ಲಂಚ ಪಡೆದಾದರೂ ಕೆಲಸ ಮಾಡಿಕೊಡಿ

| Published : Jun 28 2024, 12:47 AM IST

ಸಾರಾಂಶ

ನಾನು ನಿಮಗೆ ಸನ್ಮಾನ ಮಾಡಲು ಹಾರ, ಶಾಲು ತಂದಿರುವೆ, ಸನ್ಮಾನದ ಬಳಿಕ ಲಂಚವನ್ನು ಸಹಾ ನೀಡುವೆ. ಅದನ್ನು ಪಡೆದುಕೊಂಡಾದರೂ ನನ್ನ ಸಮಸ್ಯೆ ನಿವಾರಿಸಿ ಎಂದು ಚೆಸ್ಕಾಂ ಇಲಾಖೆ ಕರೆಯಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರೊಬ್ಬರು 8 ತಿಂಗಳಿಂದ ಟಿ.ಸಿ ಅಳವಡಿಸಿದ ಅಧಿಕಾರಿಗಳ ಕ್ರಮಕ್ಕೆ ಈ ರೀತಿ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಾನು ನಿಮಗೆ ಸನ್ಮಾನ ಮಾಡಲು ಹಾರ, ಶಾಲು ತಂದಿರುವೆ, ಸನ್ಮಾನದ ಬಳಿಕ ಲಂಚವನ್ನು ಸಹಾ ನೀಡುವೆ. ಅದನ್ನು ಪಡೆದುಕೊಂಡಾದರೂ ನನ್ನ ಸಮಸ್ಯೆ ನಿವಾರಿಸಿ ಎಂದು ಚೆಸ್ಕಾಂ ಇಲಾಖೆ ಕರೆಯಲಾಗಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರೊಬ್ಬರು 8 ತಿಂಗಳಿಂದ ಟಿ.ಸಿ ಅಳವಡಿಸಿದ ಅಧಿಕಾರಿಗಳ ಕ್ರಮಕ್ಕೆ ಈ ರೀತಿ ಆಕ್ರೋಶ ಹೊರಹಾಕಿದರು.

ಪಟ್ಟಣದ ಉಪವಿಭಾಗ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಜನ ಸಂಪರ್ಕ ಸಭೆಯಲ್ಲಿ ಗ್ರಾಹಕರೊಬ್ಬರು ಹಾಜರಿದ್ದ ಅಧಿಕಾರಿಗಳಿಗೆ ದೂರುಗಳ ಸುರಿಮಳೆಯನ್ನೆ ಹರಿಸಿದರಲ್ಲದೆ, ಅಧಿಕಾರಿಗಳ ಕರ್ತವ್ಯಲೋಪ, ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿದರು. ಈ ವೇಳೆ ಗ್ರಾಹಕರೊಬ್ಬರು ಅಧಿಕಾರಿಗಳು ಸನ್ಮಾನ ಮಾಡಿಸಿಕೊಂಡು, ಹಣ ಪಡೆದಾದರೂ ನಮ್ಮ ಕೆಲಸ ಮಾಡಿಕೊಡಿ ಎಂದು ಮನವಿ ಮಾಡಿದರು. ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಗೆ ಕಾರಣಾಂತರಗಳಿಂದ ಸೆಸ್ಕ್ ಅಧೀಕ್ಷಕ ಎಂಜಿನಿಯರ್ ಗೈರಾದ ಹಿನ್ನೆಲೆ ಎಇಇ ರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸತ್ತೇಗಾಲ ನಿವಾಸಿ ಎಂ.ಶಶಿಕುಮಾರ್ ಮಾತನಾಡಿ, ಸತ್ತೇಗಾಲದ ಪಟ್ಟಾಭಿಶೆಟ್ಟಿ ಕೆರೆ ಸಮೀಪದ ಸರ್ವೇ.ನಂ.286 ರಲ್ಲಿ ನನ್ನ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಪಡೆದಿದ್ದೇನೆ. ಈ ವ್ಯಾಪ್ತಿಯಲ್ಲಿರುವ 100 ಕೆವಿ ಟಿಸಿಗೆ 30 ಕ್ಕೂ ಹೆಚ್ಚು ಮಂದಿಗೆ ಕೊಳವೆ ಬಾವಿ ಸಂಪರ್ಕ ಪಡೆದಿದ್ದು, ಈ ಕಾರಣಕ್ಕೆ ಲೋಡ್ ಜಾಸ್ತಿ ಆಗಿ ಆಗಿಂದಾಗ್ಗೆ ದುರಸ್ಥಿಯಾಗುತ್ತಿದೆ. ಈ ಹಿನ್ನಲೆ ಹೊಸ ಟಿಸಿ ಅಳವಡಿಸಿಕೊಡುವಂತೆ ಕಳೆದ 8 ತಿಂಗಳಿನಿಂದ ಮನವಿ ಮಾಡುತ್ತಿದ್ದರೂ ಸಹಾ ಪ್ರಯೋಜವಾಗಿಲ್ಲ ಎಂದು ದೂರಿದರು.

ಜಾಗೇರಿ ಸರ್ವೇ 174 ಗೆ ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ವಿದ್ಯುತ್ ನೀಡಲಾಗುತ್ತದೆ. ಆದರೆ, ನಾವು ಆರ್‌ಟಿಸಿ ಹಾಗೂ ಆರ್.ಆರ್ ನಂಬರ್ ಹೊಂದಿದ್ದರೂ ಟಿಸಿ ಅಳವಡಿಸುತ್ತಿಲ್ಲ. ಇದರಿಂದ ತೊಂದರೆಗೊಳಗಾಗಿದ್ದೇವೆ ಎಂದು ಅಕ್ರೋಶ ಹೊರಹಾಕಿದರು. ಈಗಾಗಲೇ ಎಸ್ಸಿ-ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಕೂಡ ಈ ಬಗ್ಗೆ ದೂರಿದ್ದೇನೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸುಮ್ಮನಾಗಿದ್ದಾರೆ. ನನ್ನ ನಂತರ ಬಂದ ಅರ್ಜಿಗಳಿಗೆ ಕೆಲಸ ಮಾಡಲಾಗಿದೆ. ಸತ್ತೇಗಾಲ ಭಾಗದ ಜೆ.ಇ ಮಹದೇವಸ್ವಾಮಿ ಎಂಬುವರು ಹಣ ಕೊಟ್ಟವರಿಗೆ ಮಾತ್ರ ಕೆಲಸ ಮಾಡಿ ಕೊಡುತ್ತಾರೆ. ಇದರಲ್ಲಿ ಹಿರಿಯ ಅಧಿಕಾರಿಗಳಾದ ನೀವು ಶಾಮೀಲಾಗಿದ್ದೀರಾ ಎಂದು ಎಇಇ ಅವರಿಗೆ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ಬಳಿಕ ಜೆ.ಇ ಮಹದೇವಸ್ವಾಮಿ ಮಾತನಾಡಿ, ಈಗಾಗಲೇ ನಾನು ಟಿಸಿ ಅಗತ್ಯವಿರುವ ಕುರಿತು ಇಂಡೆಟ್ ಹಾಕಿ ಹಿರಿಯ ಅಧಿಕಾರಿಗಳಿಗೆ ಕಳುಹಿಸಿ ಕೊಟ್ಟಿದ್ದೇನೆ. ನಾನು ಯಾವ ಲಂಚವನ್ನು ಪಡೆದು ಕೆಲಸ ಮಾಡುತ್ತಿಲ್ಲ. ನಾನು ಹಣ ಕೇಳಿರುವುದಕ್ಕೆ ಸಾಕ್ಷಿ ಇದ್ದರೆ ನೀಡಲಿ ಎಂದರು.ಎಇಇ ರಾಜು ಮಾತನಾಡಿ, ಅತೀ ಶೀಘ್ರದಲ್ಲಿ ಶಶಿಕುಮಾರ್ ಅರ್ಜಿ ವಿಚಾರವಾಗಿ ಕ್ರಮವಹಿಸಲಾಗುವುದು ಎಂದರು. ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಸುಂದರರಾಜು ಮಾತನಾಡಿ, ಕಳೆದ 2 ವರ್ಷದ ಹಿಂದೆ ಕಟ್ಟಡವೊಂದನ್ನು ಬಾಡಿಗೆ ಪಡೆದು ಸಂಪರ್ಕ ಪಡೆದಿದ್ದ ಸುಧಾ ಎಂಬ ಗ್ರಾಹಕರಿಂದ ಚೆಸ್ಕಾಂ ಇಲಾಖೆ ಬಾಕಿ ಹಣ ವಸೂಲಿಗೆ ಕ್ರಮವಹಿಸಬೇಕಿತ್ತು, ಅದನ್ನು ಬಿಟ್ಟು ಕಟ್ಟಡ ಮಾಲೀಕರಿಗೆ 2 ವರ್ಷದ ಬಳಿಕ ಪಾವತಿಸಿ ಎಂದು ನೋಟೀಸ್ ನೀಡಿ ನಿಯಮ ಉಲ್ಲಂಘಿಸಲಾಗಿದ್ದು ಈ ಸಂಬಂಧ ಕ್ರಮವಹಿಸಬೇಕು. ಅಲ್ಲದೆ ಹಳೆ ಬಾಕಿ ಎಂದು 3 ವರ್ಷದ ಬಳಿಕ ಬಿಲ್ ನೀಡುವುದು ಸಹಾ ಆಕ್ಷೇಪಾರ್ಹ ಕೆಲಸ ಎಂದರು.ರೈತ ಮುಖಂಡ ದಶರಥ್ ಮಾತನಾಡಿ, ರಸ್ತೆಗಳು ಅಭಿವೃದ್ಧಿಯಾಗುತ್ತಿದಂತೆ ಎತ್ತರವಾಗುತ್ತಿದೆ. ದೊಡ್ಡ ವಾಹನಗಳಿಗೆ ರಸ್ತೆ ಬದಿಯ ವಿದ್ಯುತ್ ಕಂಬಗಳ ತಂತಿ ತಡೆಯುತ್ತಿದ್ದು ಈ ಸಂಬಂಧ ಕ್ರಮಕೈಗೊಳ್ಳಬೇಕು. ಪಟ್ಟಣದ ವ್ಯಾಪ್ತಿಯ ಮಂಜುನಾಥ ನಗರ, ಶಿವಕುಮಾರಸ್ವಾಮಿ ಬಡಾವಣೆ ಕಡೆಗಳಲ್ಲಿ ಟಿ.ಸಿ ಹಾಳಾಗಿದ್ದು. ಸಿಂಗಲ್ ಫೀಜ್ ವಿದ್ಯುತ್ ಸರಬರಾಜು ಹೆಚ್ಚಾಗಿದೆ. ಪರಿಣಾಮ ಮನೆಯ ಟಿವಿ, ಫ್ರೀಡ್ಜ್ ಇನ್ನಿತರ ಪರಿಕರಗಳು ಹಾಳಾಗುತ್ತಿದೆ ಎಂದು ದೂರಿದರು. ಗುಂಡೇಗಾಲದ ಪಾಪಣ್ಣ ಮಾತನಾಡಿ, ನಮ್ಮ ಬಡಾವಣೆಯಲ್ಲಿ ಕಬ್ಬಿಣದ ಕಂಬವಿದ್ದು ಅದನ್ನ ತೆರವುಗೊಳಿಸಬೇಕು ಎಂದರು. ಸಭೆಯಲ್ಲಿ ಒಟ್ಟು 18 ದೂರು ಅರ್ಜಿಗಳು ಬಂದಿದ್ದು ದೂರು ಅರ್ಜಿಗಳಿಗೆ ಸಂಬಂಧಿಸಿದಂತೆ ಜರೂರಾಗಿ ಕ್ರಮವಹಿಸುತ್ತೇನೆ ಎಂದು ಎಇಇ ರಾಜು ಹೇಳಿದರು.

2-3 ವರ್ಷದ ಬಳಿಕ ಬಿಲ್, ರೈತ ಮುಖಂಡರ ಆಕ್ಷೇಪ

ನಗರಸಭೆ ಮಾಜಿ ಸದಸ್ಯ, ರೈತ ಮುಖಂಡರೂ ಆದ ನರಸಿಂಹನ್ ಮಾತನಾಡಿ, ಚೆಸ್ಕಾಂ ಅಧಿಕಾರಿಗಳು ಪ್ರತಿ ತಿಂಗಳಿಗೊಮ್ಮೆ ಬಿಲ್ ನೀಡಿ ಬಾಕಿ ಹಣ ಪಡೆದುಕೊಳ್ಳಬೇಕು, ಆದರೆ ಅದನ್ನ ಬಿಟ್ಟು 2-3 ವರ್ಷಗಳಿಗೊಮ್ಮೆ ಬಿಲ್ ನೀಡುತ್ತಾರೆ. ಬಾಡಿಗೆದಾರರು ಮನೆ ಖಾಲಿಮಾಡಿಕೊಂಡು ಹೋದ 3 ವರ್ಷ ಬಳಿಕ ಬಿಲ್ ನೀಡಿದರೆ ಮಾಲೀಕರು ಅವರಿಂದ ಬಾಕಿ ಹಣ ಕೇಳಲು ಸಾದ್ಯವೇ, ಇದು ನಿಯಮ ಉಲ್ಲಂಘನೆ ಅಲ್ಲವೇ?, ಅಧಿಕಾರಿ, ಸಿಬ್ಬಂದಿಗಳ ಈ ಕ್ರಮ ಸರಿಯಲ್ಲ, ಹಾಗಾಗಿ ಸಕಾಲದಲ್ಲಿ ಬಿಲ್ ನೀಡಿ ಬಾಕಿ ಇದ್ದರೆ ಪಾವತಿಸಿಕೊಳ್ಳಬೇಕು. ಹಳೆ ಬಾಕಿ ಎಂದು 2 ವರ್ಷ ಕಳೆದ ಬಳಿಕ ಬಿಲ್ ನೀಡುವುದು ತರವಲ್ಲ ಎಂದು ಆಕ್ಷೇಪಿಸಿದರು. ಸಭೆಗೆ ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಹಾಜರಾಗದ ಬಗ್ಗೆ ಸಾಕಷ್ಟು ಆಕ್ರೋಶವೂ ಕೇಳಿ ಬಂದಿತು. ಈ ವೇಳೆ ಸಹಾಯಕ ಇಂಜಿನಿಯರ್ ಮಧುಸೂದನ್, ಮಹೇಶ್, ಇನ್ನಿತರರು ಇದ್ದರು.