ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕ

| Published : Apr 06 2024, 12:47 AM IST / Updated: Apr 07 2024, 09:59 AM IST

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ನಿರ್ಣಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿ.ಶ್ರೀರಾಮುಲು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ.ತುಕಾರಾಂ ಅಖಾಡದಲ್ಲಿದ್ದು, ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆಯೇ ನೇರ ಪೈಪೋಟಿಯಿರುವ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಫಲಾನುಭವಿಗಳಾದ ಮಹಿಳಾ ಮತಗಳೇ ನಿರ್ಣಾಯಕವಾಗಲಿವೆ.

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿ.ಶ್ರೀರಾಮುಲು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ.ತುಕಾರಾಂ ಅಖಾಡದಲ್ಲಿದ್ದು, ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಈ ಚುನಾವಣೆಯಲ್ಲೂ ಗ್ಯಾರಂಟಿ ಫಲಾನುಭವಿಗಳ ಆಶೀರ್ವಾದ ನೆಚ್ಚಿಕೊಂಡಿದ್ದರೆ, ಬಿಜೆಪಿಗೆ ಜನಾರ್ದನ ರೆಡ್ಡಿ ಸೇರ್ಪಡೆಗೊಂಡಿರುವುದರಿಂದ ಕಮಲ ಅಭ್ಯರ್ಥಿಗೆ ಗೆಲುವಿನ ಹುರುಪು ಮೂಡಿದೆ.

ನಾಲ್ಕು ಬಾರಿ ಶಾಸಕನಾಗಿ ಆಯ್ಕೆಗೊಂಡು, ಸಚಿವನಾಗಿಯೂ ಕೆಲಸ ಮಾಡಿ ಅನುಭವ ಹೊಂದಿರುವ ಈ.ತುಕಾರಾಂ ಕಾಂಗ್ರೆಸ್ ಅಭ್ಯರ್ಥಿಯಾಗಿರುವುದರಿಂದ ಇಬ್ಬರು ಅಭ್ಯರ್ಥಿಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದೆ. ಆದರೆ, ಈ ಇಬ್ಬರು ಅಭ್ಯರ್ಥಿಗಳು ಎಷ್ಟರ ಮಟ್ಟಿಗೆ ಮಹಿಳಾ ಮತಗಳನ್ನು ಸೆಳೆಯಲಿದ್ದಾರೆ ಎಂಬುದರ ಮೇಲೆಯೇ ಗೆಲುವಿನ ನಿರ್ಧಾರವಾಗಲಿದೆ. ನಾರಿಯರ ಮತಗಳ ಮೇಲೆ ಕಣ್ಣಿಟ್ಟಿರುವ ಎರಡು ಪಕ್ಷಗಳ ನಾಯಕರು ನಾನಾ ರೀತಿಯ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ.

9.45 ಲಕ್ಷ ಮಹಿಳಾ ಮತದಾರರು:

ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದೆರೆಡು ವಿಧಾನಸಭಾ ಕ್ಷೇತ್ರಗಳು ಹೊರತುಪಡಿಸಿದರೆ, ಉಳಿದೆಡೆ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ನಂತರ ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 9,20,022 ಪುರುಷ ಮತದಾರರು ಹಾಗೂ 9,45,053 ಮಹಿಳಾ ಮತದಾರರಿದ್ದಾರೆ. ಇತರೆ 266 ಸೇರಿದಂತೆ ಒಟ್ಟು 18,65,341 ಮತದಾರರಿದ್ದಾರೆ.

ಅಖಂಡ ಬಳ್ಳಾರಿ ಲೋಕಸಭಾ ಕ್ಷೇತ್ರ ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ಸಂಡೂರು, ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಮಾತ್ರ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದೆ.

ಗ್ಯಾರಂಟಿ ಜಾರಿ-ವಿಫಲಗಳ ಮೇಲೆ ಮತಯಾಚನೆ:

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಕ್ಕಿಂತಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜನೆಗಳ ಮೇಲೆ ಕಾಂಗ್ರೆಸ್‌ ಗೆಲುವಿನ ನಿರೀಕ್ಷೆ ಹೊಂದಿದೆ.

ಗ್ಯಾರಂಟಿ ಯೋಜನೆಗಳ ಸಮರ್ಪಕ ಜಾರಿಯ ವೈಫಲ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳನ್ನಿಟ್ಟುಕೊಂಡು ಮತಯಾಚನೆಗೆ ಬಿಜೆಪಿ ಮುಂದಾಗಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಉಚಿತ ಪ್ರಯಾಣದ ಶಕ್ತಿ ಯೋಜನೆಗಳು ಮಹಿಳೆಯರ ಗುರಿಯಾಗಿಸಿಕೊಂಡು ಕಾಂಗ್ರೆಸ್ ಜಾರಿಗೊಳಿಸಿದೆ. ಹೀಗಾಗಿ ಕೈ ಪಕ್ಷಕ್ಕೆ ನಾರಿಯರ ಬೆಂಬಲ ಸಿಗುವುದು ಖಚಿತ ಎಂಬ ವಿಶ್ವಾಸದಲ್ಲಿದೆ. ಬಿಜೆಪಿಗೆ ನರೇಂದ್ರ ಮೋದಿ ಅವರ ಹೆಸರೇಳಿಕೊಂಡೇ ಮತದಾನದ ಮೊರೆ ಹೋಗುವ ಅನಿವಾರ್ಯತೆಯಿದೆ.

ಮತದಾರರ ಅಂಕಿ-ಅಂಶ

ಕ್ಷೇತ್ರ- ಪುರುಷರ- ಮಹಿಳೆಯರು- ಇತರೆ- ಒಟ್ಟು ಮತದಾರರು

ಹಡಗಲಿ- 98232- 96714- 13- 194959

ಹ.ಬೊ.ಹಳ್ಳಿ- 116933- 11859- 22-235547

ವಿಜಯನಗರ- 124655- 132416- 35- 221820

ಕಂಪ್ಲಿ- 10949- 11229- 35- 221820

ಬಳ್ಳಾರಿ (ಗ್ರಾ.)- 120046- 12741- 5- 247513

ಬಳ್ಳಾರಿ ನಗರ- 13031- 13904- ..... -269393

ಸಂಡೂರು -11492- 11530- 2- 230262

ಕೂಡ್ಲಿಗಿ- 105423- 103265- 11- 208699

(ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಕೊಪ್ಪಳ ಕ್ಷೇತ್ರ ವ್ಯಾಪ್ತಿಯಲ್ಲಿದೆ)

ಬಳ್ಳಾರಿ ಜಿಲ್ಲೆಯಲ್ಲಿ ಮಹಿಳೆಯರು ಅಧಿಕ ಸಂಖ್ಯೆಯ ಮತದಾರರಾಗಿದ್ದಾರೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಮಹಿಳೆಯರು ಹಕ್ಕು ಚಲಾಯಿಸುವಾಗ ಮಹಿಳಾ ಪರವಾಗಿರುವ ಪಕ್ಷ ಯಾವುದು ಎಂಬುದನ್ನು ಯೋಚಿಸಿಯೇ ಮತದಾನ ಮಾಡುವಂತಾಗಬೇಕು ಎನ್ನುತ್ತಾರೆ ಜನವಾದಿ ಮಹಿಳಾ ಸಂಘಟನೆ ರಾಜ್ಯ ಜಂಟಿ ಕಾರ್ಯದರ್ಶಿ ಚಂದ್ರಕುಮಾರಿ.