ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪುರಾತನ ಕಾಲದಲ್ಲಿ ಮಹಿಳೆಯೇ ಕುಟುಂಬದ ಮುಖ್ಯಸ್ಥಳಾಗಿದ್ದಳು. ಮಧ್ಯಕಾಲದಲ್ಲಿ ಮಹಿಳೆಯನ್ನು ಶೋಷಣೆ ಮಾಡುವುದು ಆರಂಭವಾಯಿತು. ಆದರೆ ಪ್ರಸ್ತುತ ಮಹಿಳೆ ಬಾಹ್ಯಾಕಾಶದವರೆಗೂ ಸಾಧನೆ ಮಾಡಿದ್ದಾಳೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಶ್ಲಾಘನೆ ವ್ಯಕ್ತಪಡಿಸಿದರು.ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೇದ ಪುರಾಣಗಳ ಕಾಲದಿಂದಲೂ ಮಹಿಳೆಯನ್ನು ಪೂಜಿಸುತ್ತಿದ್ದರು, ಗಾರ್ಗಿ, ಮೈತ್ರೇಯಿಯಂತವರು ವೈದಿಕ ಕಾಲದಲ್ಲಿಯೇ ಎಲ್ಲಾ ರೀತಿಯ ವಿದ್ಯೆಯಲ್ಲಿ ಪರಿಣಿತರಾಗಿದ್ದರು, ಇಂದು ಕೂಡ ಮಹಿಳೆ ಆರ್ಥಿಕವಾಗಿ,ಸಾಮಾಜಿಕವಾಗಿ ಶೈಕ್ಷಣಿಕವಾಗಿ ಜೊತೆಗೆ ವಿಜ್ಞಾನದಲ್ಲಿಯೂ ಸಾಧನೆ ಮಾಡಿದ್ದಾಳೆ ಎಂದರು.
ಮಹಿಳೆಗೆ ಅಪಾರವಾದ ಶಕ್ತಿ ಇದೆ, ಹಿಂದೆ ಸತಿ ಸಹಗಮನ ಪದ್ಧತಿಯಂತಹ ಮೂಢನಂಬಿಕೆಗಳಿಂದ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿತ್ತು, ಆದರೆ ಇಂದು ಮಹಿಳೆ ಎಲ್ಲಾ ಸಂದರ್ಭಗಳನ್ನು ನಿಭಾಯಿಸುವಂತಹ ಶಕ್ತಿ ಹೊಂದಿದ್ದಾಳೆ, ಪ್ರತಿಯೊಬ್ಬ ಮಹಿಳೆಯೂ ನಿಮಗೆ ನೀವೇ ನಿಮ್ಮ ಆತ್ಮಸ್ಥೈರ್ಯ ವೃದ್ಧಿಸಿಕೊಳ್ಳಿ, ಅತ್ತೆ, ಸೊಸೆ ಎಂದು ಭೇದಭಾವ ಮಾಡದೇ ಕೌಟುಂಬಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಮನೆಯಲ್ಲಿ ಅತ್ತೆ ಸೊಸೆ ಚೆನ್ನಾಗಿದ್ದಾರೆ ಎಂದರೇ ತಮ್ಮ ಜವಾಬ್ದಾರಿ ತಿಳಿದುಕೊಂಡಿದ್ದಾರೆ ಎಂದರ್ಥ.ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳಾದ ಚಂದ್ರಶೇಖರ್ ಮಾತನಾಡಿ, ನಮ್ಮ ದೇಶದಲ್ಲಿ ಹೆಣ್ಣಿಗೆ ಬಹಳ ಗೌರವವಿದೆ, ಸಾಹಿತಿಗಳು, ಕವಿಗಳು ಹೆಚ್ಚು ಕವಿತೆ ಕವನಗಳನ್ನು ಹೆಣ್ಣಿಗೆ ಹೋಲಿಸಿ ಬರೆದಿದ್ದಾರೆ. ನಮ್ಮ ದೇಶವನ್ನು, ರಾಜ್ಯವನ್ನು ಕೂಡ ನಾವು ಹೆಣ್ಣಿನ ಸ್ವರೂಪದಲ್ಲಿಯೇ ಗೌರವಿಸುತ್ತಿದ್ದೇವೆ, ಆ ಗೌರವವನ್ನು ಉಳಿಸಿ ಬೆಳೆಸೋಣ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಆರ್. ಧರಣಿ ಕುಮಾರ್, ಅಂಗವಿಕಲರ ಇಲಾಖೆಯ ಅನುಪಮ, ಶೋಭ ಮಲ್ಲೇಶ್, ರೆಡ್‌ಕ್ರಾಸ್ ಸಂಸ್ಥೆಯ ಕೆ.ಟಿ. ಜಯಶ್ರೀ, ಸವಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.