ಬಸವಾದಿ ಶರಣರ ಕಾಲದಲ್ಲೇ ಮಹಿಳಾ ಸಮಾನತೆ ಜಾರಿಗೆ

| Published : Aug 19 2025, 01:00 AM IST

ಸಾರಾಂಶ

ಮಹಿಳೆ ಪುರುಷರೆಂಬ ಭೇದಭಾವ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಮಹಿಳಾ ಸಮಾನತೆ ಮೊಟ್ಟ ಮೊದಲು ಜಾರಿಗೆ ತಂದವರು 12ನೇ ಶತಮಾನದ ಅನುಭವ ಮಂಟಪದ ಬಸವಾದಿ ಶಿವಶರಣರು ಎಂದು ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಸುಧಾ ಹುಚ್ಚಣ್ಣವರ ಹೇಳಿದರು.

ಮುಂಡರಗಿ: ಮಹಿಳೆ ಪುರುಷರೆಂಬ ಭೇದಭಾವ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಮಹಿಳಾ ಸಮಾನತೆ ಮೊಟ್ಟ ಮೊದಲು ಜಾರಿಗೆ ತಂದವರು 12ನೇ ಶತಮಾನದ ಅನುಭವ ಮಂಟಪದ ಬಸವಾದಿ ಶಿವಶರಣರು ಎಂದು ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಸುಧಾ ಹುಚ್ಚಣ್ಣವರ ಹೇಳಿದರು.

ಅವರು ಭಾನುವಾರ ಸಂಜೆ ಪಟ್ಟಣದ ಶೇಖರಾಜ ಹೊಸಮನಿಯವರ ನಿವಾಸದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ‌ ಜರುಗಿದ ಶ್ರಾವಣ ಸಂಜೆ‌ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು. ಅಕ್ಕಮಹಾದೇವಿ ಅನುಭವ ಮಂಟಪಕ್ಕೆ ಬಂದಾಗ ಎಲ್ಲರ ಪ್ರಶ್ನೆಗೆ ಒಳಪಟ್ಟ ದಿಟ್ಟ‌ನಿಲುವನ್ನು ಹೊಂದಿದ್ದರು.

ಕಾಯಕವೇ ಕೈಲಾಸ ಎನ್ನುವ ಬಸವಣ್ಣನವರ ತತ್ವದಲ್ಲಿ ಸತ್ಯಕ್ಕೆ, ನೀಲಮ್ಮ ಆಯ್ದಕ್ಕಿ ಲಕ್ಕಮ್ಮ, ಸೂಳೆ ಸಂಕವ್ಯ ಸೇರಿದಂತೆ 33 ಜನ ಶರಣೆಯರ ಅನುಭವ ಮಂಟಪದಲ್ಲಿ ಇದ್ದರು. 12ನೇ ಶತಮಾನದಲ್ಲಿ ಮಹಿಳೆಯರಿಗೆ ಶರಣರು ಕೊಟ್ಟಿರುವ ಕೊಡುಗೆ ಅಪಾರ. ನಮ್ಮ ಒತ್ತಡಗಳ ಮಧ್ಯದಲ್ಲಿಯೂ ಶರಣರ ವಚನಗಳನ್ನು ಓದಿ‌ ಅರ್ಥ ಮಾಡಿಕೊಳ್ಳಬೇಕು. ವರ್ಣಾಣಾಶ್ರಮ ಪದ್ಧತಿ ಹೋಗಲಾಡಿಸಿ ಎಲ್ಲರೂ‌ ಸಮಾನರೆನ್ನುವುದನ್ನು ಕಲಿಸಿಕೊಟ್ಟವರು. 12ನೇ ಶತಮಾನದ ಶರಣರು. ಆ. 24ರಂದು ಗದುಗಿನಲ್ಲಿ ಜಿಲ್ಲಾ ಎರಡನೇ ಕದಳಿ‌ ಮಹಿಳಾ ಸಮ್ಮೇಳನ ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಕೆ.ಆರ್. ಬೆಲ್ಲದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕುಮಾರ ಜೆ. ಮಾತನಾಡಿ, ನಮ್ಮ ನಾಡಲ್ಲಿ ವಚನ ಚಳುವಳಿ ನಡೆಯದಿದ್ದರೆ ಬೇರೊಂದು ರೂಪ ಪಡೆದುಕೊಳ್ಳುತ್ತಿತ್ತು. ವಚನಕಾರರಲ್ಲಿ ಜಾತಿ ಮತ ಪಂಥಗಳಿರಲಿಲ್ಲ. ಎಲ್ಲರನ್ನೂ ಅಪ್ಪಿ ಒಪ್ಪಿಕೊಂಡಿದ್ದರು. ವಚನಕಾರರ ವಚನಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಸೋತಿದ್ದೇವೆ. ಇತ್ತೀಚಿಗೆ ಬಸವಾದಿ ಶಿವಶರಣರ ವಚನಗಳನ್ನು ಕೇವಲ ಭಾಷಣಕ್ಕಾಗಿ ಸೀಮಿತಗೊಳಿಸುತ್ತಿರುವುದು ವಿಷಾದನೀಯ ಎಂದರು.

ಕಾರ್ಯಕ್ರಮದಲ್ಲಿ ಸೌತ್ ಇಂಡಿಯನ್ ಅಚೀವರ್ಸ್ ಅವಾರ್ಡ್ ಪುರಸ್ಕೃತೆ ವೀಣಾ ಪಾಟೀಲ ಅವರಿಗೆ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು ಪ್ರಶಸ್ತಿಗಳು ನಮ್ಮ ಜವಾಬ್ದಾರಿಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ. ಕಳೆದ 15 ವರ್ಷಗಳಿಂದ ಮುಂಡರಗಿ ನಾಡಿನ ಜನತೆ ನನ್ನೆಲ್ಲ ಕಾರ್ಯಗಳನ್ನು ಮೆಚ್ಚಿಕೊಳ್ಳುತ್ತಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅವರಿಗೆ ನಾನು ಸದಾ ಚಿರಋಣಿಯಾಗಿರುವೆ ಎಂದರು.

ತಾಲೂಕಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷತೆ ಸೀತಾ ಬಸಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಯಂಕಮ್ಮ ದೊಡ್ಡಮನಿ‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶೋಭಾ ಮೇಟಿ, ಪ್ರತಿಭಾ ಹೊಸಮನಿ, ಈರಪ್ಪ ಮಡಿವಾಳರ, ಬಸವಂತಪ್ಪ ಹೊಸಮನಿ, ಶೇಖರಾಜ ಹೊಸಮನಿ, ದೃವಕುಮಾರ ಹೊಸಮನಿ ಉಪಸ್ಥಿತರಿದ್ದರು. ಎಸ್.ಆರ್.ಬಸಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ಪಾಟೀಲ ನಿರೂಪಿಸಿದರು.