ಅಭ್ಯರ್ಥಿಗಳ ಪಾಲಿಗೆ ಮಹಿಳಾ ಮತದಾರರೇ ನಿರ್ಣಾಯಕ

| Published : Feb 07 2024, 01:47 AM IST

ಸಾರಾಂಶ

ಈ ಉಪಚುನಾವಣೆಯಲ್ಲಿ ಒಟ್ಟು 19,181 ಮತದಾರರು ಇದ್ದಾರೆ. ಈ ಪೈಕಿ 7145 ಪುರುಷರಿದ್ದರೆ, 12035 ಮಹಿಳೆಯರು ಹಾಗೂ 1 ಇತರೆ ಮತದಾರರು ಸೇರಿದ್ದಾರೆ. ಪುರುಷರಿಗಿಂತ 4890 ಮಹಿಳೆಯರು ಹೆಚ್ಚಿದ್ದು, ಅಭ್ಯರ್ಥಿಗಳ ಹಣೆ ಬರಹವನ್ನು ಮಹಿಳಾ ಮತದಾರರು ನಿರ್ಧರಿಸುವ ಶಕ್ತಿ ಹೊಂದಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪ ಚುನಾವಣೆ । ಅಭ್ಯರ್ಥಿಗಳ ಪಾಲಿಗೆ ಮಹಿಳಾ ಮತದಾರರೇ ನಿರ್ಣಾಯಕ । ಪುರುಷರಿಗೆ ಹೋಲಿಸಿದರೆ 4890 ಮಹಿಳೆಯರೇ ಅಧಿಕ । ಇದೇ ಮೊದಲ ಬಾರಿಗೆ ಇಬ್ಬರು ನಾರಿಯರಿಂದ ಸ್ಪರ್ಧೆ

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ತೀವ್ರ ಕುತೂಹಲ ಕೆರಳಿಸುತ್ತಿರುವ ವಿಧಾನ ಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಒಂದರ್ಥದಲ್ಲಿ ಅಭ್ಯರ್ಥಿಗಳ ಜುಟ್ಟು ಮಹಿಳಾ ಮತದಾರರ ಕೈಯಲ್ಲಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ನೋಂದಣಿ ಪಟ್ಟಿಯಲ್ಲಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಓಲೈಸಿಕೊಂಡವರ ಗೆಲುವು ಸುಲಭವಾಗಲಿದೆ.

ಈ ಉಪಚುನಾವಣೆಯಲ್ಲಿ ಒಟ್ಟು 19,181 ಮತದಾರರು ಇದ್ದಾರೆ. ಈ ಪೈಕಿ 7145 ಪುರುಷರಿದ್ದರೆ, 12035 ಮಹಿಳೆಯರು ಹಾಗೂ 1 ಇತರೆ ಮತದಾರರು ಸೇರಿದ್ದಾರೆ. ಪುರುಷರಿಗಿಂತ 4890 ಮಹಿಳೆಯರು ಹೆಚ್ಚಿದ್ದು, ಅಭ್ಯರ್ಥಿಗಳ ಹಣೆ ಬರಹವನ್ನು ಮಹಿಳಾ ಮತದಾರರು ನಿರ್ಧರಿಸುವ ಶಕ್ತಿ ಹೊಂದಿದ್ದಾರೆ.

2020ರ ನವೆಂಬರ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ 7,946 ಪುರುಷರು, 14,140 ಮಹಿಳೆಯರು ಹಾಗೂ 3 - ಇತರೆ ಸೇರಿ ಒಟ್ಟು 22,089 ಮತದಾರರು ಇದ್ದರು. 2023ರಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ 2908 ಮತದಾರರನ್ನು ಕೈಬಿಡಲಾಗಿದ್ದು, ಅಂತಿಮವಾಗಿ 19,181 ಮತದಾರರು ಇದ್ದಾರೆ.

ಚುನಾವಣೆಯಲ್ಲಿ ಮಹಿಳಾ ಮತದಾರರೇ ಮಹತ್ತರ ಪಾತ್ರ ವಹಿಸಲಿರುವ ಕಾರಣ ಅವರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತುಗಳಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ, ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪೈಕಿ ಕೆಲವರು ತಮ್ಮ ಕುಟುಂಬದ ಮಹಿಳಾ ಸದಸ್ಯರ ಮೂಲಕ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದರೆ, ಉಳಿದವರು ಪಕ್ಷದ ಮಹಿಳಾ ನಾಯಕರ ಮೂಲಕ ಮನ ಗೆಲ್ಲುವ ಕಸರತ್ತು ಮುಂದುವರೆಸಿದ್ದಾರೆ.

ಶಿಕ್ಷಕರನ್ನು ಮನವೊಲಿಸುವ ಕರಸತ್ತು:

ಬೆಂಗಳೂರು ಶಿಕ್ಷಕರ ಕ್ಷೇತ್ರ 36 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದೆ. ಅಭ್ಯರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರಿಂದ ಮತದಾನ ಮಾಡಿಸುವಂತೆ ಮನವಿ ಮಾಡುತ್ತಿದ್ದಾರೆ. ಅಲ್ಲದೆ, ಶಿಕ್ಷಕರನ್ನು ಒಳಗೊಂಡಂತೆ ಸಭೆಗಳನ್ನು ಆಯೋಜಿಸುತ್ತಿದ್ದಾರೆ.

ಅಭ್ಯರ್ಥಿಗಳ ಬೆಂಬಲಿಗರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಮತದಾರ ಶಿಕ್ಷಕರನ್ನು ದೂರವಾಣಿ ಮೂಲಕವೂ ಸಂಪರ್ಕಿಸುತ್ತಿದ್ದಾರೆ. ಅಲ್ಲದೆ, ವಾಟ್ಸ್ ಆಪ್ , ಫೇಸ್ಬುಕ್ , ಟ್ವಿಟರ್ ನಂತಹ ಸಾಮಾಜಿಕ ಜಾಲತಾಣಗಳನ್ನು ಪ್ರಚಾರ ಕಾರ್ಯಕ್ಕೆ ಸಮಪರ್ಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳಾ ಮತದಾರರು ಯಾವ ಅಭ್ಯರ್ಥಿ ಪರ ಒಲವು ತೋರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

-----------------

ಬಾಕ್ಸ್ ....

ಇಬ್ಬರು ಮಹಿಳೆಯರ ಸ್ಪರ್ಧೆ!

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ಈವರೆಗೆ ಮಹಿಳೆಯರು ಸ್ಪರ್ಧಿಸಿರಲಿಲ್ಲ.

ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಸ್ಪರ್ಧಿಸುವ ಧೈರ್ಯ ತೋರಿದ್ದಾರೆ. ಈ ಕ್ಷೇತ್ರದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಆದರೂ ಯಾವ ರಾಜಕೀಯ ಪಕ್ಷಗಳೂ ಮಹಿಳೆಯನ್ನು ಕಣಕ್ಕಿಳಿಸುವ ಚಿಂತನೆ ಹೊಂದಲಿಲ್ಲ. ಮಹಿಳಾ ನಾಯಕರು ಟಿಕೆಟ್ ಕೇಳುವ ಮನಸ್ಸು ಮಾಡಲಿಲ್ಲ. ಈಗ ಕಣದಲ್ಲಿರುವ 9 ಮಂದಿ ಅಭ್ಯರ್ಥಿಗಳ ಪೈಕಿ ಕೃಷ್ಣವೇಣಿ ಮತ್ತು ವೀಣಾ ಸೆರೆವಾ ಸೇರಿದ್ದಾರೆ.

--------------------

ಬಾಕ್ಸ್ ...

ರಂಗನಾಥ ಹೆಸರಿನ ಮೂವರ ಸ್ಪರ್ಧೆ !

ಈ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಎ.ಪಿ. ರಂಗನಾಥ ಅಖಾಡ ಪ್ರವೇಶಿಸಿದ್ದಾರೆ. ಅವರೊಂದಿಗೆ ಅದೇ ಹೆಸರಿನ ಇಬ್ಬರು ಕಣದಲ್ಲಿ ಉಳಿದುಕೊಂಡಿರುವುದು ಕುತೂಹಲ ಕೆರಳಿಸಿದೆ. 2020ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪುಟ್ಟಣ್ಣ ನಾಮಪತ್ರ ಸಲ್ಲಿಸಿದಾಗ ಅವರೊಟ್ಟಿಗೆ ಅದೇ ಹೆಸರಿನ ಇನ್ನೂ ಇಬ್ಬರು ಉಮೇದುವಾರಿಕೆ ಸಲ್ಲಿಸಿದ್ದರು. ಆನಂತರ ಪುಟ್ಟಣ್ಣ ಹೆಸರಿನ ಇಬ್ಬರು ನಾಮಪತ್ರ ವಾಪಸ್ ಪಡೆದುಕೊಂಡರೆ, ರಂಗನಾಥ ಹೆಸರಿನ ಮೂವರು ಕಣದಲ್ಲಿದ್ದರು. ಈಗಿನ ಉಪಚುನಾವಣೆಯಲ್ಲಿ ರಂಗನಾಥ ಹೆಸರಿನ ಮೂವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಒಂದೇ ಹೆಸರಿನ ಹಲವರು ನಾಮಪತ್ರ ಸಲ್ಲಿಸುವುದು ಮತದಾರರನ್ನು ಗೊಂದಲಕ್ಕೀಡು ಮಾಡುವ ಚುನಾವಣೆ ತಂತ್ರದ ಒಂದು ಭಾಗ.ಅಂತಹದೇ ಪ್ರಯತ್ನ ಇದೀಗ ಪರಿಷತ್ ಚುನಾವಣೆಯಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

---------------------------

ಬಾಕ್ಸ್ ...

ಕಣದಲ್ಲಿರುವ ಅಭ್ಯರ್ಥಿಗಳು

- ಪುಟ್ಟಣ್ಣ, ಎ.ಪಿ.ರಂಗನಾಥ, ಕೃಷ್ಣವೇಣಿ, ಬಿ.ನಾರಾಯಣಸ್ವಾಮಿ, ಮಂಜುನಾಥ್ , ಬಿ.ಕೆ.ರಂಗನಾಥ, ಟಿ.ರಂಗನಾಥ, ವೀಣಾ ಸೆರೆವಾ, ಸುನಿಲ್ ಕುಮಾರ್.

----------------------------

ಬೆಂಗಳೂರು ಶಿಕ್ಷಕರ ಕ್ಷೇತ್ರ ಮತದಾರರ ವಿವರ

ಜಿಲ್ಲೆ, ಪುರುಷರು, ಮಹಿಳೆಯರು, ಇತರೆ, ಒಟ್ಟು

ಬೆಂಗಳೂರು ಗ್ರಾಮಾಂತರ 1172, 1029, 00, 2201

ರಾಮನಗರ 1456, 1087, 00, 2543

ಬಿಬಿಎಂಪಿ (ಕೇಂದ್ರ) 577, 1405, 00, 1982

ಬಿಬಿಎಂಪಿ (ಉತ್ತರ) 700, 2133, 01, 2834

ಬಿಬಿಎಂಪಿ (ದಕ್ಷಿಣ ) 908, 1944, 00, 2852

ಬೆಂಗಳೂರು ನಗರ 2332, 4437, 00, 6769

-----------------------------------------------

ಒಟ್ಟು 7145, 12035, 01, 19181

-----------------------------------------------

6ಕೆಆರ್ ಎಂಎನ್ 1,2.ಜೆಪಿಜಿ

1.ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ

2.ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್

----------------------