ಸಾರಾಂಶ
ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದಡಿ ಮೇ ೩ರಂದು ಮುರುಡೇಶ್ವರದ ಜನತಾ ವಿದ್ಯಾಲಯದಲ್ಲಿ ಮಹಿಳಾ ಸಮಾವೇಶ ನಡೆಯಲಿದೆ
ಭಟ್ಕಳ: ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದಡಿ ಮೇ ೩ರಂದು ಮುರುಡೇಶ್ವರದ ಜನತಾ ವಿದ್ಯಾಲಯದಲ್ಲಿ ಮಹಿಳಾ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ನೇತ್ರಾವತಿ ಶ್ಯಾನಭಾಗ ಹೇಳಿದರು.ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ನಾಗಯಕ್ಷೆ ಸಭಾಭವನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬಂದು ಪುರುಷರಿಗೆ ಸರಿ ಸಮನಾಗಿ ನಿಲ್ಲುವ ಉದ್ದೇಶದೊಂದಿಗೆ ಮಹಿಳಾ ಸಂಘ ಮಾಡಿಕೊಂಡಿದ್ದೇವೆ. ಮುರುಡೇಶ್ವರದ ಜನತಾ ವಿದ್ಯಾಲಯದಲ್ಲಿ ಮಾ.3ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯ ತನಕ ಈ ಮಹಿಳಾ ಸಮಾವೇಶ ನಡೆಯಲಿದೆ. ಈ ಮಹಿಳಾ ಸಮಾವೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ಮಹಿಳೆಯರಿಗೆ "ಮಹಿಳಾ ಸಮ್ಮಾನ ಕಾಯಕ್ರಮ " ಮಹಿಳಾ ಸಂತೆ, ಕಾರ್ಯಾಗಾರ, ವಸ್ತುಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದರು.ಮಧ್ಯಾಹ್ನ ೧ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು. ಕಾರ್ಯಕ್ರಮವನ್ನು ರಾಜ್ಯ ಮೀನುಗಾರಿಕ ಸಚಿವರಾದ ಮಂಕಾಳ ವೈದ್ಯ ಉದ್ಘಾಟಿಸಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ, ರಾಜ್ಯ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕರ್ನಾಟಕ ರಾಜ್ಯ ಮಾರ್ಕೇಟಿಂಗ ಕನ್ಸಲ್ಟೆಂಟ್ ಅಧ್ಯಕ್ಷರಾದ ಸತೀಶ ಸೈಲ್ ಗೌರವ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ರಾಜ್ಯ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶನ ಗೌಡ ವಹಿಸಲಿದ್ದಾರೆ.
ಸರ್ಕಾರಿ ಆಸ್ಪತ್ರತೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಜಯಶ್ರೀ ಎಂ. ನಾಯ್ಕ, ರಜನಿ ದೇವಾಡಿಗ, ಶೋಭಾ ನಾಯ್ಕ ಇದ್ದರು.