ಜೀತಪದ್ಧತಿ ನಿರ್ಮೂಲನೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ

| Published : Feb 21 2025, 11:49 PM IST

ಸಾರಾಂಶ

ಅಮಾಯಕ ವ್ಯಕ್ತಿಗಳ ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆಯನ್ನು ದುರುಪಯೋಗ ಪಡೆದುಕೊಂಡು ಜೀತ ಪದ್ಧತಿಗೆ ಒಳಪಡಿಸಲಾಗುತ್ತದೆ.

ಕಾರವಾರ: ಜಿಲ್ಲೆಯ ಯಾವುದೇ ಭಾಗದಲ್ಲಿ ಜೀತಪದ್ಧತಿ ಕಂಡು ಬಾರದಂತೆ ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ತಪಾಸಣೆಗಳನ್ನು ಕೈಗೊಳ್ಳುವ ಮೂಲಕ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ನಿರ್ದೇಶನ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೀತಪದ್ಧತಿ ನಿರ್ಮೂಲನಾ ದಿನಾಚರಣೆ ಪ್ರಯುಕ್ತ ಗುರುವಾರ ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀತ ಪದ್ಧತಿಗೆ ಒಳಗಾಗಿರುವ ವ್ಯಕ್ತಿಗೆ ತಾನು ಇದಕ್ಕೆ ಬಲಿಯಾಗಿರುವ ಕುರಿತು ಅರಿವು ಕೂಡ ಇರುವುದಿಲ್ಲ. ಜೀತ ಪದ್ಧತಿ ಕುರಿತಂತೆ ಜಿಲ್ಲೆಯಾದ್ಯಂತ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇದಕ್ಕೆ ಒಳಗಾಗಿರುವವರನ್ನು ಗುರುತಿಸಿ, ರಕ್ಷಿಸಿ ಅವರಿಗೆ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಜೀತ ಪದ್ಧತಿ ತಡೆ ಕುರಿತಂತೆ ಪ್ರತಿಜ್ಞಾವಿಧಿ ಬೋಧಿಸಿದ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ಮಾತನಾಡಿ, ಅಮಾಯಕ ವ್ಯಕ್ತಿಗಳ ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆಯನ್ನು ದುರುಪಯೋಗ ಪಡೆದುಕೊಂಡು ಜೀತ ಪದ್ಧತಿಗೆ ಒಳಪಡಿಸಲಾಗುತ್ತದೆ. ಪ್ರಸ್ತುತ ಇದರ ಆಯಾಮ ಬದಲಾಗಿದ್ದು, ಹೊಸ ರೂಪ ಪಡೆದು ಸಂಘಟಿತ ಅಪರಾಧವಾಗಿ ಮಾರ್ಪಟ್ಟಿದೆ. ಬಲಹೀನರನ್ನು ಸಾಲದ ಸುಳಿಗೆ ಸಿಲುಕಿಸಿ, ಈ ವ್ಯವಸ್ಥೆಗೆ ದೂಡಿ ಲಾಭ ಮಾಡಿಕೊಳ್ಳುತ್ತಿದ್ದು, ಮಾನವ ಕಳ್ಳ ಸಾಗಾಣಿಕೆಗೆ ಕೂಡ ಇದು ಕಾರಣವಾಗಿದೆ. ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಜೀತ ಪದ್ಧತಿಯ ಬಗ್ಗೆ ಪರಿಶೀಲಿಸಿ, ಇದನ್ನು ತಡೆಯಲು ಆತ್ಮಸಾಕ್ಷಿಯಾಗಿ, ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಮಾನವ ಕಳ್ಳ ಸಾಗಾಣಿಕೆ ಮತ್ತು ಜೀತ ಕಾರ್ಮಿಕ ಪದ್ದತಿ ಕುರಿತ ರಾಜ್ಯ ಉನ್ನತಾಧಿಕಾರ ಸಮಿತಿಯ ಸದಸ್ಯ ವಿಲಿಯಂ ಕ್ರಿಸ್ಟೋಫರ್, ಜೀತ ಪದ್ಧತಿಯ ಕುರಿತಂತೆ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ್, ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ವಿವಿಧ

ಇಲಾಖೆಗಳ ಅಧಿಕಾರಿಗಳು ಇದ್ದರು.