ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮದಲಗಟ್ಟಿ ಆಂಜನೇಯ ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ₹50 ಲಕ್ಷ ವೆಚ್ಚದ ಕಲ್ಯಾಣ ಮಂಟಪ ಕಾಮಗಾರಿಗೆ ಸಂಸದ ಈ. ತುಕಾರಾಂ ಪೂಜೆ ನೆರವೇರಿಸಿ ವರ್ಷ ಕಳೆದರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ.
ಮದಲಗಟ್ಟಿ ಆಂಜನೇಯ ದೇವಸ್ಥಾನಕ್ಕೆ ಪ್ರತಿ ಶನಿವಾರ, ಹಬ್ಬ-ಹರಿದಿನಗಳಲ್ಲಿ ಭಕ್ತರು ಆಗಮಿಸುತ್ತಾರೆ. ಈ ಸುಕ್ಷೇತ್ರದಲ್ಲಿ ಮಂಗಲ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ಭಕ್ತರ ಅನುಕೂಲಕ್ಕೆ ಸುಸಜ್ಜಿತವಾದ ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಸಂಸದ ಈ ತುಕಾರಾಂ 2025ರ ಜೂನ್ 28ರಂದು ದೇವಸ್ಥಾನಕ್ಕೆ ಆಗಮಿಸಿ ಭೂಮಿಪೂಜೆ ನೆರವೇರಿಸಿದ್ದರು. ಜಿಂದಾಲ್ ಕಂಪನಿಯ ₹50 ಲಕ್ಷ ಸಿಎಸ್‌ಆರ್ ಅನುದಾನದಿಂದ ದೇವಸ್ಥಾನಕ್ಕೆ ಸುಸಜ್ಜಿತವಾದ ಕಲ್ಯಾಣ ಮಂಟಪ ನಿರ್ಮಿಸುತ್ತೇವೆ. ಈ ಕಾಮಗಾರಿಗೆ ₹50 ರಿಂದ ₹60 ಲಕ್ಷವಾದರೂ ಅನುದಾನ ನೀಡುತ್ತೇವೆ. ಗುಣಮಟ್ಟದ ಕಾಮಗಾರಿ ಆಗಬೇಕು ಎಂದು ಅವರು ನೀಡಿದ ಭರವಸೆ ಇಂದಿಗೂ ಈಡೇರಿಲ್ಲ. ಅಂದು ಶಾಸಕಿ ಅನ್ನಪೂರ್ಣ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಸೇರಿದಂತೆ ಇತರೆ ಗಣ್ಯರು ಸಾಕ್ಷಿಯಾಗಿ ಭೂಮಿಪೂಜೆ ನೆರವೇರಿಸಿದ್ದರು.ದೇವಸ್ಥಾನಕ್ಕೆ ಸೇರಿದ್ದ ಕೆಲವು ಕಟ್ಟಡಗಳನ್ನು ತೆರವು ಮಾಡಿ ವಿಶಾಲವಾದ ಜಾಗದಲ್ಲಿ ಈ ಕಾಮಗಾರಿ ಮಾಡಬೇಕು. ಇದಕ್ಕೆ ಅಗತ್ಯವಿರುವ ಅನುದಾನವನ್ನು ಸಂಸದರು ನೀಡುತ್ತಾರೆ ಎಂಬ ಭರವಸೆಯನ್ನು ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ನೀಡಿದ್ದರು.
ಪಟ್ಟಣದಲ್ಲಿ ಅಂಚೆ ಇಲಾಖೆ ಕಚೇರಿ ನಿರ್ಮಾಣಕ್ಕೆ ಅಗತ್ಯ ನಿವೇಶನ ಇದೆ. ಕಚೇರಿ ಕಾಮಗಾರಿಗೆ ಶೀಘ್ರದಲ್ಲೇ ಭೂಮಿಪೂಜೆ ಮಾಡುತ್ತೇನೆ ಎಂದು ಸಂಸದರೇ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವ ಕೆಲಸವೂ ಆಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.ಅನುದಾನ ಎಲ್ಲಿಗೆ ಹೋಯ್ತೋ ತಿಳಿದಿಲ್ಲ:
ಮದಲಗಟ್ಟಿ ಆಂಜನೇಯ ಸ್ವಾಮಿ ದರ್ಶನಕ್ಕೆ ರಾಜ್ಯ, ಅಂತಾರಾಜ್ಯದಿಂದ ಭಕ್ತರು ಆಗಮಿಸುತ್ತಾರೆ. ಭಕ್ತರ ಅನುಕೂಲಕ್ಕೆ ಯಾವ ಸೌಲಭ್ಯವೂ ಇಲ್ಲ. ಇಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ಮಾಡುತ್ತಾರೆಂದು ಭೂಮಿಪೂಜೆ ಮಾಡಲಾಗಿತ್ತು. ಕಾಮಗಾರಿ ಏನಾಗಿದೆ ಎಂಬುದು ಈ ವರೆಗೂ ಗೊತ್ತಿಲ್ಲ. ಅನುದಾನ ಎಲ್ಲಿಗೆ ಹೋಯ್ತೋ ತಿಳಿದಿಲ್ಲ ಎನ್ನುತ್ತಾರೆ ಮದಲಗಟ್ಟಿ ಗ್ರಾಮಸ್ಥರು.