ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆವಿಪಕ್ಷದ ಬಗ್ಗೆ ಟೀಕೆ ಮಾಡಿ ಪ್ರಯೋಜನವಿಲ್ಲ, ಬದಲಾಗಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ನನ್ನ ಕೆಲಸ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ತಾಲೂಕಿನ ಮೂಖಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಪಂ ನೂತನ ಕಟ್ಟಡ (ಸ್ವರಾಜ್ ಭವನ) ಉದ್ಘಾಟಿಸಿ ಮಾತನಾಡಿ ವಿಪಕ್ಷದವರ ಟೀಕೆ ಮಾಡಿ ಏನು ಪ್ರಯೋಜನವಿಲ್ಲ,ಇನ್ನೂಳಿದ ನಾಲ್ಕು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗು ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುವೆ ಎಂದರು.ರಾಜ್ಯ ಸರ್ಕಾರ ಬಂದ ಬಳಿಕ ಐದು ಗ್ಯಾರಂಟಿ ಯೋಜನೆ ಜಾರಿಯಾಗಿವೆ ಶೇ.೯೫ ರಷ್ಟು ಗ್ಯಾರಂಟಿ ಕ್ಷೇತ್ರದ ಜನರಿಗೆ ತಲುಪಿವೆ. ಅಲ್ಲೊಂದು ಇಲ್ಲೊಂದು ತಾಂತ್ರಿಕ ಸಮಸ್ಯೆಯಿಂದ ತಲುಪಿಲ್ಲ, ತಲುಪದವರಿಗೂ ತಲುಪಿಸುವ ಕೆಲಸ ಆಗಲಿದೆ. ಕಳೆದ ಸರ್ಕಾರದ ಅವಧಿಯಲ್ಲಿ ಕೆಲ ಯೋಜನೆಗಳಿಗೆ ಅನುಮೋದನೆ ದೊರೆತಿತ್ತು. ಅನುದಾನ ಬಿಡುಗಡೆಯಾಗಿರಲಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅನುದಾನ ಕೊಡುವೆ ಭರವಸೆ ನೀಡಿದ್ದು, ಕೆಲ ಅನುದಾನ ಬಂದಿದೆ ಎಂದರು.ಬರಗಾಲ ಎದುರಾದ ಈ ಸಮಯದಲ್ಲಿ ಇನ್ನೂ ಎರಡು, ಮೂರು ತಿಂಗಳ ಕಾಲ ಕುಡಿವ ನೀರಿನ ಸಮಸ್ಯೆ ಎದುರಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದ ಅನುದಾನದಲ್ಲಿ ಬೋರ್‌ವೆಲ್ ಕೊರೆಸಲು ಸೂಚನೆ ನೀಡಲಾಗಿದೆ. ಕುಡಿವ ನೀರಿನ ಸಮಸ್ಯೆ ಎದುರಾದರೆ ಟೋಲ್ ಪ್ರೀ ನಂಬರ್‌ಗೆ ಕರೆ ಮಾಡಬೇಕು ಎಂದರು.ಕ್ಷೇತ್ರದ ಸಾವಿರಾರು ಮಂದಿ ಆನ್ ಲೈನ್ ಮೂಲಕ ಬೋರ್ ವೆಲ್, ವಾಹನಗಳ ಸಾಲ ಸೇರಿದಂತೆ ಇನ್ನಿತರ ಸಾಲಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಆದರೆ ಕ್ಷೇತ್ರಕ್ಕೆ ನಾಲ್ಕು ಬೊರ್‌ವೆಲ್ ಬಂದಿದೆ ಯಾರಿಗೆ ಕೊಡೋದು ಎಂಬುದು ತ್ರಾಸವಾಗಿದೆ. ಹೆಚ್ಚಿನ ಬೋರ್‌ವೆಲ್ ಬೇಕು ಎಂದು ಸಿಎಂಗೆ ಮನವಿ ಕೂಡ ಮಾಡಲಾಗಿದೆ ಎಂದರು.ಸಿಎಂ ಸಿದ್ದರಾಮಯ್ಯ ಪ್ರತಿ ಕ್ಷೇತ್ರಕ್ಕೆ ೨೫ ಕೋಟಿ ಅನುದಾನ ಕೊಟ್ಟಿದ್ದಾರೆ. ಬಂದ ಅನುದಾನದಲ್ಲಿ ಆದ್ಯತೆ ಮೇಲೆ ಅನುದಾನ ನೀಡಿದ್ದೇನೆ. ಇನ್ನೂ ಹೆಚ್ಚಿನ ಅನುದಾನ ಮುಂದಿನ ದಿನಗಳಲ್ಲಿ ಬರಲಿದೆ ಎಂದರು.ನರೇಗಾ ಕೆಲಸ ಮಾಡಿ:
ನರೇಗಾದಲ್ಲಿ ಕೆಲಸ ಮಾಡಲು ಗ್ರಾಪಂ ಮುಂದಾಗಬೇಕು, ಹಣ ಬರಲು ಸ್ವಲ್ಪ ವಿಳಂಬವಾಗಬಹುದು, ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಿದರೆ ಹಳ್ಳಿ ಅಭಿವೃದ್ಧಿಯಾಗಲಿವೆ ಎಂದರು. ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷ ಮಡಹಳ್ಳಿ ಶಿವಮೂರ್ತಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಎಪಿಎಂಸಿ ನೂತನ ಅಧ್ಯಕ್ಷ ಮೊಳ್ಳಯ್ಯನಹುಂಡಿ ಬಸವರಾಜು, ಗ್ರಾಪಂ ಮಾಜಿ ಅಧ್ಯಕ್ಷರಾದ ಬಸವಶೆಟ್ಟಿ, ಮಹದೇವಚಾರಿ, ಪ್ರವೀಣ್ ಕುಮಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಪಿಡಿಒ ಎಸ್.ಪ್ರಸಾದ್ ಸೇರಿದಂತೆ ಗ್ರಾಪಂ ಎಲ್ಲಾ ಸದಸ್ಯರು ಇದ್ದರು. ಮೂಖಹಳ್ಳಿ ಸ್ವರಾಜ್ ಭವನ ಉದ್ಘಾಟನೆಗೆ ಪಶು ಸಂಗೋಪನೆ ಹಾಗು ರೇಷ್ಮೆ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಂಸದ ವಿ.ಶ್ರೀನಿವಾಸ್ ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮಾಧು ಜಿ ಮಾದೇಗೌಡ, ಮರಿತಿಬ್ಬೇಗೌಡ, ಸಿ.ಎನ್.ಮಂಜೇಗೌಡ ಗೈರಾಗಿದ್ದರು.