ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಯುತ್ತಿರುವ ಸ್ಥಳದಲ್ಲಿ ನೆರಳಿಗಾಗಿ ಗ್ರೀನ್ ಟಾರ್ಪಲ್ ಕಟ್ಟಿಕೊಳ್ಳಲು ಅವಕಾಶ ನೀಡದ ಪೊಲೀಸರೊಂದಿಗೆ ರೈತರು ಮಾತಿನ ಚಕಮಕಿ ನಡೆಸಿದ ಘಟನೆ ಬುಧವಾರ ನಡೆಯಿತು

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಯುತ್ತಿರುವ ಸ್ಥಳದಲ್ಲಿ ನೆರಳಿಗಾಗಿ ಗ್ರೀನ್ ಟಾರ್ಪಲ್ ಕಟ್ಟಿಕೊಳ್ಳಲು ಅವಕಾಶ ನೀಡದ ಪೊಲೀಸರೊಂದಿಗೆ ರೈತರು ಮಾತಿನ ಚಕಮಕಿ ನಡೆಸಿದ ಘಟನೆ ಬುಧವಾರ ನಡೆಯಿತು.

ಬೈರಮಂಗಲ ವೃತ್ತದಲ್ಲಿ ಹಾದು ಹೋಗಿರುವ ಬಿಡದಿ - ಹಾರೋಹಳ್ಳಿ ಮಾರ್ಗದ ರಸ್ತೆಯಲ್ಲಿ ಉಪವಾಸ ಸತ್ಯಾಗ್ರಹನಿರತ ರೈತರು ನೆರಳಿಗಾಗಿ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಗ್ರೀನ್ ಟಾರ್ಪಲ್ ಕಟ್ಟಿಕೊಳ್ಳಲು ಮುಂದಾದರು. ಇದಕ್ಕೆ ಪೊಲೀಸರು ಅವಕಾಶ ನೀಡದಿದ್ದಾಗ ರೈತರು ವಾಗ್ವಾದಕ್ಕಿಳಿದರು.

ಕೊನೆಗೆ ಪೊಲೀಸ್ ಅಧಿಕಾರಿಗಳು ರೈತರಿಗೆ ಗ್ರೀನ್ ಟಾರ್ಪಲ್ ಹಾಕದಂತೆ ತಡೆಯುವಲ್ಲಿ ಯಶಸ್ವಿಯಾದರೆ, ಇದರಿಂದ ರೊಚ್ಚಿಗೆದ್ದ ರೈತ ಮಹಿಳೆಯರು ಮನೆಗಳಲ್ಲಿದ್ದ ಸೀರೆಗಳನ್ನು ತಂದು ಒಂದಕ್ಕೊಂದು ಗಂಟು ಹಾಕಿ, ರಸ್ತೆ ಬದಿಯ ಒಂದು ಕಟ್ಟಡದಿಂದ, ಮತ್ತೊಂದು ಬದಿಯ ಕಟ್ಟಡ, ಮರಗಳಿಗೆ ಕಟ್ಟಿ ನೆರಳಿನಡಿ ಸತ್ಯಾಗ್ರಹ ಮುಂದುವರಿಸಿದರು.

ರಸ್ತೆ ಮಧ್ಯದಲ್ಲಿಯೇ ರೈತ ಗಣಪತಿ ಪ್ರತಿಷ್ಪಿಸಿರುವ ರೈತರು, ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಅಜ್ಜಯ್ಯನ ಫೋಟೋ ಇಟ್ಟು ಧರಣಿ ನಡೆಸುತ್ತಿದ್ದಾರೆ. ಹೋರಾಟಗಾರರಾದ ಹೊಸೂರು ರಾಮಲಿಂಗಯ್ಯ, ಮಂಜುನಾಥ್, ನಾಗರಾಜು, ರವಿ, ಪುರುಷೋತ್ತಮ್, ಭಾಗ್ಯಮ್ಮ, ಸುಮಾ, ಗೀತಾ, ವರಲಕ್ಷ್ಮಿ, ಚಂದ್ರಮ್ಮ ಉಪವಾಸ ಸತ್ಯಾಗ್ರಹದಲ್ಲಿ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು‌.

ರೈತ ಹೋರಾಟಗಾರ ಹೊಸೂರು ಪ್ರಕಾಶ್ ಮಾತನಾಡಿ, ನಮ್ಮ‌ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಕೊಡಲ್ಲ, ಬಿಡಲ್ಲ, ಮಾರಲ್ಲ. ರೈತರು ಮಾತ್ರವಲ್ಲದೆ ಎಲ್ಲರು ರಾಜಕೀಯ ಮರೆತು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ, ಚುನಾಯಿತ ಪ್ರತಿನಿಧಿಗಳು, ಪೊಲೀಸರ ಮೇಲೆ ಒತ್ತಡ ಹೇರುತ್ತಿರುವುರಿಂದ ಗ್ರೀನ್ ಟಾರ್ಪಲ್ ಹಾಕಲು ಅವಕಾಶ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಬಂದಿಲ್ಲ. ಕೇವಲ ಭರವಸೆಗಳು ಮಾತ್ರ ಸಿಗುತ್ತಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳುವುದಿಲ್ಲ. ಉನ್ನತ ಮಟ್ಟದ ಸಮಿತಿ ರಚಿಸಿ ಕ್ರಮ ಕೈಗೊಳ್ಳು ವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಸಮಿತಿ ಸ್ಥಳಕ್ಕೆ ಭೇಟಿ ನೀಡಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.

ಹೋರಾಟದಲ್ಲಿ ಒಂದೆಡೆ ರೈತ ಮಕ್ಕಳಿಗೆ ಜಯವಾಗಲಿ, ಜೈ ಜವಾನ್ ಜೈ ಕಿಸಾನ್, ನ್ಯಾಯ ಸಿಗುವವರೆಗೆ ಹೋರಾಟ ಬಿಡಲ್ಲ ಎಂದು ಸಚಿವ ಬಾಲಕೃಷ್ಣ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ ವಾಹನ ಸಂಚಾರ ತಡೆಯಲು ಟ್ರ್ಯಾಕ್ಟರ್ ಅನ್ನು ಅಡ್ಡಲಾಗಿ ನಿಲ್ಲಿಸಿದ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು‌. ಆರೋಗ್ಯ ಇಲಾಖೆ ಸಿಬ್ಬಂದಿ ಆಗಿಂದಾಗ್ಗೆ ಉಪವಾಸ ನಿರತರ ತಪಾಸಣೆ ನಡೆಸುತ್ತಿದ್ದರು.

ನೆರಳಿಗೆ ಆಸರೆಯಾದ ಸೀರೆಗಳು:

ಕಳೆದ 564 ದಿನಗಳಿಂದ ಬಿಡದಿ‌ ಟೌನ್‌ಶಿಪ್‌ ವಿರೋಧಿಸಿ ಬೈರಮಂಗಲದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರರೂಪಕ್ಕೆ ತಿರುಗಿದ್ದು, ಬಿಡದಿ-ಹಾರೋಹಳ್ಳಿ ರಸ್ತೆಯಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನಾಕಾರರನ್ನು ಶಾಮಿಯಾನ ಹಾಕಲು ಮುಂದಾದಾಗ ಪೊಲೀಸರು ತಡೆದದ್ದರಿಂದ ಮಹಿಳೆಯರು ಕೆರಳಿ ಸೀರೆಗಳನ್ನೇ ಕಟ್ಟಿಕೊಂಡು ಪೆಂಡಾಲಾಗಿಸಿಕೊಂಡಿರುವುದು ಜನರ ಗಮನ ಸೆಳೆಯಿತು.

ಅಂಗಡಿ ಮುಂಗಟ್ಟುಗಳು ಬಂದ್:

ಬಿಡದಿ–ಹಾರೋಹಳ್ಳಿ ಮುಖ್ಯ ರಸ್ತೆಯಲ್ಲಿ ರೈತರು ಎತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್ ಗಳನ್ನು ಅಡ್ಡ ನಿಲ್ಲಿಸಿ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬುಧವಾರದಂದು ಬೈರಮಂಗಲ ವೃತ್ತದಲ್ಲಿರುವ ವ್ಯಾಪಾರಸ್ಥರು ಪಕ್ಷಾತೀತವಾಗಿ ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಹೋರಾಟಕ್ಕೆ ಬೆಂಬಲ ನೀಡಿದ್ದರು.

ಕೋಟ್ .................

ನಮ್ಮ‌ ಜಿಲ್ಲೆಯವರೇ ಮುಖ್ಯಮಂತ್ರಿ ಆಗಿದ್ದಾರೆ. ಆದರೂ ಬೈರಮಂಗಲದಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಅವರ ಕಣ್ಣಿಗೆ ಕಾಣುತ್ತಿಲ್ಲ. ನಮ್ಮ‌ಹೋರಾಟದಲ್ಲಿ ನಮಗೆ ಗೆಲುವು ಸಿಗಲಿದೆ ಎಂಬ ನಂಬಿಕೆ ಇದೆ.

- ಸುಮಾ , ರೈತ ಮಹಿಳೆ

23ಕೆಆರ್ ಎಂಎನ್ 6,7.ಜೆಪಿಜಿ

6. ಉಪವಾಸ ಸತ್ಯಾಗ್ರಹನಿರತ ರೈತರಿಗೆ ನೆರಳಿನಾಸರೆಗೆ ಕಟ್ಟಿರುವ ಸೀರೆಗಳು.

7. ಪೊಲೀಸರೊಂದಿಗೆ ರೈತರ ವಾಗ್ವಾದ.