ಜೀವವಿಮಾ ನೌಕರರ ಸಂಘದಿಂದ ಮಹಿಳಾ ದಿನಾಚರಣೆ

| Published : Mar 12 2024, 02:01 AM IST

ಸಾರಾಂಶ

ಜೀವ ವಿಮೆಯಿಂದಾಗುವ ಅನುಕೂಲಗಳ ಕುರಿತು ವಿವರಿಸಿದ ಎಲ್‌ಐಸಿ ಶಾಖಾಧಿಕಾರಿಗಳು, ಬದುಕಿನಲ್ಲಿ ಎದುರಾಗುವ ಅನಿಶ್ಚಿತ ಘಟನೆಗಳು ಮತ್ತು ದಿನಗಳಿಗೆ ಸಮರ್ಪಕ ಮತ್ತು ಸೂಕ್ತ ಹಣಕಾಸು ಯೋಜನೆಗಳು ಮಾತ್ರ ಪರಿಹಾರ ಒದಗಿಸಬಲ್ಲವು.

ಬಳ್ಳಾರಿ: ಎಲ್‌ಐಸಿಯ ಜೀವ ವಿಮಾ ನೌಕರರ ಸಂಘ (ಎಐಐಇಎ ಸಂಯೋಜಿತ) ಬಳ್ಳಾರಿ 2ನೇ ಶಾಖೆಯಿಂದ ಇಲ್ಲಿನ ಕಮೇಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು.

ಇದೇ ವೇಳೆ ಶಾಖೆಯ ಅಧಿಕಾರಿಗಳಾದ ಸಂಪತ್‌ಕುಮಾರ್, ಸಹ ಶಾಖಾಧಿಕಾರಿ ವೆಂಕಟರಾಮುಡು ಹಾಗೂ ವಿಮಾ ನೌಕರರ ಸಂಘದ ಕಾರ್ಯದರ್ಶಿ ಡಿ.ವಿ.ಸೂರ್ಯನಾರಾಯಣ ಮಹಿಳಾ ದಿನಾಚರಣೆಯ ಮಹತ್ವ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಹಾಗೂ ಸಾಧನೆ ಕುರಿತು ತಿಳಿಸಿದರು.ಜೀವ ವಿಮೆಯಿಂದಾಗುವ ಅನುಕೂಲಗಳ ಕುರಿತು ವಿವರಿಸಿದ ಎಲ್‌ಐಸಿ ಶಾಖಾಧಿಕಾರಿಗಳು, ಬದುಕಿನಲ್ಲಿ ಎದುರಾಗುವ ಅನಿಶ್ಚಿತ ಘಟನೆಗಳು ಮತ್ತು ದಿನಗಳಿಗೆ ಸಮರ್ಪಕ ಮತ್ತು ಸೂಕ್ತ ಹಣಕಾಸು ಯೋಜನೆಗಳು ಮಾತ್ರ ಪರಿಹಾರ ಒದಗಿಸಬಲ್ಲವು. ಪ್ರತಿಯೊಂದು ಹಂತದಲ್ಲಿ ಹಣವು ಪ್ರಾಮುಖ್ಯತೆ ಪಡೆಯುತ್ತದೆ. ಭವಿಷ್ಯದ ದಿನಗಳಲ್ಲಿ ಮಕ್ಕಳ ಮದುವೆ, ಶಿಕ್ಷಣ, ಮನೆ, ವಾಹನ ಖರೀದಿ ಹೀಗೆ ನಾನಾ ಹಂತಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಜೀವವಿಮೆಯಲ್ಲಿ ಮಾಡುವ ಉಳಿತಾಯದ ಹಣ ಸಹಾಯವಾಗಬಲ್ಲದು ಎಂದು ಹೇಳಿದರು.

ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಜೀವವಿಮಾ ನೌಕರರ ಸಂಘದಿಂದ 43 ಇಂಚಿನ ಆಂಡ್ರಾಯ್ಡ್ ಫ್ಲಾಟ್ ಟಿವಿಯನ್ನು ಕೊಡುಗೆಯಾಗಿ ನೀಡಲಾಯಿತು.ನಿವೃತ್ತಿಗೊಂಡರೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಆಶಯ ಹೊತ್ತು ನಿತ್ಯವೂ ಶಾಲೆಗೆ ಆಗಮಿಸಿ ಸೇವೆ ಸಲ್ಲಿಸುತ್ತಿರುವ 71 ವರ್ಷದ ನಿವೃತ್ತ ಶಿಕ್ಷಕಿ ಸುಜಾತ ಅವರನ್ನು ಇದೇ ವೇಳೆ ಸನ್ಮಾನಿಸಿ, ಅಭಿನಂದಿಸಲಾಯಿತು. ವಿಮಾ ನೌಕರರ ಸಂಘದ ಖಜಾಂಚಿ ವಿಘ್ನೇಶ್, ಶಾಂತಕುಮಾರಿ, ವಿ.ರವಿಕುಮಾರ್ ಮತ್ತು ಶಾಲೆಯ ಮುಖ್ಯಗುರು ತಿಪ್ಪೇಸ್ವಾಮಿ, ಜೀವವಿಮಾ ಶಾಖೆಯ ಮಹಿಳಾ ಉದ್ಯೋಗಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.