ಜೈಲಿನಲ್ಲೇ ಕೈದಿಗಳ ಮಾರಾಮಾರಿ

| N/A | Published : Aug 25 2025, 02:00 AM IST

ಸಾರಾಂಶ

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬನ ಮೇಲೆ ಎಂಟು ಮಂದಿ ವಿಚಾರಣಾಧೀನ ಕೈದಿಗಳ ಗ್ಯಾಂಗ್‌ ಹಲ್ಲೆ ನಡೆಸಿದ ಆರೋಪದಡಿ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು :  ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬನ ಮೇಲೆ ಎಂಟು ಮಂದಿ ವಿಚಾರಣಾಧೀನ ಕೈದಿಗಳ ಗ್ಯಾಂಗ್‌ ಹಲ್ಲೆ ನಡೆಸಿದ ಆರೋಪದಡಿ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಕಾರಾಗೃಹದ ಭದ್ರತಾ ವಿಭಾಗ-2ರ ಕೊಠಡಿ ಸಂಖ್ಯೆ 6ರಲ್ಲಿ ಆ.22ರಂದು ಮಧ್ಯಾಹ್ನ ಸುಮಾರು 2.15ಕ್ಕೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಯಿಂದ ವಿಚಾರಣಾಧೀನ ಕೈದಿ ಅನಿಲ್‌ ಕುಮಾರ್‌ಗೆ ಗಾಯವಾಗಿದ್ದು, ಕೇಂದ್ರ ಕಾರಾಗೃಹದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅನಿಲ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಸಂಬಂಧ ಕೇಂದ್ರ ಕಾರಾಗೃಹದ ಅಧೀಕ್ಷಕ ಇಮಾಮ್‌ಸಾಬ್‌ ಮ್ಯಾಗೇರ್‌ ನೀಡಿದ ದೂರಿನ ಮೇರೆಗೆ ವಿಚಾರಣಾಧೀನ ಕೈದಿಗಳಾದ ಭರತ್‌ ಕುಮಾರ್‌ ಅಲಿಯಾಸ್‌ ಕೆಟಿಎಂ ಭರತ್, ಸುಮಂತ್‌ ಕುಮಾರ್‌ ಅಲಿಯಾಸ್‌ ಪಕಾಲಿ, ಮಣಿಕಂಠ, ಮಹಮ್ಮದ್‌ ಯಾಸೀನ್‌, ಸೂರಿ, ಅರುಣ್‌ ಕುಮಾರ್‌, ಕಾರ್ತಿಕ್‌ ಹಾಗೂ ಭರತ್‌ ಕುಮಾರ್‌ ಅಲಿಯಾಸ್‌ ಹುಲಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಬ್ಬನ ಮೇಲೆ 8 ಮಂದಿ ಹಲ್ಲೆ!

ವಿಚಾರಣಾಧೀನ ಕೈದಿಗಳಾದ ಭರತ್‌ ಹಾಗೂ ಆತನ ಎಂಟು ಮಂದಿ ಸಹಚರರು ಪ್ರಕರಣವೊಂದರ ವಿಚಾರಣೆ ಸಂಬಂಧ ವಿಡಿಯೋ ಕಾನ್ಫರೆನ್ಸ್‌ಗೆ ಹಾಜರಾಗಲು ತೆರಳುವಾಗ ವಿಚಾರಣಾಧೀನ ಕೈದಿ ಅನಿಲ್‌ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಚೂಪಾದ ವಸ್ತುವಿನಿಂದ ಅನಿಲ್‌ ಮೇಲೆ ಹಲ್ಲೆ ಮಾಡಿದ ಪರಿಣಾಮ ಆತ ಗಾಯಗೊಂಡಿದ್ದಾನೆ. ಬಳಿಕ ಜೈಲು ಸಿಬ್ಬಂದಿ ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡಿದ್ದ ಅನಿಲ್‌ನನ್ನು ಕೇಂದ್ರ ಕಾರಾಗೃಹದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸಹ ಕೈದಿ ಮೇಲೆ ಹಲ್ಲೆ ಹಾಗೂ ಜೈಲು ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಭರತ್‌ ಹಾಗೂ ಆತನ ಸಹಚರರ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read more Articles on