ಸ್ವಾತಂತ್ರ್ಯ ಚಳವಳಿಗೆ ಮಹಿಳೆಯರ ಕೊಡುಗೆ ಅಪಾರ: ಸಾಹಿತಿ ರಂಜಾನ ದರ್ಗಾ

| Published : Jan 06 2025, 01:01 AM IST

ಸಾರಾಂಶ

ಹೆಣ್ಣುಮಕ್ಕಳನ್ನು ನಾವು ಗೌರವದಿಂದ ಕಾಣಬೇಕು ಎಂದು ಸಾಹಿತಿ ರಂಜಾನ ದರ್ಗಾ ಹೇಳಿದರು.

ಧಾರವಾಡ: ಸತಿ-ಪತಿಗಳು ಒಂದಾದ ಭಕ್ತಿ ಎಂದರೆ ಸಹಚರ ಭಾವ, ಅದು ಜೀವನ ವಿಧಾನ. ದಾಂಪತ್ಯದ ರಹಸ್ಯ ತಂದೆ-ತಾಯಿ ಆಗುವುದರಲ್ಲಿದೆ ಎಂದು ಸಾಹಿತಿ ರಂಜಾನ ದರ್ಗಾ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ಲಲಿತಾ ಮತ್ತು ಪ್ರೊ. ಸಿ.ವಿ. ಕೆರಿಮನಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಹಿತ್ಯ ದಂಪತಿ ಪ್ರಶಸ್ತಿ ಪ್ರದಾನದಲ್ಲಿ ಮಾತನಾಡಿದರು.ಹೆಣ್ಣುಮಕ್ಕಳನ್ನು ನಾವು ಗೌರವದಿಂದ ಕಾಣಬೇಕು. ಇಂದು ತಂದೆ-ತಾಯಿಗಳ ಬಗ್ಗೆ ಗೌರವ ಕ್ಷೀಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಚಾರಿತ್ರಿಕ ಕಾದಂಬರಿಕಾರ ಯ.ರು. ಪಾಟೀಲ ‘ಸ್ವಾತಂತ್ರ್ಯ ಚಳುವಳಿ ಮತ್ತು ಕನ್ನಡತಿಯರು’ ವಿಷಯ ಕುರಿತು ಮಾತನಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಕನ್ನಡದ ಮಹಿಳೆಯರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಮಹಿಳೆ ಚಳುವಳಿ ಜೊತೆ ಕುಟುಂಬ ನಿರ್ವಹಣೆ ಜೊತೆಗೆ ಸೆರೆಮನೆ ವಾಸ ಅನುಭವಿಸಿದ್ದರೂ ಈ ಬಗ್ಗೆ ದಾಖಲೆ ವಿರಳವಾಗಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಮೀರಬಾಯಿ ಕೊಪ್ಪಿಕರ, ಸೀತಾಬಾಯಿ, ಹನುಬರ ಕಾಶವ್ವ, ನಾಗಮ್ಮ, ಮಾಗಡಿ ಗೌರಮ್ಮ, ಸಿದ್ಧಾಪುರದ ಮಹಾದೇವಿ, ರಾಮನಗರದ ಯಶೋಧರ ದಾಸಪ್ಪ ಸೇರಿದಂತೆ ಅನೇಕ ಕನ್ನಡತಿಯರು ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದನ್ನು ಮರೆಯಲಾಗದು ಎಂದರು.

ಸಾಹಿತ್ಯ ದಂಪತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುನಂದಾ ಕಡಮೆ, ಪ್ರಸ್ತುತ ದಿನಗಳಲ್ಲಿ ದಾಂಪತ್ಯ ಪರಿಕಲ್ಪನೆ ಬದಲಾಗುತ್ತಿದೆ. ಮದುವೆ ಮತ್ತು ದಾಂಪತ್ಯ ಒಪ್ಪಂದ, ಹೊಂದಾಣಿಕೆ ಮತ್ತು ಜವಾಬ್ದಾರಿಯಾಗಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಉಸಿರು ಕಟ್ಟುವ ವಾತಾವರಣ ಸೃಷ್ಟಿಯಾಗುತ್ತದೆ. ಅದಕ್ಕೆ ಅವಕಾಶ ಕೊಡದೆ ಅರ್ಥಪೂರ್ಣವಾದ ಜೀವನ ನಡೆಸುವುದೇ ದಾಂಪತ್ಯ. ಮದುವೆ ಚೌಕಟ್ಟಿನ ಹೊರಗೆ ಇಂದು ಹೊಸ ಪೀಳಿಗೆ ಹೋಗುತ್ತಿರುವುದು ಕಾಣುತ್ತಿದ್ದೇವೆ ಎಂದರು.

ಲಲಿತಾ ಕೆರಿಮನಿ, ಸಂಪದಾ ಸುಭಾಷ ಕೆರಿಮನಿ ಮಾತನಾಡಿದರು. ಮೇಘಾ ಹುಕ್ಕೇರಿ ಹಾಗೂ ಸಾಕ್ಷಿ ಪ್ರಾರ್ಥಿಸಿದರು. ಶಂಕರ ಹಲಗತ್ತಿ ಸ್ವಾಗತಿಸಿದರು. ವಿ.ಜಿ. ಭಟ್ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.