ಸಾರಾಂಶ
ಕನ್ನಡಪ್ರಭ ವಾರ್ತೆ ಹುಲಸೂರು
ಈ ಬಾರಿ ಮತದಾನದ ಪ್ರಮಾಣ ಶೇ.100ಕ್ಕೆ ಏರಿಸಲು ಪ್ರತಿಯೊಬ್ಬ ಮತದಾರ ಭಾರತದ ಈ ಪ್ರಜಾಪ್ರಭುತ್ವದ ಈ ಲೋಕಸಭಾ ಚುನಾವಣೆಯ ಹಬ್ಬದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಗಳಾದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.ಮೇ 7ರಂದು ನಡೆಯಲಿರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಶನಿವಾರ ಹುಲಸೂರು ಪಟ್ಟಣದಲ್ಲಿ ಆಯೋಜಿಸಿದ್ದ ವಾಕಥಾನ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರಲ್ಲದೆ, ಈ ಸಂದರ್ಭದಲ್ಲಿ ಮನೆಯಂಗಳದಲ್ಲಿದ್ದ, ಅಂಗಡಿಗಳ ಮುಂದೆ ನಿಂತಿದ್ದ ಜನರಿಗೆ ಮತದಾನದ ಜಾಗೃತಿ ಮೂಡಿಸಿದರು.
ಮೇ 7ರಂದು ತಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡುವುದರ ಜೊತೆಗೆ ನಿಮ್ಮ ಮನೆಯ ಪಕ್ಕದವರಿಗೆ ಮತ್ತು ಬಡಾವಣೆಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವುದು ತಮ್ಮೆಲ್ಲರ ಜವಾಬ್ದಾರಿಯಾಗಿದೆ. ಮತದಾನ ಜಾಗೃತಿ ಅಭಿಯಾನದ ಮುಖಾಂತರ ಜನರಲ್ಲಿ ತಮ್ಮ ಮತದಾನ ಎಷ್ಟು ಮುಖ್ಯ ಎಂಬುದನ್ನು ಅವರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ನಾವೇಲ್ಲರು ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಉಳಿಯಬೇಕಾದರೆ ಪ್ರತಿಯೋರ್ವ ನಾಗರಿಕರು ಮತದಾನ ಮಾಡಬೇಕು. ಮತದಾನ ಅದು ನಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಮತದಾರರು ಅರಿಯಬೇಕು. ಮತದಾರರು ಯಾವುದೇ ಆಮೀಶಗಳಿಗೆ ಒಳಗಾಗದೆ ಧೈರ್ಯದಿಂದ ನಿಮ್ಮ ಮತದಾನದ ಹಕ್ಕು ಚಲಾಯಿಸಿ ಮತ ಹಾಕುವಂತೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಮತದಾನದ ಮಹತ್ವ ಕುರಿತು ಬಸವಕಲ್ಯಾಣ ಸಹಾಯಕ ಆಯುಕ್ತರು ಹಾಗೂ ತಾಲೂಕು ಚುನಾವಣಾಧಿಕಾರಿ ಅನೀಲಕುಮಾರ ದಾವಳಗಿ ಅವರು ವಾಕಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಹುಲಸೂರು ಪಟ್ಟಣದ ಚೌಕಿಮಠದಿಂದ ಆರಂಭಗೊಂಡ ವಾಕಥಾನ್ ಮುಖ್ಯ ರಸ್ತೆಗಳ ಮೂಲಕ ಹಾದು ತಹಸೀಲ್ ಕಚೇರಿವರೆಗೆ ಬಂದು ಮುಕ್ತಾಯಗೊಂಡಿತು. ರಾಜ್ಯಮಟ್ಟದ ಸ್ವೀಪ್ ತರಬೇತುದಾರ ಡಾ. ಗೌತಮ ಅರಳಿ ಅವರು ವಾಕಥಾನ್ ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಹುಲಸೂರ ತಹಸೀಲ್ದಾರ ಡಾ. ರಮೇಶಬಾಬು , ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಬಾಬಳಗಿ, ಉಪ ತಹಸೀಲ್ದಾರ್ ಸಂಜುಕುಮಾರ ಭೈರೆ, ತಾಪಂ ಸಹಾಯಕ ನಿರ್ದೇಶಕ ಮಹಾದೇವ ಜಮ್ಮು, ಡಾ. ಶಶಿಕಾಂತ ಕನ್ನಾಡೆ, ಡಾ. ಸುಧಾಕರ, ಶಿರಸ್ತೆದಾರ ಶಮಿಯೋದ್ದಿನ್, ಕಂದಾಯ ನಿರೀಕ್ಷಕರಾದ ಶರಣು ಪವಾಡಶೆಟ್ಟಿ, ತಾಲೂಕು ಐಇಸಿ ಸಂಯೋಜಕ ಗಣಪತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತರು ಈ ವಾಕಥಾನ್‌ದಲ್ಲಿ ಪಾಲ್ಗೊಂಡಿದ್ದರು.