ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಸೂಚಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಸೂಚಿಸಿದರು.

ಸ್ಥಳೀಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ದೌರ್ಜನ್ಯ ಪ್ರಕರಣ ನಿಯಂತ್ರಣ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಲು ದೌರ್ಜನ್ಯ ಪ್ರಕರಣಗಳ ತಾಲೂಕು ನಿಯಂತ್ರಣ ಸಮಿತಿ ಜಿಲ್ಲೆಯ ಆಯಾ ತಾಲೂಕಿನ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದು, ಇದರಲ್ಲಿ ಇರುವ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುವುದರ ಜತೆಗೆ ಪ್ರತಿ ಬುಧವಾರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುರುತಿಸಲಾದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಗ್ರಾಮಗಳಲ್ಲಿ ಸಭೆ ನಡೆಸುವ ಮೂಲಕ ವಿವಿಧ ಸಮುದಾಯಗಳಲ್ಲಿ ಸೌಹಾರ್ದತೆ ಮೂಡಿಸುವ ಕೆಲಸ ಮಾಡಬೇಕು ಎಂದರು.

ಜಿಲ್ಲೆಯ ಯಾವುದೇ ಸ್ಥಳದಲ್ಲಿ ದೌರ್ಜನ್ಯ, ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ಅಸ್ಪೃಶ್ಯತೆ ಆಚರಣೆಯಂತಹ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದರೆ ಈ ಕುರಿತು ತಕ್ಷಣ ಕ್ರಮವಹಿಸಬೇಕು. ಜಿಲ್ಲೆಯ ಯಾವುದೇ ಸಮಸ್ಯೆಗಳು ನಮಗಿಂತ ಮೊದಲು ಆಯಾ ತಾಲೂಕಿನ ಸಮಸ್ಯೆಗಳು ತಮಗೆ ಮೊದಲು ತಿಳಿಯುತ್ತವೆ. ಹಾಗಾಗಿ ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ಪ್ರತಿ ಬುಧವಾರ ಈಗಾಗಲೇ ಗುರುತಿಸಿರುವ ಸೆನ್ಸಿಟಿವ್ ಹಳ್ಳಿಗಳಲ್ಲಿ ಆಯಾ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಒಳಗೊಂಡ ಸಮಿತಿ ಸಭೆ ಪ್ರತಿವಾರ ಸಭೆ ನಡೆಸಿದ ಮಾಹಿತಿ ನೀಡಬೇಕು. ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿದರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕಾಂದೂ ಮಾತನಾಡಿ, ಕೆಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಬಹಳ ದೌರ್ಜನ್ಯ ಪ್ರಕರಣಗಳು ಬಂದಿವೆ ಅವುಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸುವುದರ ಜೊತೆಗೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಗ್ರಾಮಗಳೆಂದು ಗುರುತಿಸಿದ ಊರುಗಳಲ್ಲಿ ಸಭೆ ನಡೆಸಿ ವಿವಿಧ ಸಮುದಾಯಗಳು ಸೌಹಾರ್ದತೆಯಿಂದ ಇರುವಂತೆ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು. ಆಯಾ ಗ್ರಾಮಗಳಿಗೆ ಭೇಟಿ ನೀಡಿದಾಗ ಅಲ್ಲಿನ ಅಂಗನವಾಡಿ, ಶೌಚಾಲಯ ಸೇರಿದಂತೆ ಇತರೆ ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಬೇಕು. ಅಧಿಕಾರಿಗಳು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಮಕ್ಕಳಿಗಾಗಿ ಸರಿಯಾಗಿ ಊಟ ಮತ್ತು ಉಪಹಾರ ನೀಡುತ್ತಿರುವುದರ ಬಗ್ಗೆ ನಿರಂತರವಾಗಿ ನಿಗಾ ವಹಿಸುವುದಷ್ಟೇ ಅಲ್ಲದೇ ನಾನಾ ಇಲಾಖೆಯ ಅಧಿಕಾರಿಗಳು ಟೀಮ್ ರೀತಿಯಲ್ಲಿ ಕೆಲಸ ಮಾಡಿದಾಗ ಯಾವುದೇ ಸಮಸ್ಯೆಗಳು ಇರುವುದಿಲ್ಲ ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ ಅವರು ಮಾತನಾಡಿದರು. ಸಭೆಯಲ್ಲಿ ಜಿಲ್ಲೆ ವಿವಿಧ ತಾಲೂಕಿನ ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.