ಸಾರಾಂಶ
ಸರ್ವ ಶ್ರೇಷ್ಠ ಭಾರತಕ್ಕಾಗಿ ಮೊತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಜನತೆ ಮುಂದಾಗಬೇಕು. ಈ ಕುರಿತು ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶ್ರಮಿಸಬೇಕು.
ಕನ್ನಡಪ್ರಭ ವಾರ್ತೆ ಹುಣಸಗಿ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ರಾಜೂಗೌಡ ಅವರು ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ನಡೆದ ಮತ್ತೊಮ್ಮೆ ಮೋದಿ ಸರ್ಕಾರ ಎಂದು ಬರೆದು ಅಭಿಯಾನಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ವ ಶ್ರೇಷ್ಠ ಭಾರತಕ್ಕಾಗಿ ಮೊತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಜನತೆ ಮುಂದಾಗಬೇಕು. ಈ ಕುರಿತು ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶ್ರಮಿಸಬೇಕು ಎಂದರು.
2024ರ ಲೋಕಸಭಾ ಚುನಾವಣೆ ಈ ದೇಶದ ಭವಿಷ್ಯ ನಿರ್ಧರಿಸುತ್ತದೆ. ನಮ್ಮ ಗುರಿ ಮಾತ್ರ ನರೇಂದ್ರ ಮೋದಿ ಅವರನ್ನು ಗೆಲ್ಲಿಸುವುದು ಆಗಿರಲಿ. ಪ್ರತಿಯೊಬ್ಬ ಕಾರ್ಯಕರ್ತನು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ತಪ್ಪದೆ ಮತ ನೀಡುವಂತೆ ಮನೆಮನೆಗೆ ಹೋಗಿ ಕೋರಬೇಕು. 2047ರ ಹೊತ್ತಿಗೆ ವಿಕಸಿತ ಭಾರತ ಸಂಕಲ್ಪದ ಬದ್ಧತೆಯನ್ನು ಜನರಿಗೆ ವಿವರಿಸಬೇಕು ಎಂದರು.ರಾಷ್ಟ್ರಮಟ್ಟದಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯದಲ್ಲಿ ಪಕ್ಷದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗೋಡೆ ಬರಹ ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದಾರೆ. ಮೋದಿಯವರ ನೇತೃತ್ವದಲ್ಲಿ ಭಾರತ ವಿಕಾಸ ಹೊಂದುತ್ತಿದೆ. ಕೇಂದ್ರದ ಅನೇಕ ಯೋಜನೆಗಳು ಜನಸಾಮಾನ್ಯರಿಗೆ ತಲುಪಿವೆ. ಆದ ಕಾರಣ ಪುನಃ ಮೋದಿ ದೇಶದ ಪ್ರಧಾನಿ ಹುದ್ದೆಗೇರಬೇಕು ಎಂದರು.
ಸಂಗಮೇಶ ಹೂಗಾರ, ಮಲ್ಲು ನವಲಗುಡ್ಡ, ಕೃಷ್ಣಾರೆಡ್ಡಿ ಮುದನೂರ, ನಾಗರಾಜ ದೊಡ್ಡಮನಿ ಕೊಡೇಕಲ್, ಮಲ್ಲಿಕಾರ್ಜುನ ಪಾಟೀಲ್ ಸೇರಿದಂತೆ ಇತರರಿದ್ದರು.