ಸಾರಾಂಶ
ತುಮಕೂರು : ಮುಂದಿನ ದಿನಗಳಲ್ಲಿ ದೇವರೇ ಬಂದು ಹೇಳಿದರೂ ಲೋಕಸಭೆಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತುಮಕೂರು ಜಿಲ್ಲಾಭಿವೃದ್ಧಿ ವಿಷಯದ ಕುರಿತು ನಗರದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮುಂದಿನ ಲೋಕಸಭೆಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ತುಮಕೂರು ಜಿಲ್ಲೆಯ ಅಭಿವೃದ್ಧಿಗೆ ನಾನು ಮುಂದೆಯೂ ಶ್ರಮಿಸುತ್ತೇನೆ. ಆದರೆ, ತುಮಕೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ತುಮಕೂರು-ಬೆಂಗಳೂರು 4 ಪಥದ ರೈಲ್ವೆ ಮಾರ್ಗಕ್ಕೆ ಸರ್ವೇ ಆಯ್ತು, ಡಿಪಿಆರ್ ಶುರು ಮಾಡಿಸಿದ್ದೇನೆ. ಇನ್ನೊಂದು 50 ವರ್ಷಕ್ಕೆ ತೊಂದರೆಯಾಗಬಾರದು. ನಾನು ಇನ್ನು 50 ವರ್ಷ ಇರ್ತೀನೇನಪ್ಪ. ಇದೆಲ್ಲಾ ಅಭಿವೃದ್ಧಿ ನಿಮಗಾಗಿ. ದೇವರೇ ಬಂದು ಮತ್ತೆ ಚುನಾವಣೆಗೆ ನಿಲ್ಲು ಅಂದ್ರೂ ಕೇಳಲ್ಲ. ನನ್ನ ಭಾವನೆ ಹಾಗಿದೆ ಎಂದು ಹೇಳುವ ಮೂಲಕ ಭವಿಷ್ಯದಲ್ಲಿ ತುಮಕೂರು ಕ್ಷೆತ್ರದಿಂದ ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮುನ್ಸೂಚನೆ ನೀಡಿದ್ದಾರೆ.
ಯಾರನ್ನೋ ಹೊಗಳಲು ಬಂದಿಲ್ಲ:
ಅಧಿಕಾರದಲ್ಲಿ ಇದ್ದಾಗ ನಮ್ಮದೊಂದು ಹೆಜ್ಜೆ ಗುರುತು ಬಿಟ್ಟು ಹೋಗಬೇಕು ಎಂದುಕೊಂಡಿದ್ದೇನೆ. ಇದು ನನ್ನ ಆಸೆ ಆಗಿದೆ. ಅಲ್ಲದೆ, ತುಮಕೂರು ಜಿಲ್ಲೆಗೆ ಇನ್ನು ಹೆಚ್ಚು ರೈಲ್ವೆ ಯೋಜನೆಗಳನ್ನು ತರುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳು ಬರಲಿವೆ. ನಾನು ರಾಜಕೀಯ ಮಾಡಿಕೊಂಡು, ಯಾರನ್ನೋ ಹೊಗಳಿಕೊಂಡು ಹೋಗಲು ರಾಜಕೀಯಕ್ಕೆ ಬಂದಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ 2 ಸೋಲು:
ಈ ಮೊದಲು ವಿ.ಸೋಮಣ್ಣ ಅವರು ಬೆಂಗಳೂರಿನ ಗೋವಿಂದರಾಜಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಆದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಮಣ್ಣ ಅವರಿಗೆ ಚಾಮರಾಜನಗರ ಮತ್ತು ವರುಣಾ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿತ್ತು. ಆಗ ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣ ಸೋಲು ಕಂಡಿದ್ದರು. ಬಳಿಕ 2024ರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದುಕೊಂಡು ಸೋಮಣ್ಣ ಗೆಲುವು ಸಾಧಿಸಿದರು. ಸದ್ಯ, ರೈಲ್ವೆ ರಾಜ್ಯ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.