ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಇನ್ನಷ್ಟು ಗುಣಾತ್ಮಕವಾಗಿ ಸುಧಾರಿಸಲು ಎಲ್ಲರೂ ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು.
ಕನ್ನಡಪ್ರಭ ವಾರ್ತೆ ಗದಗ
ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಇನ್ನಷ್ಟು ಗುಣಾತ್ಮಕವಾಗಿ ಸುಧಾರಿಸಲು ಎಲ್ಲರೂ ಸಂಘಟಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಡಿಡಿಪಿಐ ಆರ್.ಎಸ್. ಬುರಡಿ ತಿಳಿಸಿದರು.ನಗರದ ಡಂಬಳನಾಕಾದಲ್ಲಿನ ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದಲ್ಲಿ ಸೋಮವಾರ ಜಿಲ್ಲೆಯ ಪ್ರೌಢಶಾಲೆಗಳ ಎಸ್ಸೆಸ್ಸೆಲ್ಸಿ ಗುಣಾತ್ಮಕ ಫಲಿತಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗಾಗಿ ಜರುಗಿದ ಒಂದು ದಿನದ ವಿಶೇಷ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಂಕಲನಾತ್ಮಕ ಪರೀಕ್ಷೆ-1 ಸಂಬಂಧಿಸಿದ SOP, ಪ್ರತಿ ಮಗುವಿನ ಕಲಿಕೆಯ ಪ್ರಗತಿಯ ದಾಖಲಾತಿ, Mission 60+, ಕಲಿಕಾ ಕೊರತೆ ಹಾಗೂ ಹೆಚ್ಚುವರಿ ಬೆಂಬಲದ ಅಗತ್ಯವಿರುವ ಮಕ್ಕಳಿಗಾಗಿ ವಿಶೇಷ ಕ್ರಮಗಳು, ನಿಧಾನ ಕಲಿಕೆಯ ಮಕ್ಕಳಿಗೆ ಅಗತ್ಯವಾದ ಶೈಕ್ಷಣಿಕ ಬೆಂಬಲ, ಮನೆ ಭೇಟಿ ಮತ್ತು ಓದು ಮನೆ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.ಜಿಲ್ಲೆಯ ಕೆಪಿಎಸ್ ಹಾಗೂ ಪಿ.ಎಂ ಮಾದರಿ ಶಾಲೆಗಳು ಉತ್ತಮ ಕಲಿಕಾ ವಾತಾವರಣ ನಿರ್ಮಿಸಿ ಇತರ ಶಾಲೆಗಳಿಗೆ ಮಾದರಿಯಾಗಬೇಕು. ಶಾಲೆಗಳಲ್ಲಿ ಕೌಶಲ್ಯ ಶಿಕ್ಷಣ, ಮೌಲ್ಯ ಶಿಕ್ಷಣ, ಮಕ್ಕಳ ಸುರಕ್ಷತೆ, ಬಾಲ್ಯ ವಿವಾಹ ತಡೆ, ಫೋಕ್ಸೋ ಕಾಯ್ದೆ, ಮಹಿಳೆಯರಿಗಾಗಿ ದೂರು ನಿವಾರಣಾ ಸಮಿತಿ, ನಶಾಮುಕ್ತ ಶಾಲಾ ವಾತಾವರಣ, KAAMS ಹಾಗೂ ನಿರಂತರ ಹಾಜರಾತಿ ಕುರಿತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಈ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಕರಾವಳಿ ಭಾಗದ ಜಿಲ್ಲೆಗಳಿಗಿಂತ ಗುಣಾತ್ಮಕವಾಗಿ ಮೀರಿಸುವ ಗುರಿಯೊಂದಿಗೆ ಎಲ್ಲರೂ ಪಣತೊಟ್ಟು ಕಾರ್ಯನಿರ್ವಹಿಸಬೇಕು ಎಂದರು.ಜಿಲ್ಲೆಯ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್.ಬಿ.ರೆಡ್ಡರ ಅವರು, ಸಂಕಲನಾತ್ಮಕ ಪರೀಕ್ಷೆ -1 ಹಾಗೂ ಅರ್ಧವಾರ್ಷಿಕ ಪರೀಕ್ಷೆಗೆ ಸಂಬಂಧಿಸಿದ ಕಾರ್ಯಾಚರಣೆ ಮಾರ್ಗಸೂಚಿ (SOP)ಗಳನ್ನು ಹಾಗೂ PPT ಮೂಲಕ ಪರೀಕ್ಷಾ ಸಿದ್ಧತೆ, ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಮತ್ತು ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಿದರು.
ಸಮಗ್ರ ಶಿಕ್ಷಣ ಕರ್ನಾಟಕದ ಎಪಿಸಿಓ ಶಿವಕುಮಾರ ಕುರಿ, ಉಪನ್ಯಾಸಕ ಕೊಟ್ರೇಶ್ ವಿಭೂತಿ, ಅಧ್ಯಕ್ಷತೆ ವಹಿಸಿದ್ದ ಡಯಟ್ ಪ್ರಾಂಶುಪಾಲ ಕೆ.ಡಿ.ಬಡಿಗೇರ ಮಾತನಾಡಿದರು.ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಯಂತಿ ಅಕ್ಕ ಅವರು, ಮಾನವೀಯ ಮೌಲ್ಯ, ನೈತಿಕ ಮೌಲ್ಯ, ಆಧ್ಯಾತ್ಮಿಕ ಮೌಲ್ಯ ಹಾಗೂ ದೈವೀ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಎಂ.ಎಚ್.ಕಂಬಳಿ, ರವಿಪ್ರಕಾಶ್ ಎಸ್.ಎನ್., ಎಸ್.ಎನ್. ಪಾಟೀಲ ಸೇರಿ ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರು ಇದ್ದರು.