ದರ್ಶನ್ ಈಗ ವಿಚಾರಣಾಧೀನ ಕೈದಿ 7314

| N/A | Published : Aug 16 2025, 10:59 AM IST

renukaswamy murder case supreme court cancelled bail of actor darshan thoogudeepa

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ ಬೆನ್ನಲ್ಲೇ ನಟ ದರ್ಶನ್ ತೂಗುದೀಪ, ಅವರ ಪ್ರಿಯತಮೆ ಸೇರಿ ಏಳು ಆರೋಪಿಗಳಿಗೆ ವಿಚಾರಣಾಧೀನ ಕೈದಿಗಳ ಸಂಖ್ಯೆಯನ್ನು ಕಾರಾಗೃಹದ ಅಧಿಕಾರಿಗಳು ನೀಡಿದ್ದಾರೆ.

  ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ ಬೆನ್ನಲ್ಲೇ ನಟ ದರ್ಶನ್ ತೂಗುದೀಪ, ಅವರ ಪ್ರಿಯತಮೆ ಸೇರಿ ಏಳು ಆರೋಪಿಗಳಿಗೆ ವಿಚಾರಣಾಧೀನ ಕೈದಿಗಳ ಸಂಖ್ಯೆಯನ್ನು ಕಾರಾಗೃಹದ ಅಧಿಕಾರಿಗಳು ನೀಡಿದ್ದಾರೆ.

ಕೊಲೆ ಪ್ರಕರಣದ ಒಂದನೇ ಆರೋಪಿಯಾಗಿರುವ ಪವಿತ್ರಾಗೌಡ (7313), ದರ್ಶನ್ (7314), ನಾಗರಾಜ್‌ (7315), ಲಕ್ಷ್ಮಣ್ (7316), ಪ್ರದೂಷ್ (7317) ಅವರಿಗೆ ಗುರುವಾರ ರಾತ್ರಿ ಯುಟಿ (ವಿಚಾರಣಾಧೀನ ಕೈದಿ) ಸಂಖ್ಯೆಯನ್ನು ಕಾರಾಗೃಹ ಅಧಿಕಾರಿಗಳು ಕೊಟ್ಟಿದ್ದಾರೆ. ಅದೇ ರೀತಿ ಇದೇ ಪ್ರಕರಣದಲ್ಲಿ ಶುಕ್ರವಾರ ಜೈಲಿಗೆ ಬಂದ ದರ್ಶನ್ ಅವರ ಸಹಚರರಾದ ಚಿತ್ರದುರ್ಗದ ಅನುಕುಮಾರ್ (7322) ಹಾಗೂ ಜಗದೀಶ್‌ಗೆ (7323) ಸಹ ಯುಟಿ ನಂಬರ್ ಸಿಕ್ಕಿದೆ.

ಎಂಟು ತಿಂಗಳ ಹಿಂದೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದ ದರ್ಶನ್ ಹಾಗೂ ಅವರ ಸಹಚರರು ಜಾಮೀನು ಪಡೆದು ಹೊರ ಬಂದಿದ್ದರು. ಆದರೆ ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿದ ಬೆನ್ನಲ್ಲೇ ಮತ್ತೆ ದರ್ಶನ್ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿ ಐದು ಮಂದಿಯನ್ನು ಗುರುವಾರ ರಾತ್ರಿ ಬಂಧಿಸಿ ವಿಜಯನಗರ ಉಪ ವಿಭಾಗದ ಪೊಲೀಸರು ಜೈಲಿಗೆ ಕಳುಹಿಸಿದ್ದರು.

ವಿಶೇಷ ಭದ್ರತಾ ವಿಭಾಗದಲ್ಲಿ ದರ್ಶನ್:

ಕಾರಾಗೃಹದ ಕ್ವಾರಂಟೈನ್‌ ವಿಭಾಗದ ಆಡ್ಮಿಷನ್‌ ಬ್ಯಾರಕ್‌ನ ಸೆಲ್‌ನಲ್ಲಿ ದರ್ಶನ್ ಅವರನ್ನು ಬಂಧಿಸಿಡಲಾಗಿದ್ದು, ಕಾನೂನುಬಾಹಿರವಾಗಿ ಅವರಿಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗದಂತೆ ಕಾರಾಗೃಹದ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ. ವಿಶೇಷ ಸೌಲಭ್ಯ ನೀಡಿದರೆ ತಕ್ಷಣವೇ ಕಾರಾಗೃಹ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಜಾಮೀನು ರದ್ದುಪಡಿಸಿ ನೀಡಿದ ಆದೇಶದಲ್ಲಿ ಸ್ಪಷ್ಟವಾಗಿ ಸುಪ್ರೀಂ ಕೋರ್ಟ್‌ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕಾರಾಗೃಹದ ಅಧಿಕಾರಿಗಳು, ದರ್ಶನ್ ಅವರ ಭೇಟಿಗೆ ಸಹ ಇತರ ಕೈದಿಗಳಿಗೆ ನಿರ್ಬಂಧ ವಿಧಿಸಿದ್ದಾರೆ. ಅಲ್ಲದೆ ಅವರಿಗೆ ಸ್ವತಂತ್ರವಾಗಿ ಜೈಲಿನಲ್ಲಿ ಓಡಾಟಕ್ಕೂ ಬ್ರೇಕ್ ಬಿದ್ದಿದೆ ಎನ್ನಲಾಗಿದೆ.

ಕಳೆದ ಬಾರಿ ಜೈಲಿನಲ್ಲಿ ರೌಡಿಗಳಾದ ವಿಲ್ಸನ್‌ ಗಾರ್ಡನ್ ನಾಗ ಹಾಗೂ ಶ್ರೀನಿವಾಸ್ ಜತೆ ದರ್ಶನ್ ಕಾಣಿಸಿಕೊಂಡಿದ್ದು ಭಾರೀ ವಿವಾದವಾಗಿತ್ತು. ಹೀಗಾಗಿ ದರ್ಶನ್ ಮೇಲೆ ಸೆರೆಮನೆಯಲ್ಲೂ ಕಣ್ಗಾವಲು ಬಿಗಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಇಬ್ಬರು ಜೈಲು ಪಾಲು:

ಜಾಮೀನು ರದ್ದು ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ದರ್ಶನ್ ಅವರ ಸಹಚರರಾದ ಜಗದೀಶ್ ಹಾಗೂ ಅನುಕುಮಾರ್ ಶುಕ್ರವಾರ ಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಚಿತ್ರದುರ್ಗದಲ್ಲಿ ಈ ಇಬ್ಬರನ್ನು ಗುರುವಾರ ಮಧ್ಯಾಹ್ನ ಪೊಲೀಸರು ಬಂಧಿಸಿದ್ದರು. ಆದರೆ ಅಲ್ಲಿಂದ ನಗರಕ್ಕೆ ತಂದು ಆರೋಪಿಗಳ ಬಂಧನ ಪ್ರಕ್ರಿಯೆ ಮುಗಿಸಲು ವಿಳಂಬವಾಯಿತು. ಹೀಗಾಗಿ ಶುಕ್ರವಾರ ಬೆಳಗ್ಗೆ ನ್ಯಾಯಾಧೀಶರ ಮನೆಯಲ್ಲೇ ಜಗದೀಶ್ ಹಾಗೂ ಅನುಕುಮಾರ್‌ನನ್ನು ಪೊಲೀಸರು ಹಾಜರುಪಡಿಸಿದರು. ಬಳಿಕ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶಿಸಿತು.

ಜೈಲೂಟ ಸವಿದ ದರ್ಶನ್‌:

ಜೈಲಿನಲ್ಲಿ ಶುಕ್ರವಾರ ದರ್ಶನ್ ಅವರು ಉಪಹಾರ ಹಾಗೂ ಊಟ ಸೇವಿಸಿದ್ದಾರೆ. ದರ್ಶನ್ ಅವರಿಗೆ ಮನೆ ಊಟ ನೀಡಲು ನ್ಯಾಯಾಲಯ ಅನುಮತಿ ನೀಡಿಲ್ಲ. ಹೀಗಾಗಿ ಜೈಲಿನಲ್ಲಿ ನೀಡುವ ಆಹಾರವನ್ನೇ ಅವರು ಸೇವಿಸಬೇಕಿದೆ. ಅದರಂತೆ ಬೆಳಗ್ಗೆ ಉಪಾಹಾರಕ್ಕೆ ಉಪ್ಪಿಟ್ಟು, ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಾಂಬಾರ್ ಅನ್ನು ದರ್ಶನ್ ಅವರಿಗೂ ಸಹ ನೀಡಲಾಗಿತ್ತು. ಇನ್ನು ಸ್ವಾತಂತ್ರ್ಯೋತ್ಸವ ಅಂಗವಾಗಿ ಜೈಲಿನಲ್ಲಿ ಎಲ್ಲರಿಗೂ ಲಾಡು ವಿತರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣಗೆರೆ ವಿನಯ್‌, ಪವನ್‌ ಸೇರಿ

ಉಳಿದವರ ವಿರುದ್ಧವೂ ಮೇಲ್ಮನವಿ?

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿರುವ ದರ್ಶನ್‌ ಅವರ ಇತರೆ ಐವರು ಸಹಚರರಿಗೂ ಇದೀಗ ನಡುಕ ಶುರುವಾಗಿದೆ. ಪಟ್ಟಣೆಗೆರೆ ವಿನಯ್‌, ಪವಿತ್ರಾಗೌಡಳ ಸಹಾಯಕ ಪವನ್‌ ಹಾಗೂ ರಾಘವೇಂದ್ರ ಸೇರಿ ಐವರಿಗೆ ಕೆಳಹಂತದ ನ್ಯಾಯಾಲಯ ನೀಡಿರುವ ಜಾಮೀನು ರದ್ದುಕೋರಿ ಮೇಲ್ಮನವಿ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Read more Articles on