ಸಾರಾಂಶ
12ನೇ ಶತಮಾನದಲ್ಲಿ ಬಲವಾಗಿ ಬೇರೂರಿದ್ದ ಮೂಢನಂಬಿಕೆ, ಅನ್ಯಾಯ-ಅನಾಚಾರದ ವಿರುದ್ಧ ಸಿಡಿದೆದ್ದು ವಚನಗಳ ಮೂಲಕ ಹೊಸಕ್ರಾಂತಿ ಮಾಡಿ ಸಮಸಮಾಜದ ಕನಸು ಕಂಡಿದ್ದ ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದಾರೆ.
ನರಗುಂದ:
ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದ ಸಾಂಸ್ಕೃತಿಕ ರಾಯಬಾರಿ ಬಸವಣ್ಣನವರ ತತ್ವ-ಸಿದ್ಧಾಂತಗಳು ಸರ್ವಕಾಲಿಕವಾಗಿವೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂದು ಸರ್ವರಿಗೂ ಸಮಾನತೆ ಬಯಸಿದ್ದ ಬಸವಣ್ಣ ಈ ನಾಡಿನ ಶ್ರೇಷ್ಠ ಸಮಾಜ ಸುಧಾರಕ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ ಹೇಳಿದರು.ಅವರು ಶುಕ್ರವಾರ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ನರಗುಂದದ ತಾಲೂಕಾಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು-ಹಣ್ಣು ವಿತರಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಲವಾಗಿ ಬೇರೂರಿದ್ದ ಮೂಢನಂಬಿಕೆ, ಅನ್ಯಾಯ-ಅನಾಚಾರದ ವಿರುದ್ಧ ಸಿಡಿದೆದ್ದು ವಚನಗಳ ಮೂಲಕ ಹೊಸಕ್ರಾಂತಿ ಮಾಡಿ ಸಮಸಮಾಜದ ಕನಸು ಕಂಡಿದ್ದ ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದಾರೆ. ಅನುಭವ ಮಂಟಪ ಸ್ಥಾಪಿಸಿ ಆ ಮೂಲಕ ಸರ್ವರಿಗೂ ಸಮಾನವಕಾಶ ಕಲ್ಪಿಸಿ ಕಾಯಕ-ದಾಸೋಹದ ಪರಿಕಲ್ಪನೆ ನೀಡಿದ ಅವರು ಜಗತ್ತಿನ ಮೊದಲ ಸಂಸತ್ತಿನ ಸಂಸ್ಥಾಪಕರಾಗಿದ್ದಾರೆ ಎಂದು ಹೇಳಿದರು.ಬೆಳಗಾವಿ ರುದ್ರಾಕ್ಷಿಮಠದ ಡಾ. ಶಿವಯೋಗಿ ದೇವರು ಮಾತನಾಡಿ, ಬಸವಣ್ಣನವರು ಪ್ರತಿಪಾದಿಸಿದ ತತ್ವ-ಸಿದ್ಧಾಂತ ಇಂದಿಗೂ ಆದರ್ಶಪ್ರಾಯವಾಗಿವೆ. ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೀರ್ತಿ ಬಸವಾದಿ ಶಿವಶರಣರಿಗೆ ಸಲ್ಲುತ್ತದೆ ಎಂದರು.
ಈ ವೇಳೆ ತಾಲೂಕಾಸ್ಪತ್ರೆ ಸಿಬ್ಬಂಧಿಗಳಾದ ಡಾ. ಸಂತೋಷ ಹನಜಿ, ಮಹಾಂತೇಶ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ಮೌಲಾಸಾಬ್ ಠಾನೇದ, ರಾಜೇಶ್ವರ ಪಿಳ್ಳೆ, ಸಾಹಿತಿ ವೀರನಗೌಡ ಮರಿಗೌಡ್ರ, ಶಿವಯ್ಯ ಬಳಗಾನೂರಮಠ, ಮಹಾಂತೇಶ ಹಿರೇಮಠ, ವೀರಯ್ಯ ಸಾಲಿಮಠ, ಬಸವರಾಜ ಹಡಪದ, ಮರಗಪ್ಪ ಬಂಡೆನ್ನವರ, ಬಿ.ಸಿ. ಐನಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.