ಸಾರಾಂಶ
ರಟ್ಟೀಹಳ್ಳಿ: ಕಳೆದ ವರ್ಷಕ್ಕಿಂತ ಪ್ರಸ್ತುತ ವರ್ಷ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆ ಫಲಿತಾಂಶ ತಾಲೂಕಿನಾದ್ಯಂತ ಕುಸಿತ ಕಂಡಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ಫಲಿತಾಂಶ ಹೆಚ್ಚಳಕ್ಕೆ ಈಗಿನಿಂದಲೇ ಶ್ರಮವಹಿಸಿ ಎಂದು ಜಿಪಂ ಮುಖ್ಯ ಲೆಕ್ಕಾಧಿಕಾರಿ ವಸಂತಕುಮಾರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಆವರಣದಲ್ಲಿ ನಡೆದ ಸಾಮಾನ್ಯ ಸಭೆಯ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಇಲಾಖೆಗೆ ಸರ್ಕಾರ ಎಲ್ಲ ಸವಲತ್ತುಗಳನ್ನು ನೀಡಿದ್ದರೂ ಪ್ರಸ್ತುತ ವರ್ಷದ ಫಲಿತಾಂಶ ಕುಸಿತ ಕಂಡಿದೆ. ಶಿಕ್ಷಕರು ಇಲ್ಲಸಲ್ಲದ ಸಬೂಬು ಹೇಳದೆ ಮುಂಬರುವ ವರ್ಷದ ಫಲಿತಾಂಶದ ಕಡೆ ಗಮನವಹಿಸಬೇಕು. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಪರೀಕ್ಷೆ ಬಗ್ಗೆ ಈಗಿನಿಂದಲೇ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವಾಗಬೇಕು. ಮುಂಬರುವ ವರ್ಷ ವ್ಯತಿರಿಕ್ತ ಫಲಿತಾಂಶ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಜಿಲ್ಲಾದ್ಯಂತ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಲಾರ್ವಾ ಸೊಳ್ಳೆ ಉತ್ಪತ್ತಿಯಾಗುವ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ, ಶಾಲಾ ಸುತ್ತಮುತ್ತಲಿನ ಆವರಣ, ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ಅಂಗನವಾಡಿ ಮಕ್ಕಳು ಮಲಗುವ ಸಮಯದಲ್ಲಿ ಸೊಳ್ಳೆ ಪರದೆ ಬಳಕೆ ಮಾಡಿ ಎಂದರು.
ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಿಂದಾಗಿ ಹಿರೇಕೆರೂರು ಸಾರಿಗೆ ಘಟಕಕ್ಕೆ ₹31.33.ಕೋಟಿ ಆದಾಯ ಬಂದಿದ್ದು, ವಿದ್ಯಾರ್ಥಿಗಳ ಬೇಡಿಕೆಗೆ ಅನುಸಾರ ಬಸ್‌ಗಳನ್ನು ಓಡಿಸಬೇಕು ಹಾಗೂ ಸಾರ್ವಜನಿಕರಿಗೆ ಗುಣ ಮಟ್ಟದ ಸೇವೆ ನೀಡಬೇಕು ಎಂದು ಸಾರಿಗೆ ಸಂಸ್ಥೆಗೆ ಸೂಚಿಸಿದರು.ಇನ್ನು ಮುಂದೆ ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ತಮ್ಮ ಸರ್ಕಾರಿ ಪ್ರಯಾಣದ (ಟಿಪಿ) ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು. ಇನ್ನೂ ಮುಂದೆ ಇಲಾಖಾ ಪ್ರಗತಿ ಪರಶೀಲನಾ ಸಭೆಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೈರಾದ ಅಧಿಕಾರಿಗಳಿಗೆ ಎಚ್ಚರಿಸಿದರು.
ಎಲ್ಲ ಸರ್ಕಾರಿ, ಅರೇ ಸರ್ಕಾರಿ, ಪತ್ರಿಕಾ ವರದಿಗಾರರು, ಸಾರ್ವಜನಿಕರು ಕಡ್ಡಾಯವಾಗಿ ಎಸ್‌ಬಿಐ ಇನ್ನಿತರ ಬ್ಯಾಂಕ್‌ಗಳಲ್ಲಿ ಇನ್ಸೂರೆನ್ಸ್ ಮಾಡಿಸಿಕೊಳ್ಳಿ. ಆ ಮೂಲಕ ಅಪಘಾತವಾದ ಸಂದರ್ಭದಲ್ಲಿ ತಮ್ಮ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.ಉಪ ತಹಸೀಲ್ದಾರ್ ಜಗತಾಪ ಕಂದಾಯ ಇಲಾಖೆಯ ಪ್ರಗತಿ ವರದಿ ನೀಡುವ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡಲು ಪರದಾಡಿದರು. ತಕ್ಷಣ ಎಸ್‌ಡಿಸಿ ರಾಜು ಪೂಜಾರ ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್. ಮಲ್ಲಾಡದ, ತಾಪಂ ಲೆಕ್ಕಾಧಿಕಾರಿ ಎಫ್.ಎನ್. ಮಕಾಂದಾರ, ದೇವರಾಜ ಸಣ್ಣಕಾರಗಿ ಹಾಗೂ ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದರು.