ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಜಿಲ್ಲೆಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದರು.ಪಟ್ಟಣ ಸೇರಿದಂತೆ ತಾಲೂಕಿನ ಆಟೋ ನಿಲ್ದಾಣಗಳಿಗೆ ತೆರಳಿ ಆಟೋ ಹಿಂಬದಿಗೆ ಕನ್ನಡ ಸಾಹಿತ್ಯ ಸಮ್ಮೇಳನದ ಪೋಸ್ಟರ್‌ಗಳನ್ನು ಅಂಟಿಸಿ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಮೂರು ದಶಕಗಳ ಬಳಿಕ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದೆ. ಸಕ್ಕರೆ ನಾಡಿನ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಪ್ರತಿಯೊಬ್ಬರೂ ಶಕ್ತಿಮೀರಿ ಶ್ರಮಿಸಿಬೇಕು ಎಂದರು.
ಸಮ್ಮೇಳನ ಕನ್ನಡಿಗರಿಗೆ ಹಬ್ಬ ಇದ್ದಂತೆ. ಇದನ್ನು ಪ್ರತಿಯೊಬ್ಬರು ಸಂಭ್ರಮಿಸಬೇಕು. ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲೆಯ ಕನ್ನಡಾಭಿಮಾನಿಗಳು ಬಹಳ ಕಷ್ಟಪಟ್ಟು ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ತಯಾರಿಗಳನ್ನು ಮಾಡುತ್ತಿದ್ದಾರೆ. ಎಲ್ಲರೂ ಕೈ ಜೋಡಿಸುವಂತೆ ಕರೆ ನೀಡಿದರು.ಪ್ರಚಾರ ಸಮಿತಿ ಅಧ್ಯಕ್ಷನಾಗಿ ವಿಭಿನ್ನ ರೀತಿಯ ಪ್ರಚಾರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಜತೆಗೆ ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ವಿಶ್ವದ ಎಲ್ಲಾ ಕಡೆಗಳಿಂದಲ್ಲೂ ಕನ್ನಡಿಗರು ಸಮ್ಮೇಳನಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯ ಮತ್ತು ಜಿಲ್ಲೆಯ ಎಲ್ಲೆಡೆಯಿಂದ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಶನವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಇದೇ ವೇಳೆ ಆಟೋ ಚಾಲಕರು ಸಮ್ಮೇಳನದ ಪ್ರಚಾರಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು. ಈ ವೇಳೆ ತಾಲೂಕು ರೈತಸಂಘ ಮಾಜಿ ಅಧ್ಯಕ್ಷ ನಾಗರಾಜು, ಮುಖಂಡರಾದ ಎಣ್ಣೆಹೊಳೆಕೊಪ್ಪಲು ಮಂಜು, ಹಿರೇಮರಳಿ ಶಿವಕುಮಾರ್, ಜಲೇಂದ್ರ ಇತರರು ಇದ್ದರು.ರೈತಸಂಘದ ತಾಲೂಕು ಅಧ್ಯಕ್ಷರಾಗಿ ಕೆನ್ನಾಳು ವಿಜಯಕುಮಾರ್ ಆಯ್ಕೆ
ಪಾಂಡವಪುರ:ತಾಲೂಕು ರೈತಸಂಘದ ನೂತನ ಅಧ್ಯಕ್ಷರಾಗಿ ಕೆನ್ನಾಳು ವಿಜಯಕುಮಾರ್ ಅವರನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆಯಂತೆ ಸಂಘಟನೆ ಮುಖಂಡರು ಆಯ್ಕೆ ಮಾಡಿದ್ದಾರೆ.
ಕಳೆದ ಎರಡು ದಶಕಗಳಿಂದ ರೈತ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ರೈತ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ವಿಜಯಕುಮಾರ್ ಅವರು ಕಳೆದ ಬಾರಿ ತಾಲೂಕು ರೈತಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಸಂಘಟನೆಯ ಬಲವರ್ಧನೆ, ಸಂಘಟನಾತ್ಮಕ ಹೋರಾಟ ಉದ್ದೇಶದಿಂದ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ನಿಕಟ ಪೂರ್ವ ತಾಲೂಕು ಅಧ್ಯಕ್ಷ ನಾಗರಾಜು ಅವರು ವಿಜಯಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ.ನೂತನ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಸಂಘಟನೆಯ ಎಲ್ಲಾ ಹಿರಿಯ ಹೋರಾಟಗಾರರು, ಮುಖಂಡರು, ಕಾರ್ಯಕರ್ತರು ಒಕ್ಕೊರಲದಿಂದ ನನ್ನನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಎಲ್ಲರ ಆಶಯದಂತೆ ರೈತಸಂಘ ಬಲವರ್ಧನೆಗೆ ಶಕ್ತಿಮೀರಿ ಶ್ರಮಿಸುವುದಾಗಿ ತಿಳಿಸಿದರು.