ಭಾಷೆ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ: ಐಚಂಡ ರಶ್ಮಿ ಮೇದಪ್ಪ

| Published : Mar 28 2025, 12:32 AM IST

ಭಾಷೆ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ: ಐಚಂಡ ರಶ್ಮಿ ಮೇದಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಭಾಷೆ ಉಳಿಸಿ ಬೆಳೆಸುವ ಕೆಲಸದಲ್ಲಿ ಮಹಿಳೆಯರ ಪಾತ್ರ ಪ್ರಮುಖದ್ದಾಗಿದೆ ಎಂದು ಸಾಹಿತಿ ಐಚಂಡ ರಶ್ಮಿ ಮೇದಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಭಾಷೆ ಉಳಿಸಿ ಬೆಳೆಸುವ ಕೆಲಸದಲ್ಲಿ ಮಹಿಳೆಯರ ಪಾತ್ರ ಪ್ರಮುಖದ್ದಾಗಿದೆ ಎಂದು ಸಾಹಿತಿ ಐಚಂಡ ರಶ್ಮಿ ಮೇದಪ್ಪ ಹೇಳಿದರು.

ಅವರು ಕುಶಾಲನಗರ ಕೊಡವ ಸಮಾಜದಲ್ಲಿ ಕೊಡವ ಸಮಾಜ ಮತ್ತು ಪೊಮ್ಮಕ್ಕಡ ಕೂಟ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಭಾಷೆ, ಸಂಸ್ಕೃತಿ ಜೊತೆ ಜೊತೆಯಾಗಿ ಸಾಗಬೇಕು, ಕೊಡವ ಭಾಷೆ ಸ್ಥಾನಮಾನ ನಶಿಸದಂತೆ ಎಚ್ಚರಿಕೆ ವಹಿಸಬೇಕು, ಭಾಷೆ ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು, ತಾಯಿ ಭಾಷೆ ಉಳಿವು ಅಗತ್ಯವಾಗಿದೆ. ಆಂಗ್ಲ ಭಾಷೆ ವ್ಯಾಮೋಹ ಅತಿಯಾಗಬಾರದು. ಕೊಡವ ಭಾಷೆ ಬಳಕೆ ಪ್ರತಿನಿತ್ಯ ವ್ಯವಹಾರದಲ್ಲಿ ಬಳಸುವಂತಾಗಬೇಕು ಎಂದರು.

ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ, ಭಾಷೆ, ಸಂಪ್ರದಾಯದ ಬಗ್ಗೆ ಅರಿವು ಮೂಡಿಸುವಂತ ಕೆಲಸ ನಿರಂತರವಾಗಿ ಆಗಬೇಕು. ಮಹಿಳೆಯರು ಕೀಳರಿಮೆ ತೊರೆದು ಸ್ವಾವಲಂಬಿ ಬದುಕು ಕಾಣುವಂತಾಗಬೇಕು. ಆರ್ಥಿಕ ಬೆಳವಣಿಗೆ ಕಾಣುವ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಪಾತ್ರ ವಹಿಸುವ ಜೊತೆಗೆ ಸಮರ್ಥ ಜವಾಬ್ದಾರಿ ನಿಭಾಯಿಸಬೇಕು ಎಂದು ಹೇಳಿದರು.

ಮಹಿಳಾ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಮಹಿಳೆಯರಿಗೆ ಹಗ್ಗ ಜಗ್ಗಾಟ, ಬಾಂಬ್ ಇನ್ ದ ಸಿಟಿ, ಬಾಸ್ಕೆಟ್‌ಗೆ ಬಾಲ್ ಹಾಕುವುದು ಮತ್ತು ಕುಟುಂಬದ ಹೆಸರು ಹೇಳುವುದು ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ನಡೆಯಿತು.

ಮಹಿಳಾ ಸಾಧಕರಾದ ಬಾಚರಣಿಯಂಡ ರಾಣು ಅಪ್ಪಣ್ಣ, ಪಾಸುರ ಇಂದಿರಾ ಮುತ್ತಣ್ಣ, ಐಮುಡಿಯಂಡ ಶೈಲ ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು.

ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ವಾಂಚೀರ ಮನು ನಂಜುಂಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಐಲಪಂಡ ಸಂಜು ಬೆಳ್ಳಿಯಪ್ಪ, ಖಜಾಂಚಿ ಬೊಳ್ಳಚಂಡ ಸನ್ನಿ ಮುತ್ತಣ್ಣ ಮತ್ತು ಸಮಾಜದ ನಿರ್ದೇಶಕರು ಇದ್ದರು.