‘ದಾಸರಹಳ್ಳಿ ಸಂಭ್ರಮ’ಕ್ಕೆ ಅದ್ಧೂರಿ ತೆರೆ

| N/A | Published : Aug 25 2025, 02:00 AM IST

ಸಾರಾಂಶ

ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಯೋಗದಲ್ಲಿ ಬಾಗಲಗುಂಟೆಯ ಎಂಇಐ ಬಡಾವಣೆಯ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೈದಾನದಲ್ಲಿ ಆ.22 ರಿಂದ ಆಯೋಜಿಸಿದ್ದ ಮೂರು ದಿನಗಳ ‘ದಾಸರಹಳ್ಳಿ ಸಂಭ್ರಮ’ ಕಾರ್ಯಕ್ರಮಕ್ಕೆ ಭಾನುವಾರ ಅದ್ಧೂರಿ ತೆರೆ ಬಿತ್ತು.

  ಪೀಣ್ಯ ದಾಸರಹಳ್ಳಿ‌ :  ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಯೋಗದಲ್ಲಿ ಬಾಗಲಗುಂಟೆಯ ಎಂಇಐ ಬಡಾವಣೆಯ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೈದಾನದಲ್ಲಿ ಆ.22 ರಿಂದ ಆಯೋಜಿಸಿದ್ದ ಮೂರು ದಿನಗಳ ‘ದಾಸರಹಳ್ಳಿ ಸಂಭ್ರಮ’ ಕಾರ್ಯಕ್ರಮಕ್ಕೆ ಭಾನುವಾರ ಅದ್ಧೂರಿ ತೆರೆ ಬಿತ್ತು.

ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಹಾಗೂ ಸೂರಜ್ ಫೌಂಡೇಷನ್ ಸಹಕಾರದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊನೆಯ ದಿನವಾದ ಭಾನುವಾರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಾರಾಂತ್ಯದ ಹಿನ್ನೆಲೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಸಂಭ್ರಮಿಸಿದರು.

ಭಾನುವಾರ ಬೆಳಗ್ಗೆಯಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳಿಗಾಗಿ ಮುದ್ದು ಮಗು ಮತ್ತು ವೇಷಭೂಷಣ ಸ್ಪರ್ಧೆ, ಬೆಂಕಿ ರಹಿತ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿದವರ ಸಂಖ್ಯೆ ಹೆಚ್ಚಾಗಿತ್ತು. ಮಧ್ಯಾಹ್ನದ ಅಡುಗೆ ಫಿನಾಲೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಹಿಳೆಯರು ಜಯದ ನಗೆ ಬೀರಿದರು. ಬಳಿಕ ನಡೆದ ಗಣೇಶ ಥೀಮ್‌ನಡಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡು ಚಿತ್ರ ರಚಿಸಿದರು. ಎಲ್ಲ ಸ್ಪರ್ಧೆಗಳ ವಿಜೇತರು ಹಾಗೂ ದಾಸರಹಳ್ಳಿಯ ಸಾಧಕರಿಗೆ ಸಂಜೆ ಸನ್ಮಾನಿಸಲಾಯಿತು.

ಅಡುಗೆ ಮಹಾರಾಣಿ ಸ್ಪರ್ಧೆಯ ತೀರ್ಪುಗಾರರಾಗಿ ಆಡುಗೆ ತರಬೇತುದಾರರಾದ ಆಶಾ ಸೋಮನಾಥ್ ಹಾಗೂ ಸೂರಜ್ ಫೌಂಡೇಷನ್ ಸಂಸ್ಥಾಪಕಿ ಅರ್.ಸುಜಾತ ಮುನಿರಾಜು ಆಗಮಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಎಸ್.ಮುನಿರಾಜು, ‘ದಾಸರಹಳ್ಳಿ ಸಂಭ್ರಮ’ ಕಾರ್ಯಕ್ರಮದಲ್ಲಿ ಕ್ಷೇತ್ರದ ಸಾವಿರಾರು ಜನ ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು. ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿಬಂದಿದ್ದು ಹೃದಯ ತುಂಬಿ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ನಿಂದ ಶಾಸಕ ಎಸ್.ಮುನಿರಾಜು ಹಾಗೂ ಸೂರಜ್ ಫೌಂಡೇಷನ್ ಸಂಸ್ಥಾಪಕಿ ಸುಜಾತಾ ಮುನಿರಾಜು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ವಿಜಯ್ ಕುಮಾರ್, ಅಮೃತ, ಇವೆಂಟ್ ಮ್ಯಾನೇಜ್ಮೆಂಟ್‌ನ ಹರಿಪ್ರಸಾದ್, ಅರವಿಂದ್ ಶೆಟ್ಟಿ ಮತ್ತಿತರರು ಹಾಜರಿದ್ದರು.

ಮನಸೆಳೆದ ನೃತ್ಯ

ಇಂಡಿಯನ್ ಫೋಕ್ ಮ್ಯೂಸಿಕ್ ಬ್ಯಾಂಡ್ ಜಂಭೆ ಝಲಕ್ ಬಾಲು ಹಾಗೂ ತಂಡದವರು ನೀಡಿದ ವಾದ್ಯ ವಾದನಕ್ಕೆ ಪ್ರೇಕ್ಷಕರು ಮನಸೋತರು. ಸೂರಜ್ ಫೌಂಡೇಷನ್ ಸಂಸ್ಥಾಪಕಿ ಆರ್.ಸುಜಾತ ಮುನಿರಾಜು ಹಾಗೂ ಚಿಕ್ಕಬಾಣವಾರದ ಭಾಗ್ಯಮ್ಮ ತಂಡ ಅದ್ಭುತವಾದ ನೃತ್ಯ ಪ್ರದರ್ಶಿಸಿತು. ವಾರಾಂತ್ಯದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಪುಡ್ ಕೋರ್ಟ್‌ನಲ್ಲಿನ ದೇಸಿ ಖಾದ್ಯಗಳಾದ ದೋಸೆ, ಪುಳಿಯೊಗರೆ, ಕರದಂಟು, ಮಿರ್ಚಿ ಬಜ್ಜಿಗಳನ್ನು ಸವಿಯುವ ಜೊತೆಗೆ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದರು.

‘ಲಕ್ಷ್ಮೀ’ ಅಡುಗೆ ಮಹಾರಾಣಿ

ದಾಸರಹಳ್ಳಿ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಅಡುಗೆ ಮಹಾರಾಣಿ ಸ್ಪರ್ಧೆಯಲ್ಲಿ ಲಕ್ಷ್ಮಿ ಅವರು ಮೊದಲನೇ ಬಹುಮಾನಕ್ಕೆ ಭಾಜನರಾದರು. ಮೂರು ದಿನವೂ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ ಆಯೋಜಿಸಿದ್ದು ಭಾನುವಾರ ಸಂಜೆ ವಿಜೇತರನ್ನು ಘೋಷಿಸಲಾಯಿತು. ದ್ವಿತೀಯ ಬಹುಮಾನವನ್ನು ವೀಣಾ, ತೃತೀಯ ಬಹುಮಾನವನ್ನು ನಾಗರತ್ನಮ್ಮ ಗೌಡ ಪಡೆದರು.

Read more Articles on