ಸಾರಾಂಶ
-ಕಡೂರು ತಾಲೂಕಿನ ಸಿಂಗಟಗೆರೆ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಕಡೂರು
ಒಬ್ಬರ ಜೀವನದ ಅನುಭವದ ಮಾತುಗಳು ಇನ್ನೊಬ್ಬರ ಬದುಕಿಗೆ ದಾರಿ ದೀಪವಾಗಲು ಕಾರಣವಾಗುತ್ತದೆ ಎಂದು ಸಹಾಯಕ ಪ್ರಾಧ್ಯಾಪಕ ಎಸ್.ಎನ್.ಆನಂದ್ ಹೇಳಿದರು.ತಾಲೂಕಿನ ಸಿಂಗಟಗೆರೆ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಓದಿ, ತಿಳಿದು ಹೇಳುವವರಿಗಿಂತ ಅನುಭವಿಗಳಿಂದ ಬರುವ ಮಾತುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಅವರ ಮಾತುಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುವ ಮೂಲಕ ಸಾಧಕರನ್ನು ಹುಟ್ಟಿ ಹಾಕುವ ಕೆಲಸವನ್ನು ಎಲ್ಲ ಸಮಾಜಗಳು ಮಾಡಬೇಕು. ಮಠ ಮಾನ್ಯಗಳು ಮತ್ತು ಸಮಾಜದ ಸಂಘಟನೆಗಳು ಸ್ಥಳೀಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಿಸುವ ಕೆಲಸ ಮಾಡಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿ ತಾಲೂಕು ಕೇಂದ್ರದಲ್ಲಿ ವಿದ್ಯಾರ್ಥಿ ನಿಲಯ ಮತ್ತು ಪ್ರತಿ ಗ್ರಾಮದಲ್ಲಿ ಗ್ರಂಥಾಲಯ ತೆರೆಯಬೇಕು ಸಲಹೆ ನೀಡಿದರು.
ಉಪನ್ಯಾಸಕ ಬಿ.ಎಸ್.ಅಶೋಕ್ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಅಡಗಿರುತ್ತದೆ. ಆದರೆ ಆ ಪ್ರತಿಭೆಯನ್ನು ಕೊನೆಯವರೆಗೆ ಮುಂದುವರಿಸಿಕೊಂಡಿ ಹೋಗುವುದು ಸವಾಲಿನ ಕೆಲಸ. ಸಾಧನೆ ಹಾದಿಯಲ್ಲಿ ಸಾಗುವಾಗ ಅನೇಕ ಅಡೆತಡೆಗಳು ಬರುತ್ತವೆ. ಆದರೆ ಅವೆಲ್ಲವನ್ನು ಮೀರಿ ಬೆಳೆದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಸಮಾಜದ ನೂರಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.
ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಬೀರೂರು ರಂಭಾಪುರಿ ಶಾಖಾ ಮಠದ ಶ್ರೀರುದ್ರಮುನಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಕೆ.ಜೆ.ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಹೋಬಳಿ ಅಧ್ಯಕ್ಷ ಎಚ್.ಕೆ.ಜಗದೀಶ್, ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ಧರ್ಮದರ್ಶಿ ಬಿ.ಕೆ.ನಾಗರಾಜಪ್ಪ, ಟಿ.ಕೆ.ಜಗದೀಶ್, ಕೆ.ಎನ್.ಜಯಣ್ಣ, ಹೊಸೂರು ಪುಟ್ಟರಾಜು, ಅರೇಹಳ್ಳಿ ಮಲ್ಲಿಕಾರ್ಜುನ್, ತುರುವನಹಳ್ಳಿ ರೇಣುಕಪ್ಪ, ಬಿದರೆ ಜಗದೀಶ್, ಕೆ.ಎನ್.ಬೊಮ್ಮಣ್ಣ, ಎಸ್.ಜಿ.ರಾಮಪ್ಪ, ಬಿ.ಪಿ.ದೇವಾನಂದ್, ಕಲ್ಲಪ್ಪ,ಬಿ.ಟಿ.ಪ್ರೇಮ್ ಕುಮಾರ್, ಎಸ್.ಮಲ್ಲಿಕಾರ್ಜುನ್, ಎಂ.ಆರ್.ಪ್ರಕಾಶ್, ಕೆ.ವಿರೂಪಾಕ್ಷಪ್ಪ, ಬಿ.ಜೆ.ಆನಂದಮೂರ್ತಿ ಮತ್ತಿತರರು ಇದ್ದರು.