ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಿದೆ. ಈ ನಿಟ್ಟಿನಲ್ಲಿ ಹತ್ತಾರು ಹೊಸ ಹೊಸ ಯೋಜನೆಗಳನ್ನು ರೂಪಿಸಿ ಕಾಲಮಿತಿಯೊಳಗೆ ಜಾರಿಗೆ ತರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರ ಅನೇಕ ಜನಪರ ಕಾರ್ಯಕ್ರಮ ರೂಪಿಸಿದೆ. ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಹಾದಿಯಲ್ಲಿ ದೃಢವಾದ ಹೆಜ್ಜೆ ಇಟ್ಟಿದೆ. ಜನರಿಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸುವುದರ ಜತೆಗೆ ರಾಜ್ಯದ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಜರುಗಿ ನೂರು ವರ್ಷಗಳ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಆಯವ್ಯಯದಲ್ಲಿ ₹2 ಕೋಟಿ ಕೂಡ ತೆಗೆದಿರಿಸಿದೆ ಎಂದು ಹೇಳಿದರು.ಜುಲೈ ಹಾಗೂ ಆಗಸ್ಟ್ ನಲ್ಲಿ ಹೆಚ್ಚು ಮಳೆ ದಾಖಲಾಗಿರುವುದರಿಂದ ಬೆಳೆಗಳಲ್ಲಿ ನೀರು ನಿಂತು ಸುಮಾರು 41,700 ಹೆಕ್ಟೇರ್ ಬೆಳೆ ಮುಳುಗಡೆ ಪ್ರದೇಶವೆಂದು ಅಂದಾಜಿಸಲಾಗಿದೆ. ಜಂಟಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿ ಇದೆ. ಹನಿಯಾಗಿರುವ ಒಟ್ಟು 220 ಮನೆಗಳಿಗೆ ₹31.32 ಲಕ್ಷ ಪರಿಹಾರ ವಿತರಿಸಲಾಗಿದೆ. ಬಾಕಿ ಉಳಿದ ಪ್ರಕರಣಗಳ ಸರ್ವೇ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ವಿಭಾಗದಿಂದ ಜಿಲ್ಲೆಯಲ್ಲಿ ಬೆಳಗಾವಿ ನಗರದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸೇರಿ 20 ಸರ್ಕಾರಿ ಆರೋಗ್ಯ ಸಂಸ್ಥೆಗಳ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ₹374 ಕೋಟಿ 44 ಲಕ್ಷ 83 ಸಾವಿರ ಅಂದಾಜು ವೆಚ್ಚದಲ್ಲಿ ಕಾಮಗಾರಿಗಳು ಪೂರ್ಣಗೊಂಡು ಕೆಲವು ಪ್ರಗತಿಯಲ್ಲಿವೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ತುಬಚಿ-ಬಬಲೇಶ್ವರ, ಬಸವೇಶ್ವರ (ಕೆಂಪವಾಡ), ವೆಂಕಟೇಶ್ವರ, ಗೊಡಚಿನಮಲ್ಕಿ, ಚಚಡಿ, ಮುರಗೋಡ, ರಾಮೇಶ್ವರ, ಅಡವಿಸಿದ್ದೇಶ್ವರ, ಶಂಕರಲಿಂಗ, ಮಹಾಲಕ್ಷ್ಮೀ, ಮಾರ್ಕಂಡೇಯ ಹೀಗೆ ಒಟ್ಟು 11 ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿವೆ ಎಂದು ಹೇಳಿದರು.ಜಿಪಂ ವತಿಯಿಂದ ಬೆಳಗಾವಿ ಜಿಲ್ಲೆಯ ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ 25 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು, ಒಟ್ಟು 262 ಜನವಸತಿಗಳಿಗೆ ನದಿ ಜಲಮೂಲದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ. ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಹೊಸದಾಗಿ 4 ಬಹುಗ್ರಾಮ ಯೋಜನೆ ಯೋಜಿಸಲಾಗಿದ್ದು. ಒಟ್ಟಾರೆ ನಾಲ್ಕು ಬಹುಗ್ರಾಮ ಯೋಜನೆಗಳ ಅನುಷ್ಠಾನಕ್ಕೆ₹1,444 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಚಿಕ್ಕೋಡಿ ವಿಭಾಗಕ್ಕೆ ಸಂಬಂಧಿಸಿದಂತೆ ಒಟ್ಟು 9 ಹೊಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಸ್ತಾಪಿಸಿ, ಅದರಲ್ಲಿ ಅಥಣಿ ತಾಲೂಕಿಗೆ 2, ಚಿಕ್ಕೋಡಿ ತಾಲೂಕಿಗೆ 2, ಗೋಕಾಕ ತಾಲೂಕಿಗೆ 1 ಹಾಗೂ ರಾಯಬಾಗ ತಾಲೂಕಿಗೆ 2, ಹುಕ್ಕೇರಿ ತಾಲೂಕಿಗೆ 2 ಹೀಗೆ ಒಟ್ಟು 9 ಯೋಜನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ ಎಂದು ಹೇಳಿದರು.ಕಣಬರ್ಗಿ ಬಡಾವಣೆ ನಿರ್ಮಾಣಕ್ಕೆ ಕ್ರಮ
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆಯಡಿ ಕಣಬರ್ಗಿ ಗ್ರಾಮದಲ್ಲಿನ 159ಎಕರೆ 23 ಗುಂಟೆಯಲ್ಲಿ ಪ್ರಾಧಿಕಾರ ಮತ್ತು ರೈತರ ಸಹಭಾಗೀತ್ವದಡಿ 50:50 ಅನುಪಾತದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 123 ಎಕರೆ 8ಗುಂಟೆ ಜಮೀನನ್ನು ಕಬ್ಜಾ ಪಡೆಯಲಾಗಿದೆ. ಕಬ್ಜಾ ಪಡೆದ ಜಮೀನುಗಳಲ್ಲಿ ಒಟ್ಟು ವಿವಿಧ ಅಳತೆಯ 1247 ನಿವೇಶನ ರೂಪಿಸಲಾಗುವುದು. ಜಿ+3 ಮಾದರಿಯ ಗುಂಪು ಮನೆಗಳ ನಿರ್ಮಾಣಕ್ಕಾಗಿ ಒಟ್ಟು 23ಎಕರೆ 20 ಗುಂಟೆ ವಿಸ್ತೀರ್ಣದ ಜಮೀನು ನಿಗದಿಪಡಿಸಲಾಗಿದ್ದು, ಒಟ್ಟು 2760 ಮನೆ ಹೊಂದಿದ ಸಂಕೀರ್ಣಗಳ ಸಮುಚ್ಛಯ ನಿರ್ಮಿಸಲು ಉದ್ದೇಶಿಸಲಾಗಿದೆ.