ಕಾರಟಗಿ: ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನೀತಿ ಖಂಡಿಸಿ ಇಲ್ಲಿನ ಬಿಜೆಪಿ ಮಹಿಳಾ ಕಾರ್ಯಕರ್ತರು ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ಕಾರ್ಯಕರ್ತರು, ವಿವಿಧ ಮಹಿಳಾ ಮೋರ್ಚಾಗಳು ಮತ್ತು ಮಹಿಳಾ ಒಕ್ಕೂಟ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.ಇಲ್ಲಿನ ಡಾ. ರಾಜಕುಮಾರ ರಂಗಮಂದಿರದ ಬಳಿ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಸದಸ್ಯೆಯರು, ಮಂಡಲ ಪದಾಧಿಕಾರಿಗಳು, ಮೋರ್ಚಾ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಸೇರಿ, ಪಾದಯಾತ್ರೆ ಮೂಲಕ ಮುಖ್ಯರಸ್ತೆ ಮಾರ್ಗವಾಗಿ ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ಘೋಷಣೆ ಕೂಗುತ್ತ, ನವಲಿ ವೃತ್ತಕ್ಕೆ ಬಂದು ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಲೀಲಾ ಅಯೋಧ್ಯಾ ಮಾತನಾಡಿ, ಮಹಿಳೆಯರಿಗೆ ಮೀಸಲಾತಿ ಜಾರಿಯ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಹಿಂದಿನಿಂದಲೂ ವಿರೋಧ ಮಾಡಿಕೊಂಡು ಬಂದಿದ್ದಾರೆ. ೨೦೨೩ರಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸ್ ಆಗಿದ್ದರೂ ಜಾರಿ ಮಾಡಲು ಕಾಂಗ್ರೆಸ್ ಅಡ್ಡಗಾಲು ಹಾಕಿರುವುದು ಖಂಡನೀಯ ಎಂದರು.ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ವಿಧೇಯಕಕ್ಕೆ ಕಾಂಗ್ರೆಸ್ ವಿರೋಧ ಅವರ ಸೋಲಿನ ಭಯ ತೋರಿಸುತ್ತದೆ. ಮಹಿಳೆಯರು ರಾಜಕೀಯವಾಗಿ ಬೆಳೆಯಲು ಅವಕಾಶ ಕಲ್ಪಿಸುವ ಮಸೂದೆಗೆ ವಿರುದ್ಧವಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಲೋಕಸಭೆಯಲ್ಲಿ ಮತ ಚಲಾಯಿಸುವ ಮೂಲಕ ಮಹಿಳಾ ವಿರೋಧಿ ಧೋರಣೆ ಬಹಿರಂಗಪಡಿಸಿವೆ. ಕಾಂಗ್ರೆಸ್‌ಗೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರತ್ನಕುಮಾರಿ ಮಾತನಾಡಿ, ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿವೆ. ಸ್ವಾತಂತ್ರ್ಯ ಬಂದು ೭ ದಶಕಗಳು ಕಳೆದರೂ ಸಮಾನತೆಗೆ, ಮೀಸಲಾತಿಗೆ ಮಹಿಳೆಯರು ಅಂಗಲಾಚುವ ಪರಿಸ್ಥಿತಿ ಇರುವುದು ದುರಂತ. ದೇಶದ ಜನಸಂಖ್ಯೆಯ ಅರ್ಧದಷ್ಟಿದ್ದರೂ ಮಹಿಳೆಯರು ರಾಜಕೀಯ ಹಕ್ಕುಗಳಿಗೆ ಹೋರಾಟ ಮಾಡಬೇಕಾಗಿದೆ. ಅಂಬೇಡ್ಕರ್ ಮಹಿಳಾ ಪರವಾದ ಆಶಯಗಳನ್ನು ಕಾಂಗ್ರೆಸ್ ಮಣ್ಣುಪಾಲು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಮೋರ್ಚಾದ ಪಾರ್ವತಿ ಗುರಿಕಾರ, ಮಂಜುನಾಥ ಮಸ್ಕಿ ಮತ್ತು ಬಸವರಾಜ ಎತ್ತಿನಮನಿ ಮಾತನಾಡಿದರು.
ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಢೇಸ್ಗೂರು, ಸುರೇಶ ದಢೇಸ್ಗೂರು, ಪುರಸಭೆ ಸದಸ್ಯರಾದ ಲಕ್ಷ್ಮೀದೇವಿ ಎತ್ತಿನಮನಿ, ಮೋನಿಕಾ ಧನಂಜಯ್ ಕುಮಾರ್, ಬಸವರಾಜ್ ಕೊಪ್ಪದ್, ಮುಖಂಡರಾದ ಉಮೇಶ್ ಭಂಗಿ, ವಿಕ್ರಂ ಮೇಟಿ, ಮಂಜುನಾಥ ಶಹಪುರ, ಎಸ್‌ಟಿ ಮೋರ್ಚಾ ಅಧ್ಯಕ್ಷ ದೇವರಾಜ್ ನಾಯಕ್, ಭೋಜರಾಜ್ ರಾಮನಗರ, ಹುಲಿಗೆಮ್ಮ ನಾಯಕ್, ಆಶಾ ಶಾಪುರ ಇದ್ದರು.