ಸಾರಾಂಶ
ಕುಷ್ಟಗಿ:ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ನಿರ್ಮಿಸುತ್ತಿರುವ ಉಣ್ಣೆ ನಿಗಮದ ಕಟ್ಟಡ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ದಲಿತ ಮುಖಂಡ ನೀಲಪ್ಪ ಕಡಿ ಒತ್ತಾಯಿಸಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಎದುರು ಉಣ್ಣೆ ನಿಗಮದ ಕಟ್ಟಡ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಬೇಕು ಹಾಗೂ ಸರ್ಕಾರಿ ಜಮೀನು ಸುಪರ್ದಿಗೆ ತೆಗೆದುಕೊಳ್ಳುವಂತೆ ಒತ್ತಾಯಿಸಿ ದಲಿತ, ರೈತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಿಲೋಗಲ್ ಸೀಮಾದ ಸರ್ವೇ ನಂಬರ 57 ಮತ್ತು 25ರ ಗೈರಾಣು ಜಮೀನಿನಲ್ಲಿ ಮಾದಿಗ ಸಮಾಜದ 30 ಕುಟುಂಬ ಮತ್ತು ಉಪ್ಪಾರ ಸಮಾಜದ 6 ಕುಟುಂಬಗಳು 40 ವರ್ಷಗಳಿಂದ ಉಳುಮೆ ಮಾಡಿಕೊಂಡು ಉಪಜೀವನ ನಡೆಸುತ್ತಿವೆ. ಈ ಜಮೀನಲ್ಲಿ ಉಣ್ಣೆ ನಿಗಮದ ಕಟ್ಟಡ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಿಸುತ್ತಿದ್ದು ಮಾದಿಗ, ಉಪ್ಪಾರ ಸಮಾಜ ಹಾಗೂ ದೇವದಾಸಿ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ಇದೀಗ ಬೆಳೆದಿರುವ ಬೆಳೆ ನಾಶ ಮಾಡುವ ಹುನ್ನಾರ ನಡೆಸಿದ್ದಾರೆ ಮಾದಿಗ ಸಮಾಜವನ್ನೇ ಉದ್ದೇಶ ಪೂರ್ವಕವಾಗಿ ಗುರಿಯಾಗಿಸಿ, ನಮ್ಮನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿದರು.ಯುವಮುಖಂಡ ಛತ್ರಪ್ಪ ಮಾದರ ಮಾತನಾಡಿ, ಕೇವಲ ದಲಿತ ಸಮುದಾಯವನ್ನು ಗುರಿಯಾಗಿಸಿಕೊಂಡು ಅಧಿಕಾರಿಗಳು ಈ ಕೃತ್ಯ ನಡೆಸಿದ್ದಾರೆ. ನೀಲೋಗಲ್ ಮತ್ತು ಅಚನೂರ ಸೀಮಾದಲ್ಲಿ ಒಟ್ಟು 200 ಎಕರೆ ಗೈರಾಣು ಜಮೀನಿದ್ದು ಸರ್ಕಾರದ ಸುಪರ್ದಿಗೆ ಪಡೆಯಬೇಕು. ಅಚನೂರ ಸೀಮಾದಲ್ಲಿ ಉಳುಮೆಗೆ ಯೋಗ್ಯವಿಲ್ಲದ ಜಮೀನು ಇರುವುದರಿಂದ ಅಲ್ಲಿ ಕುರಿ ಉಣ್ಣೆ ನಿಗಮದ ಕಟ್ಟಡ ಮತ್ತು ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ಆರಂಭಿಸಲು ಜಿಲ್ಲಾಧಿಕಾರಿ ಆದೇಶಸಿಬೇಕೇಂದು ಒತ್ತಾಯಿಸಿದರು.
ಈಗ ನಡೆಸುತ್ತಿರುವ ಕಾಮಗಾರಿ ಮುಂದುವರಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಅನ್ಯಾಯವಾದ ರೈತರಿಗೆ ಉಳುಮೆ ಮಾಡಲು ಅವಕಾಶ ನೀಡುವ ಜತೆಗೆ ಪಟ್ಟಾ ಜಮೀನು ಎಂದು ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು.ಈ ವೇಳೆ ಹುಸೇನಪ್ಪ ಹಿರೇಮನಿ, ನಾಗರಾಜ ನಂದಾಪೂರ, ಹನಮಂತ ಪೂಜಾರ, ಶ್ರೀಕಾಂತ ಕೊರಡಕೇರಾ, ಮಹಾಂತೇಶ ಬಾದಿಮನಾಳ, ನಿರುಪಾದಿ ಕಲಕೇರಿ, ಯಮನೂರ ಮೇಲಿನಮನಿ ಸೇರಿದಂತೆ ಅನೇಕರು ಇದ್ದರು.