ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನ ಜಲಕ್ಷಾಮ ಐಟಿ ಸಂಸ್ಥೆಗಳಿಗೆ ಹೊಸ ತಲೆನೋವು ತಂದಿದೆ. ನಗರಕ್ಕೆ ಎದುರಾಗಿರುವ ತೀವ್ರ ನೀರಿನ ಸಮಸ್ಯೆಗೆ ತಕ್ಷಣದ ಪರಿಹಾರ ಕ್ರಮವಾಗಿ ಐಟಿ ಕಂಪನಿಗಳು ಮನೆಯಿಂದ ಕೆಲಸ (ವರ್ಕ್ ಫ್ರಂ ಹೋಮ್) ಮಾಡಲು ಅವಕಾಶ ಕಲ್ಪಿಸಬೇಕು ಎಂಬ ಉದ್ಯೋಗಿಗಳು ಆಗ್ರಹಿಸತೊಡಗಿದ್ದು, ಐಟಿ ಸಂಸ್ಥೆಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.ರಿಮೋಟ್ ಆಗಿ ಕೆಲಸ ಮಾಡಲು ಅವಕಾಶ ಇರುವ ಐಟಿ ಉದ್ಯೋಗಿಗಳು ಸ್ವಂತ ಊರುಗಳಲ್ಲಿ, ಮನೆಯಿಂದ ಕೆಲಸ ಮಾಡುವುದರಿಂದ ವಾಣಿಜ್ಯ ಬಳಕೆ ನೀರಿನ ಬೇಡಿಕೆ ಕಡಿಮೆಯಾಗಿ, ತಕ್ಕ ಮಟ್ಟಿಗೆ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದು. ಈಗಾಗಲೇ ಕಚೇರಿ, ಅಪಾರ್ಟ್‌ಮೆಂಟ್, ಮನೆಗಳಲ್ಲಿನ ನೂರಾರು ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಹೀಗಾಗಿ, ಬೇಸಿಗೆ ಆರಂಭದಲ್ಲೇ ಕಾವೇರಿ ನೀರು ಮತ್ತು ಟ್ಯಾಂಕರ್ ನೀರಿನ ಮೇಲೆ ಅವಲಂಬನೆ ಹೆಚ್ಚಾಗಿದೆ. ಮತ್ತೊಂದೆಡೆ ಸಮರ್ಪಕವಾಗಿ ಕಾವೇರಿ ನೀರಿನ ಪೂರೈಕೆಯಾಗದೇ ನೀರಿನ ಕೊರತೆಯ ಬಿಸಿ ಎಲ್ಲ ಕಚೇರಿ, ಅಪಾರ್ಟ್‌ಮೆಂಟ್‌ಗಳನ್ನು ಬಾಧಿಸುತ್ತಿದೆ.
ಟ್ಯಾಂಕರ್ ನೀರಿನ ಬೆಲೆಯನ್ನು ಸರ್ಕಾರ ನಿಯಂತ್ರಿಸುತ್ತಿದ್ದರೂ, ಅತಿಯಾದ ಅವಲಂಬನೆ ಯಾವಾಗ ಕೈ ಕೊಡುತ್ತದೆಯೋ ಎಂಬ ಭೀತಿ ಕಾಡುತ್ತಿರುವ ಕಾರಣ ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಬೇಕು ಎಂಬ ಕೋರಿಕೆ ಐಟಿ ವಲಯದಿಂದ ಕೇಳಿ ಬಂದಿದೆ. ಹೊರ ರಾಜ್ಯಗಳ ಉದ್ಯೋಗಿಗಳಿಗೆ ಮಳೆಗಾಲ ಆರಂಭವಾಗುವವರೆಗೆ ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಬಹುದು. ಸರ್ಕಾರವೇ ಈ ಕುರಿತು ಸೂಚನೆ ನೀಡಬಹುದು ಎಂದು ಜಾಲತಾಣ ಎಕ್ಸ್‌ನಲ್ಲಿ ನಗರದ ನೀರಿನ ಸಮಸ್ಯೆ ಕುರಿತಾದ ಚರ್ಚೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.‘ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಬಾಧಿಸುತ್ತಿರುವ ಕಾರಣ ಸಾಫ್ಟ್‌ವೇರ್, ಐಟಿ ಕ್ಷೇತ್ರದಲ್ಲಿರುವ ಉದ್ಯೋಗಿಗಳಿಗೆ ಮಳೆಗಾಲ ಆರಂಭವಾಗಿ ನೀರಿನ ಸಮಸ್ಯೆ ನಿಯಂತ್ರಣಕ್ಕೆ ಬರುವವರೆಗೆ ಮನೆಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ಇದರಿಂದ ನಗರದ ಕಚೇರಿಗಳಲ್ಲಿನ ನೀರಿನ ಬೇಡಿಕೆ ಕಡಿಮೆಯಾಗುತ್ತದೆ’ ಎಂದು ಪರಿಸರ, ನೀರಿನ ಸಂರಕ್ಷಣೆ, ಸಮೂಹ ಸಾರಿಗೆ ವ್ಯವಸ್ಥೆ ಮತ್ತು ನಗರದ ಮೂಲಸೌಕರ್ಯಗಳ ಸುಧಾರಣೆಗಾಗಿ ವಿವಿಧ ಗುಂಪುಗಳನ್ನು ರಚಿಸಿಕೊಂಡು ಚಟುವಟಿಕೆಗಳನ್ನು ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸಂದೀಪ್ ಅನಿರುದ್ಧನ್ ಅಭಿಪ್ರಾಯಪಟ್ಟಿದ್ದಾರೆ.‘ಊರುಗಳಿಗೆ ಹೋದರೆ
ಅನುಕೂಲ ಆಗಬಹುದು’‘ಕಚೇರಿಗಳಿಗೆ ಹೋಲಿಸಿದರೆ ಮನೆಯಲ್ಲಿ ನೀರಿನ ಬಳಕೆ ಮಿತವಾಗಿರುತ್ತದೆ. ಆದರೆ, ಮನೆಯಲ್ಲಿಯೂ ನೀರಿನ ಸಮಸ್ಯೆ ಇದ್ದರೆ ಏನು ಮಾಡುವುದು? ನಮ್ಮ ಅಪಾರ್ಟ್‌ಮೆಂಟ್‌ಗೆ ಕಳೆದ ಮೂರು ದಿನಗಳಿಂದ ಕಾವೇರಿ ನೀರು ಬಂದಿಲ್ಲ. ಇರುವ 2 ಬೋರ್‌ವೆಲ್‌ಗಳ ಪೈಕಿ ಒಂದರಲ್ಲಿ ನೀರು ಬರುತ್ತಿಲ್ಲ. ಹೀಗಾಗಿ, ಮನೆಯಿಂದ ಕೆಲಸ ಮಾಡುವುದರಿಂದ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನಿಸುವುದಿಲ್ಲ. ಆದರೆ, ಉದ್ಯೋಗಿಗಳು ನೀರಿನ ಸಮಸ್ಯೆ ಇಲ್ಲದ ಊರುಗಳಿಂದ ಕೆಲಸ ಮಾಡುವುದಾದರೆ ಅನುಕೂಲ ಆಗಬಹುದು’ ಎಂದು ಸ್ಟಾರ್ಟ್‌ಅಪ್ ಕಂಪನಿ ನಡೆಸುತ್ತಿರುವ ಚಂದ್ರಕಾಂತ್ ಅಭಿಪ್ರಾಯಪಟ್ಟರು.ಮತ್ತೆ ಮನೆಯಿಂದ ಕೆಲಸ
‘ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಾಪಸ್ ಕಚೇರಿಗೆ ಎಳೆದು ತರಲು ಒಂದು ವರ್ಷ ಬೇಕಾಯಿತು. ಆದರೆ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿಂದ ಮತ್ತೆ ಮನೆಯಿಂದ ಕೆಲಸಕ್ಕೆ ಅವಕಾಶ ಕಲ್ಪಿಸುವ ಪರಿಸ್ಥಿತಿ ಎದುರಾಗಿದೆ’ ಎಂದು ಮಾರ್ಮಿಕವಾಗಿ ವಿನೋದ್ ರಾಜ್ ಎಂಬುವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.