ಸಾರಾಂಶ
ಬಂಧಿತ ಆರೋಪಿಗಳಿಂದ ₹6.40 ಲಕ್ಷಮೌಲ್ಯದ ಚಿನ್ನ ವಶ : ಪ್ರಕರಣ ಬೇಧಿಸಿದ ಸಿಬ್ಬಂದಿಗೆ ಬಹುಮಾನ ಕನ್ನಡಪ್ರಭವಾರ್ತೆ, ಬೀರೂರು
ಕಡೂರು ತಾಲೂಕಿನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಮೂರು ಪ್ರತ್ಯೇಕ ಪ್ರಕರಣದಡಿ ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯರಿಗೆ ಕಾರದಪುಡಿ ಎರಚಿ ಸರಗಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೋಲಿಸರು ವಶಕ್ಕೆ ಪಡೆದು ಗುರುವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಶಹಬಂದರ್ ಗ್ರಾಮದ ಕಲ್ಮೇಶ್ವರ ಶಿವಪುತ್ರ ಮಠದವರ್, ಬಸವರಾಜ ಸುರೇಶ ಅಗಸಾಗಿ ಮತ್ತು ರಾಜು ಯಲಗುಂಡ ಮಠದವರ್ ಬಂಧಿತ ಆರೋಪಿಗಳು.ಇವರಿಂದ ಸುಮಾರು ₹ 6.40 ಲಕ್ಷಮೌಲ್ಯದ ಬೀರೂರು ಮತ್ತು ಸಿಂಗಟಗೆರೆ ಠಾಣಾ ವ್ಯಾಪ್ತಿಯ ತಲಾ 20 ಗ್ರಾಂ ಬಂಗಾರದ ಸರ, ಕಡೂರು ಠಾಣಾ ವ್ಯಾಪ್ತಿಯ 21.5 ಗ್ರಾಂ ಚಿನ್ನದ ಸರ ಹಾಗೂ ಶಿರಾ ಸಮೀಪದ ಬಾವಿಯಲ್ಲಿ ಹಾಕಿದ್ದ ಪಲ್ಸರ್ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೂ.30 ರಂದು ಕಡೂರು ತಾಲೂಕಿನ ತಂಗಲಿ, ಸಿಂಗಟಗೆರೆ ಠಾಣಾ ವ್ಯಾಪ್ತಿಯ ಚಟ್ನಳ್ಳಿ ಹಾಗೂ ಬೀರೂರಿನ ಕುಡ್ಲೂರು ಗೇಟ್ ಬಳಿ ಮಹಿಳೆಯರಿಗೆ ಕಣ್ಣಿಗೆ ಕಾರದಪುಡಿ ಎರಚಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದರು. ಇದಕ್ಕೂ ಮುನ್ನ ಜೂ.29ರ ತಡರಾತ್ರಿ ರಾಣಿಬೆನ್ನೂರಿನಲ್ಲಿ ಪಲ್ಸರ್ ಬೈಕ್ ಕಳವು ಮಾಡಿಕೊಂಡು ಶಿವಮೊಗ್ಗದ ಮೂಲಕ ಕಡೂರಿಗೆ ಬಂದಿದ್ದರು.ಕಳೆದ ಒಂದು ತಿಂಗಳ ಹಿಂದೆ ಕೂಲಿ ಕೆಲಸಕ್ಕೆಂದು ಕಡೂರಿಗೆ ಬಂದಿದ್ದ ಆರೋಪಿ ಕಲ್ಮೇಶ್ವರ ಹಬ್ಬಕ್ಕೆಂದು ಊರಿಗೆ ತೆರಳಿ ದ್ದಾನೆ. ಬಳಿಕ ಬಸವರಾಜ್ ಮತ್ತು ರಾಜು ಇಬ್ಬರು ಸ್ನೇಹಿತರೊಂದಿಗೆ ಹಣದ ಆಸೆಗಾಗಿ ಅಡ್ಡದಾರಿ ಹಿಡಿದ ಬಗ್ಗೆ ಪೊಲೀಸ್ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಪ್ರಕರಣವನ್ನು ಜಿಲ್ಲಾ ಪೊಲೀಸ್ ಎಸ್ಪಿ ಡಾ. ವಿಕ್ರಮ್ ಅಮಟೆ ಮಾರ್ಗದರ್ಶನದಲ್ಲಿ ಮೂರು ಪೊಲೀಸ್ ಠಾಣಾವ್ಯಾಪ್ತಿಯ ಪೊಲೀಸರ ಖಚಿತ ಮಾಹಿತಿ ಮೇರೆಗೆ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲಿಸಿ ಆರೋಪಿಗಳ ಮೊಬೈಲ್ ಟ್ರಾಕ್ , ಚಲನವಲನದ ಬಗ್ಗೆ ಮಾಹಿತಿ ಪಡೆದು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ತರೀಕೆರೆ ಡಿವೈಎಸ್ಪಿ ಹಾಲಮೂರ್ತಿರಾವ್, ಕಡೂರು-ಬೀರೂರು ಸಿಪಿಐಗಳಾದ ರಫೀಕ್, ಶ್ರೀಕಾಂತ್, ಪಿಎಸೈಗಳಾದ ಸಜೀತ್ಕುಮಾರ್, ಧನಂಜಯ್, ಲೀಲಾವತಿ, ತಿಪ್ಪೇಶ್, ರಂಗನಾಥ್, ಶಾಹಿದ್ ಅಫ್ರೀದಿ, ಸಿಬ್ಬಂದಿ ಆರ್. ಗಣಪತಿ, ಶೇರುಗಾರ್, ವೇದಮೂರ್ತಿ, ಕೃಷ್ಣಮೂರ್ತಿ, ಹೇಮಂತ್ಕುಮಾರ್, ವಸಂತಕುಮಾರ್, ರಾಜು, ರೇಣುಕಮೂರ್ತಿ, ಸಿದ್ದನಾಯಕ, ಮಂಜನಾಯ್ಕ, ಶಿವಕುಮಾರ್, ರಾಜಪ್ಪ, ಮಧುಕುಮಾರ್, ಹರೀಶ್, ಧನಪಾಲನಾಯ್ಕ್ ಮತ್ತಿತರಿದ್ದರು. 10 ಬೀರೂರು 1ಬೀರೂರು ಪೊಲೀಸ್ ಠಾಣೆಯಲ್ಲಿ ಚಿನ್ನದ ಸರ ಮತ್ತು ಪಲ್ಸರ್ ಬೈಕ್ ಕಳ್ಳರಿಂದ ವಶಪಡಿಸಿಕೊಂಡ ಪೊಲೀಸರು. ಕಡೂರು-ಬೀರೂರು ಸಿಪಿಐಗಳಾದ ರಫೀಕ್, ಶ್ರೀಕಾಂತ್, ಪಿಎಸೈಗಳಾದ ಸಜೀತ್ಕುಮಾರ್, ಶಾಹಿದ್ ಅಫ್ರೀದಿ ಮತ್ತಿತರಿದ್ದರು.