಬಲೀಕರಣಕ್ಕೆ ಒಕ್ಕೂಟ ಹೆಚ್ಚಿನ ಒತ್ತು ನೀಡಿದೆ. ಎಸ್‌ಬಿಐ, ಕೆನರಾ, ಯೂನಿಯನ್ ಬ್ಯಾಂಕ್‌ಗಳ ಮೂಲಕ ಸಾಲ ನೀಡಿ ಮಹಿಳೆಯರ ಸಮಗ್ರ ಅಭಿವೃದ್ಧಿಗೆ ಒಕ್ಕೂಟ ಶ್ರಮವಹಿಸಿ ಕೆಲಸ ಮಾಡಿದೆ ಎಂದು ಹೇಳಿದರು. ಕೆನರಾ ಬ್ಯಾಂಕ್ ಡಿವೈಎಂ ರವಿಕುಮಾರ್ ಮಾತನಾಡಿ, ಮಹಿಳಾ ಒಕ್ಕೂಟ ಇರುವುದರಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಪ್ರಮುಖ ಕಾರಣವಾಗಿದೆ. ಸಾಕ್ಷರತೆ ಅವಶ್ಯಕತೆಯಿಲ್ಲದೆ ನಮ್ಮ ಬ್ಯಾಂಕ್ ಒಕ್ಕೂಟದ ಮೂಲಕ ಸಾಲ ನೀಡುತ್ತಿದೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಮಹಿಳಾ ಕಳಂಜಿಯಂ ಒಕ್ಕೂಟದ ಡಿಆರ್‌ಸಿ ಶೈಲಜಾ, ಕೃಷಿ ಅಧಿಕಾರಿ ವೆಂಕಟೇಶ್, ಅಧ್ಯಕ್ಷೆ ರಾಧಮ್ಮ, ಉಪಾಧ್ಯಕ್ಷೆ ಕಮಲಮ್ಮ, ನಿರ್ದೇಶಕಿ ವಿ.ಸಿ ಲಕ್ಷಮ್ಮ, ರಾಜೇಶ್ವರಿ, ಸೇರಿದಂತೆ ಇತರರು ಇದ್ದರು.