ಮಕ್ಕಳಿಗೆ ಕಲಿಕಾ ಹಬ್ಬದಂತಹ ಕಾರ್ಯಕ್ರಮ ಏರ್ಪಡಿಸಿ ಅವರಿಗೆ ಪ್ರೋತ್ಸಾಹ ನೀಡಿ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮ ವಹಿಸಬೇಕೆಂದು ಮುಧೋಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಮುಲ್ಲಾ ಹೇಳಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಮಕ್ಕಳಿಗೆ ಕಲಿಕಾ ಹಬ್ಬದಂತಹ ಕಾರ್ಯಕ್ರಮ ಏರ್ಪಡಿಸಿ ಅವರಿಗೆ ಪ್ರೋತ್ಸಾಹ ನೀಡಿ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮ ವಹಿಸಬೇಕೆಂದು ಮುಧೋಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ಮುಲ್ಲಾ ಹೇಳಿದರು.ಸಮೀಪದ ಕಸಬಾ ಜಂಬಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಬ್ಬಾಳ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೂಲ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಕೊರತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಮಕ್ಕಳಿಗೆ ಶೈಕ್ಷಣಿಕ ವರ್ಷದಲ್ಲಿ ಕ್ರೀಡಾ ಹಬ್ಬ, ಪ್ರತಿಭಾ ಕಾರಂಜಿ ಹಬ್ಬ, ಕಲಿಕಾ ಹಬ್ಬ, ಜೊತೆಗೆ ಪರೀಕ್ಷಾ ಹಬ್ಬವನ್ನು ಮಕ್ಕಳು ಖುಷಿಯಿಂದ ಎದುರಿಸಬೇಕು ಎಂದ ಅವರು, ಬರುವ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರ ಜೊತೆಗೆ ಪಾಲಕರು ಕೈಗೂಡಿಸಬೇಕು ಎಂದು ಹೇಳಿದರು
ಎಸ್‌ಡಿಎಂಸಿ ಅಧ್ಯಕ್ಷ ಅರ್ಜುನ ನಲವಡೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ದೊಡಮನಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ನರಸನ್ನವರ, ಶಿಕ್ಷಣ ಸಂಯೋಜಕರಾದ ಐ.ಸಿ. ಮಠಪತಿ ಹಾಗೂ ವೈ.ಎಂ. ಪಮ್ಮಾರ, ಸಿಆರ್‌ಪಿಗಳಾದ ಎನ್.ಟಿ. ಬಿರಾದಾರ ಪಾಟೀಲ, ಡಾ.ಸಿದ್ದಣ್ಣ ಬಾಡಗಿ, ಅಕ್ಷತಾ, ಎಸ್ ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಎ.ಡಿ. ನದಾಫ್ ಸ್ವಾಗತಿಸಿದರು. ಸವಿತಾ ಜಮಖಂಡಿ ನಿರೂಪಿಸಿದರು. ಲಕ್ಷ್ಮಿ ಚಂದನಶಿವ ವಂದಿಸಿದರು.