ಕೆಐಎಡಿಬಿ ರೈತರಿಂದ ಕಡಿಮೆ ಬೆಲೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಉದ್ದೇಶಿತ ಕೈಗಾರಿಕೆ ಸ್ಥಾಪನೆ ಮಾಡದೇ ನಂತರ ಜಿಂದಾಲ್ ಕಂಪನಿಗೆ ಮಾರಾಟ ಮಾಡಿದೆ

ಕಂಪ್ಲಿ: ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಮಿಯನ್ನು ಜಿಂದಾಲ್ ಕಂಪನಿಗೆ ಮಾರಾಟ ಮಾಡಿರುವುದನ್ನು ವಿರೋಧಿಸಿ ಕುಡುತಿನಿ ಭಾಗದ ರೈತರು ಹಾಗೂ ಹೋರಾಟಗಾರರು ನಡೆಸಿದ ಪ್ರತಿಭಟನೆ ಸೋಮವಾರ ತೀವ್ರ ಸ್ವರೂಪ ಪಡೆದಿದ್ದು, 180ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ಕಂಪ್ಲಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಬಂಧನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ಕೆಐಎಡಿಬಿ ರೈತರಿಂದ ಕಡಿಮೆ ಬೆಲೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಉದ್ದೇಶಿತ ಕೈಗಾರಿಕೆ ಸ್ಥಾಪನೆ ಮಾಡದೇ ನಂತರ ಜಿಂದಾಲ್ ಕಂಪನಿಗೆ ಮಾರಾಟ ಮಾಡಿದೆ ಎಂದು ಆರೋಪಿಸಿದರು.

“ನಮ್ಮ ಭೂಮಿಯನ್ನು ನಮಗೆ ವಾಪಸ್‌ ನೀಡಬೇಕು " ಎಂಬ ಆಗ್ರಹದೊಂದಿಗೆ ಹೋರಾಟ ನಡೆಸುತ್ತಿದ್ದವರನ್ನು ಬಂಧಿಸಿರುವುದು ದೌರ್ಜನ್ಯ ಎಂದು ಖಂಡಿಸಿದರು.

ಕುಡುತಿನಿ ಸುತ್ತಮುತ್ತ ಜಾರಿಗೊಳಿಸಿರುವ ಸೆಕ್ಷನ್ 144ನ್ನು ತಕ್ಷಣ ವಾಪಸ್‌ ಪಡೆಯಬೇಕು. ರೈತರ ಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಟಾಚಿ, ಜೆಸಿಬಿ ಯಂತ್ರಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ರೈತರ ಸಮಸ್ಯೆಗಳನ್ನು ಚರ್ಚಿಸಲು ತಕ್ಷಣ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕುಡುತಿನಿ ರೈತ ಮುಖಂಡರಾದ ಎಚ್. ರಮೇಶ್, ಯು. ಬಸವರಾಜ, ಖಾದರ್ ಬಾಷಾ ಸೇರಿದಂತೆ ಹಲವರು ಮಾತನಾಡಿ, ಭೂಮಿಗೆ ಹೊಸ ದರ ನಿಗದಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆ ಈಡೇರದೆ, ರೈತರನ್ನು ಬಂಧಿಸಿರುವುದು ವಿಷಾದನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರು ಇದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಂಧಿತ ರೈತರು ಪೊಲೀಸ್ ಠಾಣೆಯಲ್ಲಿಯೇ ಊಟವನ್ನು ನಿರಾಕರಿಸಿ ಪ್ರತಿಭಟನೆ ಮುಂದುವರಿಸಿದ್ದು, ಕೆಲವರು ನಿತ್ರಾಣರಾಗಿದ್ದಾರೆ. ಹೊಸಪೇಟೆಯ ಬಸಪ್ಪ ಮತ್ತು ಪುಂಡೆಪಲ್ಲೆ ಲಕ್ಷ್ಮಿ ಅವರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕಂಪ್ಲಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಇಂಟೆಲಿಜೆನ್ಸ್ ಡಿವೈಎಸ್‌ಪಿ ಸುರೇಶ್ ತಳವಾರ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯದ ವಿಚಾರಣೆ ನಡೆಸಿದರು.

ಇನ್ನೊಂದೆಡೆ ಶಾಸಕ ಜೆ.ಎನ್. ಗಣೇಶ್ ಆಸ್ಪತ್ರೆಗೆ ಧಾವಿಸಿ ಸಂತ್ರಸ್ತರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾತನಾಡಿದ ಅವರು, ರೈತರು ಸುಮಾರು 4 ಕಿ.ಮೀ. ಪಾದಯಾತ್ರೆ ನಡೆಸಿದ ಪರಿಣಾಮ ನಿತ್ರಾಣಗೊಂಡಿದ್ದಾರೆ. ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಜಿಂದಾಲ್ ಕಂಪನಿಯಿಂದ ಜಿಲ್ಲೆಗೆ ಅಥವಾ ರಾಜ್ಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನವಾಗಿಲ್ಲ. ಸ್ಥಳೀಯರಿಗೆ ಉನ್ನತ ಉದ್ಯೋಗಾವಕಾಶಗಳು ಸಿಕ್ಕಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. 2011ರಲ್ಲಿ ಎಕರೆಗೆ ₹8 ಲಕ್ಷಕ್ಕೆ ಖರೀದಿಸಿದ ಭೂಮಿಯನ್ನು 2021ರ ವೇಳೆಗೆ ಒಂದು ಕೋಟಿ ರು.ಗೂ ಅಧಿಕ ದರದಲ್ಲಿ ವ್ಯವಹರಿಸಿರುವುದಾಗಿ ಹೇಳಲಾಗುತ್ತಿದೆ. ರೈತರ ಮಕ್ಕಳಿಗೆ ಉದ್ಯೋಗ ನೀಡದಿರುವುದು ಹಾಗೂ ಕಡಿಮೆ ದರಕ್ಕೆ ಭೂಮಿ ನೀಡಬೇಕಾದ ಅನಿವಾರ್ಯತೆ ರೈತರ ಅಳಲಿಗೆ ಕಾರಣವಾಗಿದೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಜಿಂದಾಲ್ ಕಂಪನಿ ಹಾಗೂ ರೈತರ ನಡುವೆ ಸಮನ್ವಯದಿಂದ ಸಮಸ್ಯೆ ಇತ್ಯರ್ಥಗೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಹೋರಾಟ ಮುಂದುವರಿಯುವ ಸಾಧ್ಯತೆ ಇದೆ.