ಸಾರಾಂಶ
ಅಂತಾರಾಷ್ಟ್ರೀಯ ಮಹಿಳಾ ದಿನ
ಕನ್ನಡಪ್ರಭ ವಾರ್ತೆ ಅರಸೀಕೆರೆಎಲ್ಲಾ ರಂಗದಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ತನ್ನ ಕುಟುಂಬ ನಿರ್ವಹಣೆಗೆ ಹೆಣಗಾಡುತ್ತಿರುವುದು ದುರದೃಷ್ಟಕರ. ಆಕೆ ಎಂದಿಗೂ ದುಶ್ಚಟಗಳಿಗೆ ಬಲಿಯಾಗದೆ ಕಷ್ಟ ಸಹಿಷ್ಣುವಾಗಿ ಸಂಸಾರ ನಿರ್ವಹಿಸುತ್ತಿರುವುದು ಶ್ಲಾಘನೀಯ. ಗಡಿಯಾರದ ರೀತಿಯಲ್ಲಿ ದುಡಿಯುವ ಮಹಿಳೆ ಮಹಾ ಇಳೆ (ಭೂಮಿ) ಯೇ ಸರಿ ಎಂದು ಕಾಲೇಜಿನ ಪ್ರಾಂಶುಪಾಲ ಹಾಗೂ ಹಾಸನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಎಸ್ ನಾರಾಯಣ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ ಹಾಗೂ ಅರಸೀಕೆರೆ ಸೋದರಿ ನಿವೇದಿತಾ ಪ್ರತಿಷ್ಠಾನ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್ಥಿಕ ಸ್ವಾವಲಂಬನೆಯಿಂದ ಮಾತ್ರ ಹೆಣ್ಣು ಸುಭದ್ರವಾಗಿ ಬದುಕಲು ಸಾಧ್ಯವಾಗುತ್ತದೆ. ಸರ್ವ ರಂಗಗಳಲ್ಲೂ ಹೆಣ್ಣಿನ ಪ್ರವೇಶ ದೇಶದ ಆರ್ಥಿಕ ಸುಭದ್ರತೆಗೆ ಕಾರಣವಾಗುತ್ತದೆ ಎಂದು ಹೇಳಿದರು.ಮಹಿಳಾ ದೌರ್ಜನ್ಯ ವಿರೋಧಿ ಸಮಿತಿಯ ಸಂಚಾಲಕರಾದ ಪ್ರೊ.ಉಷಾ, ‘ನಾನು ಮಹಿಳೆಯಾಗಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ನನಗೆ ಹೆಮ್ಮೆ. ಮಹಿಳಾ ದಿನಾಚರಣೆಯು ಎಲ್ಲಾ ವರ್ಗದ ಮಹಿಳೆಯರು ಸಂಕಷ್ಟಗಳ ಸರಮಾಲೆಯಿಂದ ಹೊರಗೆ ಬರಲು ಸಹಕರಿಯಾಗಲಿ. ಮಹಿಳೆಯರು ಕುಳಿತು ಕೊಳೆಯದೆ ದುಡಿದು ಸವೆಯಲಿ’ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನದ ಸಮಾಜ ಸೇವಕಿ ಕಾಂಚನ ಮಾಲ, ಮಹಿಳೆ ಎಂದಿಗೂ ಅಬಲೆ ಅಲ್ಲ ಸಬಲೆ, ಸುಸ್ಥಿರ ಸಮಾಜ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರ. ಮನುಷ್ಯ ವಿನಾಶದೆಡೆಗೆ ಸಾಗದೆ ವಿಕಾಸದೆಡೆಗೆ ಸಾಗಬೇಕು. ಸರಳವಾದ ಬದುಕಿನಿಂದ ಸುಖಮಯ ಜೀವನ ಸಾಧ್ಯ ಎಂದು ಅಭಿಪ್ರಾಯಪಟ್ಟರು.ನಿವೇದಿತಾ ಪ್ರತಿಷ್ಠಾನದ ರಾಜ್ಯ ಸಂಚಾಲಕರಾದ ಶ್ರೀನಿಧಿ ದೇಶಪಾಂಡೆ ಸೋದರಿ ನಿವೇದಿತಾ ಸೇರಿದಂತೆ ಈ ದೇಶದ ಮಹಿಳಾ ಸಾಧಕಿಯರ ಸಾಧನೆಯ ಕಿರು ಪರಿಚಯವನ್ನು ಮಾಡಿಕೊಟ್ಟರು.
ಕಾಲೇಜಿನ ವತಿಯಿಂದ ಗೌರವಕ್ಕೆ ಪಾತ್ರರಾದ ಭರತನಾಟ್ಯ ಕಲಾವಿದೆ ಪ್ರತಿಭಾ ಮಿಥುನ್, ಈ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಪರಂಪರೆಯಿಂದ ಹೆಣ್ಣು ಮಕ್ಕಳು ನಿಭಾಯಿಸಿಕೊಂಡು ಬರುತ್ತಿದ್ದಾರೆ. ಇಂದಿನ ಯುವತಿಯರು ಈ ನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ರವಾನಿಸುವ ಜವಾಬ್ದಾರಿಯನ್ನ ಹೊರಬೇಕಿದೆ. ತಾಳ್ಮೆ ಮತ್ತು ನೈತಿಕತೆ ಪ್ರತಿಯೊಬ್ಬರ ಆಸ್ತಿ ಆಗಬೇಕು ಎಂದು ಕಿವಿಮಾತು ಹೇಳಿದರು.ನಿವೇದಿತಾ ಪ್ರತಿಷ್ಠಾನದ ತಾಲೂಕು ಅಧ್ಯಕ್ಷೆ ಶಾರದಾ ಜವಾಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಹರೀಶ್ ಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಸುನಿಲ್, ಡಾ.ಭಾಸ್ಕರ್, ಪ್ರೊ.ಸುಬ್ರಮಣಿ, ರತ್ನಮ್ಮ, ಪ್ರತಿಭಾ ಭಾಗವಹಿಸಿದ್ದರು.ಅರಸೀಕೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳಾ ದೌರ್ಜನ್ಯ ವಿರೋಧಿ ಸಮಿತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಹಾಸನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಎಸ್ ನಾರಾಯಣ್ ಮಾತನಾಡಿದರು.