Won't tolerate trouble caused to farmers: MLA Kandakur

- ಜೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಪರಿವರ್ತಕಗಳ ಸಮಸ್ಯೆ ಕುರಿತ ಸಂವಾದ

- ಜೆಸ್ಕಾಂ ಅಧಿಕಾರಿಗಳ ಬೆವರಿಳಿಸಿದ ಶಾಸಕ‌ ಶರಣಗೌಡ ಕಂದಕೂರ

--

ಕನ್ನಡಪ್ರಭ ವಾರ್ತೆ ಯಾದಗಿರಿ

ರೈತರಿಗೆ ತೊಂದರೆಯಾದ್ರೆ ಸುಮ್ಮನಿರಲ್ಲ. ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ಅನ್ನದಾತರು ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಜೆಸ್ಕಾಂ ಅಧಿಕಾರಿಗಳು ಪದೇ ಪದೇ ತೊಂದರೆ‌ ಕೊಟ್ಟರೆ ಯಾವ ಕಾರಣಕ್ಕೂ ನಾನು ಸಹಿಸುವುದಿಲ್ಲ ಎಂದು ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಸೋಮವಾರ ಜೆಸ್ಕಾಂ ಕಚೇರಿ ಸಭಾಂಗಣದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಹಾಗೂ ಮತ್ತಿತರ ಮುಖಂಡರ ನಿಯೋಗದೊಂದಿಗೆ ವಿದ್ಯುತ್ ಪರಿವರ್ತಕಗಳಲ್ಲಿನ ತೊಂದರೆ ಕುರಿತಾದ ಸಂವಾದದಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಶಾಸಕರು, ವಿದ್ಯುತ್ ಪರಿವರ್ತಕ ಪದೇಪದೇ ಸುಡಲು ಕಾರಣನವೇನು? ನಾನು ನಿರಂತರ ಪ್ರಯತ್ನಿಸಿದ ಮೇಲೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.) ಅವರು ಗುರಮಠಕಲ್ ಪಟ್ಟಣಕ್ಕೆ ದುರಸ್ತಿ ಕೇಂದ್ರ ಮಂಜೂರು ಮಾಡಿದ್ದಾರೆ. ಅದನ್ನು ಯಾದಗಿರಿಯಲ್ಲಿ ಆರಂಭಿಸುವ ಮಾತುಗಳು ಕೇಳಿ ಬಂದಿವೆ. ಹಾಗೇನಾದರೂ ಆದರೆ, ನಾನೇ ಖುದ್ದಾಗಿ ಬಂದ್ ಮಾಡಿಸುತ್ತೇನೆ ಎಂದು ಕಿಡಿ ಕಾರಿದರು.

ವಿದ್ಯುತ್ ಪರಿವರ್ತಕದ ದುರಸ್ತಿ ಕೇಂದ್ರ ಗುರಮಠಕಲ್ ನಲ್ಲೇ ಇದ್ದರೆ ಕ್ಷೇತ್ರದ ಜನತೆ ವಿನಾ ಕಾರಣ ಯಾದಗಿರಿ ಬರುವುದು ತಪ್ಪುತ್ತದೆ ಎಂಬ ಉದ್ದೇಶದಿಂದ ಅಲ್ಲೇ ಆರಂಭಿಸುವ ಉದ್ದೇಶ ನಮ್ಮದು.

ಆದರೆ, ಯಾದಗಿರಿಯಲ್ಲಿ ಆರಂಭಿಸಿದರೆ ಪರಸ್ಥಿತಿ ಬೇರೆಯೇ ಆಗಲಿದೆ.‌ ಇನ್ನೂ ಜೆಸ್ಕಾಂ ಜಾಗೃತಿದಳದವರು ಉದ್ದೇಶಪೂರ್ವಕ ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಮೊದಲೇ ಮಳೆ ಇಲ್ಲದೆ ರೈತರು ವಿಷ ಕುಡಿಯುವ ಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಮಾನಸಿಕವಾಗಿ ಹಿಂಸಿಸಬೇಡಿ ಎಂದು ನಿರ್ದೇಶನ ನೀಡಿದರು.

ಕಂದಕೂರ ಮತ್ತು ಕೌಳೂರು ಗ್ರಾಮಗಳಲ್ಲಿ ಹೊಸ ಸಬ್ ಸ್ಟೇಷನ್ ಸ್ಥಾಪನೆಗೆ ಸ್ಥಳ ಗುರುತಿಸಲಾಗಿದ್ದು, ಅಕ್ಟೋಬರ್ ನಲ್ಲಿ ಟೆಂಡರ್ ಪೂರ್ಣಗೊಳಿಸಲಾಗುವುದು. ಚೆಪೇಟ್ಲಾದಲ್ಲಿ ಹೊಸ ಕೇಂದ್ರ ಸ್ಥಾಪನೆಗೆ ಜಮೀನು ಹುಡುಕುವ ಮೂಲಕ ಸಾಧ್ಯವಾದಷ್ಟು ಬೇಗ ಕೆಲಸ ಆರಂಭಿಸಿ.‌ ಇದರಿಂದ ಗಾಜರಕೋಟ ಸುತ್ತಮುತ್ತಲಿನ ಗ್ರಾಮಗಳ ವಿದ್ಯುತ್ ಹೊರೆ ಕಡಿಮೆಯಾಗುತ್ತದೆ ಎಂದು ಶಾಸಕ ಕಂದಕೂರ ಸಲಹೆ ನೀಡಿದರು.

ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ದುಕಾನ್ ಮಾತನಾಡಿ, ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಕೊಡಲಾಗುತ್ತಿದ್ದು, ಗಾಜರಕೋಟ ಹೊಸ ಸಬ್ ಸ್ಟೇಷನ್ ಅವಶ್ಯಕತೆ ಇದೆ. ಇನ್ನೂ ಶಾಸಕ ಶರಣಗೌಡರ ಪ್ರಯತ್ನದಿಂದ 50 ಹೊಸ ವಿದ್ಯುತ್ ಪರಿವರ್ತಕ ಬಂದಿವೆ. ಅವಶ್ಯಕತೆಗೆ ಅನುಗುಣವಾಗಿ ಅವುಗಳನ್ನು ಬಳಕೆ‌ ಮಾಡಿಕೊಳ್ಳುತ್ತಿದ್ದೇವೆ ಎಂದರು. ಪ್ರಸಕ್ತ ಸಾಲಿನಲ್ಲಿ 460 ಪರಿವರ್ತಕಗಳು (ಟಿಸಿ) ಸುಟ್ಟಿವೆ. ಬರಗಾಲ ಇರುವುದರಿಂದ ತೊಂದರೆಯಾಗಿದೆ. ಸಿಬ್ಬಂದಿ ಕೊರತೆ ಇದೆ. 70 ಗ್ರಾಮಗಳಿಗೆ ಒಬ್ಬರೇ ಅಧಿಕಾರಿಗಳು ಇದ್ದಾರೆ ಎಂದು ಗಮನಕ್ಕೆ ತಂದರು.

ಈ ವೇಳೆ ಜಿಲ್ಲಾ ವಕ್ತಾರ ಮಲ್ಲನಗೌಡ ಹಳಿಮನಿ ಕೌಳೂರು, ಅಜಯರಡ್ಡಿ ಯಲ್ಹೇರಿ, ಬ್ಲಾಕ್ ಅಧ್ಯಕ್ಷ ಪ್ರಕಾಶ ನೀರಟ್ಟಿ, ಪ್ರಮುಖರಾದ ಬಸವಂತ್ರಾಯಗೌಡ ಸೈದಾಪುರ, ರಾಮಣ್ಣ ಕೋಟಗೇರಾ,ವಿಶ್ವನಾಥ ಸಾಹುಕಾರ ಹೊನಗೇರಾ, ವಿಶ್ವನಾಥರಡ್ಡಿ ಗೊಂದಡಗಿ, ಹಂಪಯ್ಯಾ ಅಲ್ಲಿಪುರ, ಶರಣು ಆವಂಟಿ, ಮಲ್ಲಿಕಾರ್ಜುನ ಅರುಣಿ ಗಾಜರಕೋಟ, ಗುರು ಅಲ್ಲಿಪುರ ತಾಂಡಾ, ಡಿ.ತಾಯಪ್ಪ ಬದ್ದೆಪಲ್ಲಿ, ಪರಮರಡ್ಡಿ ಕಂದಕೂರ, ಸೋಮನಗೌಡ ಬೆಳಗೇರಾ, ಶಿವಯೋಗಿ ಯರಗೋಳ, ಮಲ್ಲರಡ್ಡಿಗೌಡ ಹತ್ತಿಕುಣಿ, ರವಿ ಪೊಲೀಸ್ ಪಾಟೀಲ್, ಗುರುನಾಥರಡ್ಡಿ ಸೈದಾಪುರ, ಹಣಮಂತ ಅಕ್ಕಿ ಬಂದಳ್ಳಿ, ಪರಮೇಶ್ ವಾರದ್ ಇದ್ದರು.

....ಬಾಕ್ಸ್...

ರೈತರಿಗೆ ತೊಂದರೆಯಾದ್ರೆ ಸುಮ್ಮನಿರಲ್ಲ: ಕಂದಕೂರ ಆರು ತಾಸು ವಿದ್ಯುತ್ ನಿರಂತರ ಕೊಡುತ್ತೇನೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದೀರಿ. ನಾನು ಸಹ ಅದನ್ನು ಮನ್ನಿಸುವೆ. ಆದರೆ, ಇದರಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದರೂ ಗುರಮಠಕಲ್ ಕ್ಷೇತ್ರದಲ್ಲಿ ಬರುವ ಎಲ್ಲ ಸಬ್ ಸ್ಟೇಷನ್ ಗೆ ನಾನೇ ಖುದ್ದಾಗಿ ಲಾಕೌಟ್ ಮಾಡಿಸಬೇಕಾಗುತ್ತದೆ. ರೈತರಿಗೆ ತೊಂದರೆಯಾದರೆ ಯಾವ ಕಾರಣಕ್ಕೂ ನಾನು ಸಹಿಸೋಲ್ಲ. ಕ್ಷೇತ್ರದ ಕೊಂಕಲ್ ಗ್ರಾಮದ ಸಮಸ್ಯೆಯ ಬಗ್ಗೆ ನೀವೇ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದ ಶಾಸಕರು, ಕ್ಷೇತ್ರದ ಜನರು ಬದುಕು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅದಕ್ಕಾಗಿ ಖುದ್ದಾಗಿ ನಾನೇ ನಿಮ್ಮ ಕಚೇರಿಗೆ ಬಂದು ನಿಮ್ಮ ಜತೆ ಸಮಾಲೋಚನೆ ಮಾಡುತ್ತಿದ್ದೇನೆ ಎಂದರು. ರೈತರ ಎರಡನೇ ಬೆಳೆ ಮುಗಿಯುವ ವರೆಗೂ 6 ತಾಸು ವಿದ್ಯುತ್‌ ಮೂರು ಫೇಸ್ ನಿರಂತರ ಕೊಡಲೇಬೇಕು ಎಂದು ಖಡಕ್ ಆಗಿ ಸೂಚಿಸಿದ ಶಾಸಕರು, ಧೂಳಪ್ಪ, ಮಹೆಬೂಬ್, ಮೋಸೀನ್ ಈ ಅಧಿಕಾರಿಗಳು ರೈತರ ಫೋನ್ ಕರೆ ಸ್ವೀಕಾರ ಮಾಡುವುದಿಲ್ಲ. ಅಲ್ಲದೆ, ಅಧಿಕಾರಿಗಳು ಜನರ ಜತೆ ಕೀಳಾಗಿ ಮಾತನಾಡುತ್ತಾರೆ. ಇದು ಸರಿಯಲ್ಲ. ರೈತರೊಂದಿಗೆ ಜೆಸ್ಕಾಂ ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಿ.‌ ಇಲ್ಲವಾದಲ್ಲಿ ನಾನೇ ದುರಸ್ತಿ ಮಾಡಬೇಕಾಗುತ್ತದೆ. ರೈತರ ಶಾಪ ತಟ್ಟಿದರೆ ಯಾರೂ ಉದ್ಧಾರಾವಾಗುವುದಿಲ್ಲ. ಕನಿಷ್ಠ ಸರಿಯಾಗಿ ಮಾತನಾಡುವುದಾದರೂ ಕಲಿಯಿರಿ ಎಂದು ಪಾಠ ಮಾಡಿದರು.

..ಬಾಕ್ಸ್:2..

ಟ್ರಾನ್ಸಫಾರ್ಮರ್‌ ಆಯಿಲ್‌ಗೆ ಹಣ ಕೇಳುವ ಅಧಿಕಾರಿಗಳು !

ವಡಗೇರಾ ತಾಲೂಕಿನ ಕೋನಳ್ಳಿ ಗ್ರಾಮದಲ್ಲಿನ ಟಿಸಿಗೆ ಆಯಿಲ್ ಹಾಕಿಸಲು ಹಣ ಕೇಳುತ್ತಾರೆ ಎಂದರೆ ಏನು ಹೇಳಬೇಕು ಎಂದು ಬೇಸರ ವ್ಯಕ್ತಪಡಿಸಿದ ಶಾಸಕ ಕಂದಕೂರ, ಸೆಕ್ಷನ್ ಅಧಿಕಾರಿಗಳು ಫೋನ್ ಪೇ ಮೂಲಕ ಹಣ ಪಡೆದುಕೊಂಡ ಬಗ್ಗೆ ದಾಖಲೆ ಸಹಿತ ಬಂದಿದ್ದೇನೆ. ಸರ್ಕಾರದಲ್ಲಿನ ಮಂತ್ರಿಗಳ ಜತೆ ಜಗಳವಾಡಿ ಟಿಸಿ ತರಿಸಿಕೊಳ್ಳುತ್ತಿದ್ದೇನೆ. ಅವು ರೈತರಿಗೆ ಕೊಡಲು ನಿಮ್ಮದೇನು ತಕರಾರು. ಕೆಲಸ ಮಾಡುತ್ತೀರಾ ಅಥವಾ ಮನೆಗೆ ಕಳಿಸಬೇಕಾ ಹೇಳಿ ಎಂದರು.

ಜೆಸ್ಕಾಂ ಅಧಿಕಾರಿಗಳಿಗೆ ಸಮಸ್ಯೆಗಳಿವೆ ಅದನ್ನು ನಾನು ಸಹ ಒಪ್ಪುತ್ತೇನೆ. ಆದರೆ, ನಿಮ್ಮ ಇತಿಮಿತಿಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡಿ. ವಿಪಕ್ಷದಲ್ಲಿರುವ ನಾವು ಬರಗಾಲ ಘೋಷಣೆ ಮಾಡಬೇಕಾದರೂ ಜಗಳವಾಡಬೇಕು. ಟಿಸಿ ತರಬೇಕಾದರೂ ಜಗಳವಾಡಬೇಕು. ಇಷ್ಟು ಪ್ರಯತ್ನ ಮಾಡಿದ ಮೇಲೆ‌ ನಿಮ್ಮ ನಿರ್ಲಕ್ಷ್ಯದಿಂದ ಕ್ಷೇತ್ರದ ಜನರಿಂದ ನಾವು ಅನ್ನಿಸಿಕೊಳ್ಳಬೇಕಾ? ಎಂದು ಖಾರವಾಗಿ ಪ್ರಶ್ನಿಸಿದರು.

-

....ಕೋಟ್‌ ..

ಇದು ಸರಿಯಲ್ಲ. ರೈತರೊಂದಿಗೆ ಜೆಸ್ಕಾಂ ಅಧಿಕಾರಿಗಳು ಮಾನವೀಯತೆಯಿಂದ ವರ್ತಿಸಿ.‌ ಇಲ್ಲವಾದಲ್ಲಿ ನಾನೇ ದುರಸ್ತಿ ಮಾಡಬೇಕಾಗುತ್ತದೆ. ರೈತರ ಶಾಪ ತಟ್ಟಿದರೆ ಯಾರೂ ಉದ್ಧಾರಾವಾಗುವುದಿಲ್ಲ. ಕನಿಷ್ಠ ಸರಿಯಾಗಿ ಮಾತನಾಡುವುದಾದರೂ ಕಲಿಯಿರಿ.

- ಶರಣಗೌಡ ಕಂದಕೂರ, ಶಾಸಕರು, ಗುರುಮಠಕಲ್‌.

(5ವೈಡಿಆರ್2)

ಫೋಟೊ:5ವೈಡಿಆರ್1

ಯಾದಗಿರಿಯ ಜೆಸ್ಕಾಂ ಕಚೇರಿ ಸಭಾಂಗಣದಲ್ಲಿ ಜೆಡಿಎಸ್‌ ಪಕ್ಷದ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಹಾಗೂ ಮತ್ತಿತರ ಮುಖಂಡರ ನಿಯೋಗದೊಂದಿಗೆ ವಿದ್ಯುತ್ ಪರಿವರ್ತಕಗಳಲ್ಲಿನ ತೊಂದರೆ ಕುರಿತಾದ ಸಂವಾದದಲ್ಲಿ ಶಾಸಕ ಕಂದಕೂರ ಜೆಸ್ಕಾಂ ಅಧಿಕಾರಿಗಳ ಬೆವರಿಳಿಸಿದರು.