ಸಾರಾಂಶ
ಆರೋಗ್ಯ, ಶಿಕ್ಷಣ ಕ್ಷೇತ್ರ ಮತ್ತು ಜಾನುವಾರುಗಳಿಗೆ ತಗಲುವ ರೋಗಬಾಧೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮವಹಿಸಿ.
ಕೊಪ್ಪ: ಆರೋಗ್ಯ, ಶಿಕ್ಷಣ ಕ್ಷೇತ್ರ ಮತ್ತು ಜಾನುವಾರುಗಳಿಗೆ ತಗಲುವ ರೋಗಬಾಧೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮವಹಿಸಿ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಶುಸಂಗೋಪನಾ ಇಲಾಖೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ , ರೋಟರಿ ಮಲ್ನಾಡ್ ಇವರ ಸಹಯೋಗದೊಂದಿಗೆ ತ್ಯಾಗರಾಜ ರಸ್ತೆಯ ಲಯನ್ಸ್ ಸೇವಾ ಮಂದಿರದಲ್ಲಿ ಶುಕ್ರವಾರ ಆಯೋಜನೆಗೊಂಡ ಜಾನುವಾರು ಮತ್ತು ಶ್ವಾನಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕ್ಷೇತ್ರದಲ್ಲಿ ೬೯,೪೩೯ ಜಾನುವಾರುಗಳಿದ್ದು, ೯ ಹೋಬಳಿ ಕೇಂದ್ರಗಳಲ್ಲೂ ಕಾಲುಬಾಯಿ ಮತ್ತು ಚರ್ಮಗಂಟು ರೋಗಗಳಿಗೆ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ರೇಬೀಸ್ ತಡೆಗಟ್ಟಲು ೧೮,೦೦೦ ನಾಯಿಗಳಿಗೆ ಲಸಿಕೆ ಹಾಕಲಾಗಿದೆ. ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಲು ಪ್ರತೀ ಗ್ರಾಮ ಪಂಚಾಯಿತಿಗಳು ಮುಂದಾಗಬೇಕು ಎಂದರು.
ಜಾನುವಾರುಗಳ ತುರ್ತು ಚಿಕಿತ್ಸೆಗಾಗಿ ಪಶು ವೈದ್ಯಕೀಯ ಸಂಚಾರಿ ಅಂಬ್ಯುಲೆನ್ಸ್ ಸೇವೆ ಚಾಲ್ತಿಯಲ್ಲಿದೆ. ಜಾನುವಾರು ಸಾಕಾಣಿಕೆಗೆ, ಕೊಟ್ಟಿಗೆ, ಶೆಡ್ ನಿರ್ಮಾಣಕ್ಕೆ ಸಹಾಯಧನ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರ, ಹಸುಗಳಿಗೆ ರಬ್ಬರ್ ಮ್ಯಾಟ್‌ಗಳು ಇಲಾಖೆಯಲ್ಲಿ ರಿಯಾಯಿತಿಯಲ್ಲಿ ನೀಡಲಾಗುತ್ತದೆ ಎಂದು ಇಲಾಖೆಯ ಮಾಹಿತಿ ನೀಡಿದ ಅವರು, ಈ ರೀತಿ ಮಾದರಿ ಕಾರ್ಯಕ್ರಮಗಳು, ಜಾನುವಾರುಗಳನ್ನು ಸಾಕಲು ಜನರಿಗೆ ಉತ್ತೇಜನ ನೀಡಲಿದೆ. ಜಗತ್ತಿನಲ್ಲಿ ವಿಶ್ವಾಸನೀಯ ಪ್ರಾಣಿ ಎನಿಸಿಕೊಳ್ಳುವ ಶ್ವಾನಗಳು ಮನೆ ತೋಟ ಇತ್ಯಾದಿಗಳನ್ನು ಕಾಯುವ ಕಾವಲುಗಾರನಂತೆ ಕಾರ್ಯನಿರ್ವಹಿಸುವುದಲ್ಲದೆ ರಕ್ಷಣೆ ಪಡೆಯವಲ್ಲೂ ಶ್ವಾನಗಳ ಸೇವೆ ಸ್ಮರಣೀಯ ಎಂದರು.ಕಾರ್ಯಕ್ರಮದಲ್ಲಿ ವಿವಿಧ ತಳೀಯ ೧೦೦ಕ್ಕೂ ಹೆಚ್ಚು ಜಾನುವಾರಗಳು, ಶ್ವಾನಗಳು ಇದ್ದವು. ಪ್ರದರ್ಶನದಲ್ಲಿ ಪಾಲ್ಗೊಂಡು ವಿಜೇತ ಜಾನುವಾರು ಮತ್ತು ಶ್ವಾನಗಳಿಗೆ ಪಾರಿತೋಷಕವನ್ನು ನೀಡಲಾಯಿತು.
ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಪ್ರದೀಪ್, ಒಕ್ಕಲಿಗ ಮುಖಂಡ ಸಹದೇವ ಬಾಲಕೃಷ್ಣ, ರೋಟರಿ ಗವರ್ನರ್ ಜೆ.ಎಂ.ಶ್ರೀಹರ್ಷ, ಅಧ್ಯಕ್ಷ ಡಾ. ಪ್ರವೀಣ್, ರೋಟರಿ ಕೊಪ್ಪ ಮಲ್ನಾಡ್ ಅಧ್ಯಕ್ಷ ಕೇಶವ ಮೂರ್ತಿ, ಲಯನ್ಸ್ ಕ್ಲಬ್ ಅಧ್ಯಕ್ಷೆ ಮಧುಲಿಕಾ ಪ್ರಜ್ವಲ್, ಲಯನ್ಸ್ ಕ್ಲಬ್‌ನ ಬಾಳೆಮನೆ ನಟರಾಜ್, ಪ್ರಸನ್ನ ಕುಮಾರ್, ಹೆಚ್.ಎಸ್. ಇನೇಶ್, ಕೆಡಿಪಿ ಸದಸ್ಯ ಚಿಂತನ್ ಬೆಳಗೊಳ, ಪ.ಪಂ ಸದಸ್ಯರಾದ ರಶೀದ್, ಮೈತ್ರಾಗಣೇಶ್, ಡಿಎಸ್‌ಎಸ್ ಮುಖಂಡ ರಾಜಾಶಂಕರ್, ಅನ್ನಪೂರ್ಣ ನರೇಶ್, ಆನಂದ್ ಕೆ., ಸಾಲಿಕ್ ಅಹಮ್ಮದ್, ಶೃಂಗೇರಿ, ನ.ರಾ.ಪುರ ಪಶುವೈದ್ಯಕೀಯ ಸಹಾಯಕ ನಿರ್ದೇಶಕರು, ಪಶು ವೈದ್ಯಕೀಯ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.