ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಪುತ್ತೂರು -ಬೆಳ್ತಂಗಡಿ ತಾಲೂಕಿನ ಸಂಪರ್ಕ ಕೊಂಡಿಯಾಗಿರುವ ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ 240 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಏತ ನೀರಾವರಿ ಯೋಜನೆ ಮತ್ತು ಸೇತುವೆ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲಿಸಿದರು. ಅಲ್ಲದೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ನಿರ್ದೇಶಕ ಪ್ರಭಾಕರ ಗೌಡ ಗುತ್ಯೋಡಿ, ಬಂದಾರು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಂಗಾಧರ ಪೂಜಾರಿ, ಬಂದಾರು ಪಂಚಾಯಿತಿ ಮಾಜಿ ಸದಸ್ಯ ಶಿವಪ್ರಸಾದ್ ಗೌಡ ಸುದೆಪ್ಪಿಲ, ಮುಗೇರಡ್ಕ ದೈವಸ್ಥಾನ ಆಡಳಿತ ಮೊಕ್ತೇಸರರಾದ ಮನೋಹರ ಗೌಡ ಅಂತರ, ಚಂದ್ರಹಾಸ ಗೌಡ ದೇವಸ, ರಾಮಣ್ಣ ಗೌಡ ವೈ ಏರ್ಮಾಳ, ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ. ಕೆ ಬಂದಾರು, ಪ್ರವೀಣ್ ಮತ್ತಿಲಾರು, ಅಶೋಕ ಗೌಡ ಬರುಂಗುಡೆಲು, ಜಗದೀಶ್ ಗೌಡ ಅರ್ಬಿ,ಇಲಾಖಾ ಅಧಿಕಾರಿಗಳು, ಗುತ್ತಿಗೆದಾರರು, ಹಲವಾರು ಪ್ರಮುಖರು ಹಾಗೂ ನಾಗರಿಕರು ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ಏತ ನೀರಾವರಿ ಯೋಜನೆ ಮತ್ತು ಸೇತುವೆ ಕಾಮಗಾರಿಯು ನಡೆಯುತ್ತಿದ್ದು, ಸುಮಾರು 240 ಕೋಟಿ ರು. ವೆಚ್ಚದ ಈ ಯೋಜನೆಯು ಜಿಲ್ಲೆಯಲ್ಲೇ ಅತ್ಯಂತ ದೊಡ್ಡ ಹಾಗೂ ಮೊದಲ ಏತ ನೀರಾವರಿ ಯೋಜನೆಯಾಗಿದೆ.
ಈ ಯೋಜನೆಯಿಂದ ಸುಮಾರು 16 ಗ್ರಾಮಗಳ 1,100 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಮುಗೇರಡ್ಕ ಮಾತ್ರ ವಲ್ಲದೆ ಸುತ್ತಮುತ್ತಲಿನ ಹಲವಾರು ಗ್ರಾಮದ ರೈತರ ಜಮೀನುಗಳಿಗೆ ವರ್ಷವಿಡೀ ನೀರಿನ ಸೌಲಭ್ಯ ದೊರೆಯಲಿದ್ದು, ಕೃಷಿ ಚಟುವಟಿಕೆಗಳಿಗೆ ವೇಗ ಸಿಗಲಿದೆ.ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆಯು ಮುಗೇರಡ್ಕದಿಂದ ಬೆದ್ರೋಡಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ನೇತ್ರಾವತಿ ನದಿಯ ಪುತ್ತೂರು - ಬೆಳ್ತಂಗಡಿ ತಾಲೂಕಿನ ಎರಡೂ ದಂಡೆಗಳ ಜನರಿಗೆ ಹೊಸ ಸೇತುವೆಯಿಂದಾಗಿ ಪ್ರಯಾಣದ ದೂರ ಮತ್ತು ಸಮಯ ಗಣನೀಯವಾಗಿ ಕಡಿಮೆಯಾಗಲಿದೆ. ಕಿಂಡಿ ಅಣೆಕಟ್ಟು ಮಾದರಿಯ ಈ ಯೋಜನೆಯಿಂದಾಗಿ ಸುತ್ತಮುತ್ತಲಿನ ಭಾಗಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲು ಸಹಕಾರಿಯಾಗುತ್ತದೆ.