ವಿಜಯನಗರ ಅಭಿವೃದ್ಧಿಗೆ ಜವಾಬ್ದಾರಿಯಿಂದ ಕೆಲಸ ಮಾಡಿ: ಸಚಿವ ಜಮೀರ್ ಅಹ್ಮದ್ ಖಾನ್

| Published : Aug 19 2024, 12:49 AM IST

ವಿಜಯನಗರ ಅಭಿವೃದ್ಧಿಗೆ ಜವಾಬ್ದಾರಿಯಿಂದ ಕೆಲಸ ಮಾಡಿ: ಸಚಿವ ಜಮೀರ್ ಅಹ್ಮದ್ ಖಾನ್
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕಾಂಗದ ಜೊತೆ ಕಾರ್ಯಾಂಗವು ಕೈ ಜೋಡಿಸಿದರೆ ಮಾತ್ರ ದೇಶ, ರಾಜ್ಯ, ಜಿಲ್ಲೆಯ ಅಭಿವೃದ್ಧಿ ಸಾಧ್ಯ ಇದೆ.

ಹೊಸಪೇಟೆ: ಶಾಸಕಾಂಗದ ಜೊತೆ ಕಾರ್ಯಾಂಗವು ಕೈ ಜೋಡಿಸಿದರೆ ಮಾತ್ರ ದೇಶ, ರಾಜ್ಯ, ಜಿಲ್ಲೆಯ ಅಭಿವೃದ್ಧಿ ಸಾಧ್ಯ ಇದೆ. ಎಲ್ಲ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿಗಾಗಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ವಿಜಯನಗರ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕರಿಗೆ ಸರಿಯಾಗಿ ಪಡಿತರ ಸಿಗುತ್ತಿದೆಯಾ? ಪಡಿತರ ಕಳ್ಳ ಸಾಗಾಣಿಕೆಯ ಬಗ್ಗೆ ಬಹಳ ದೂರುಗಳು ಬರುತ್ತಿವೆ. ಇದರ ಬಗ್ಗೆ ಸರಿಯಾದ ನಿಗಾವಹಿಸಬೇಕು ಎಂದರು.

ಗೃಹಲಕ್ಷೀ ಯೋಜನೆಯಡಿ ಹಣ ಸರಿಯಾಗಿ ಜನರಿಗೆ ತಲುಪಿಸಿ, ಎಷ್ಟು ತಿಂಗಳು ಕಂತು ಬಾಕಿ ಇದೆ? ಮೂರು ನಾಲ್ಕು ತಿಂಗಳಿಂದ ಗೃಹಲಕ್ಷ್ಮಿ ಹಣವೇ ಬಂದಿಲ್ಲ ಎನ್ನುವ ಬಹಳ ದೂರುಗಳು ಬಂದಿವೆ. ಜನಸಾಮಾನ್ಯರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರಿಗೆ ಸರಿಯಾಗಿ ಹಣ ತಲುಪಿಸುತ್ತಿದ್ದಿರಾ? ಎಂದು ಸಚಿವರು ಪ್ರಶ್ನಿಸಿದರು.

ಈಗಾಗಲೇ ಹಣ ಜಮೆ ಮಾಡಲಾಗುತ್ತಿದೆ. ಏಪ್ರಿಲ್ -ಮೇ, ಜೂನ್, ಜುಲೈ ಗೃಹಲಕ್ಷ್ಮೀ ಯೋಜನೆ ಹಣ ಬರಬೇಕು. ಖಜಾನೆಯಲ್ಲಿ ಹಣ ಇದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕಿದೆ ಎಂಬ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ನೀಡಿದರು.

ಶಕ್ತಿ ಯೋಜನೆ, ಯುವನಿಧಿ ಯೋಜನೆಯ ಬಗ್ಗೆ ಕೂಡ ಇದೆ ವೇಳೆ ಸಚಿವರು ವಿಚಾರಿಸಿದರು.

ಕೃಷಿ ಇಲಾಖೆ ಎಷ್ಟು ಪ್ರದೇಶದಲ್ಲಿ ಬೆಳೆ ರೈತರು ಬೆಳೆದಿದ್ದಾರೆ, ರೈತರಿಗೆ ಸರಿಯಾಗಿ ಗೊಬ್ಬರ, ಬೀಜಗಳನ್ನು ತಲುಪಿಸಬೇಕು. ತೋಟಗಾರಿಕೆ ಇಲಾಖೆಯಲ್ಲಿ ಚೆಂಡುಹೂ, ಸೇವಂತಿಗೆ ಹೂಗಳಿಗೆ ಸಹ ಬೆಳೆ ಪರಿಹಾರ ನೀಡಬೇಕು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದಲ್ಲಿ ಅದನ್ನು ಸರಿ ಪಡಿಸಿಕೊಳ್ಳಿ. ಪಶುಸಂಗೋಪನೆ ಇಲಾಖೆಯಲ್ಲಿರುವ ವಿವಿಧ ಯೋಜನೆಗಳ ಸೌಲಭ್ಯಗಳು ಜನರಿಗೆ ಸಿಗುವಂತೆ ಮಾಡಬೇಕು. ಕುರಿಗಳು ಸತ್ತ ಸ್ಥಳದಲ್ಲಿ ಅಧಿಕಾರಿಗಳು ನೇರವಾಗಿ ಹೋಗಿ ಪರಿಶೀಲಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಕುರಿ ಸತ್ತರೆ ₹5 ಸಾವಿರ ಪರಿಹಾರ ಇದೆ. ಅದನ್ನು ಕುರಿಗಾಹಿಗಳಿಗೆ ಸರಿಯಾಗಿ ತಲುಪಿಸಿ ಎಂದು ಸೂಚಿಸಿದರು.

ಸಂಸದ ತುಕಾರಾಂ ಮಾತನಾಡಿ, ಅಧಿಕಾರಿಗಳು ತಿಂಗಳಿಗೊಮ್ಮೆ ಶಾಸಕರನ್ನು ಭೇಟಿ ಮಾಡಿ ಏನಾದರು ಸಮಸ್ಯೆ ಇದ್ದರೆ ಚರ್ಚೆ ಮಾಡಿ ಪರಿಹರಿಸಿಕೊಳ್ಳಬೇಕು. ಪಿಡಿಒಗಳು ಇನ್ನು ಮುಂದೆ ಡೈರಿಗಳನ್ನು ನಿರ್ವಹಣೆ ಮಾಡಬೇಕು. ಎರಡು ಪಂಚಾಯತಿಗೆ ಕೆಲಸ ಮಾಡುವಾಗ ಪಂಚತಂತ್ರ-2 ನಲ್ಲಿ ಕಡ್ಡಾಯವಾಗಿ ಹಾಜರಾತಿ ಹಾಕಬೇಕು. ಸಮಾಜ ಕಲ್ಯಾಣ ಇಲಾಖೆಯ ಅಡಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಮೂಲಭೂತ ಸೌಕರ್ಯಗಳು ದೊರೆಯುಂತೆ ಮಾಡಬೇಕು.

ಜಿಲ್ಲೆಯ ಎಸ್‌ಎಸ್‌ಎಲ್‌ಸಿಯ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.

ಶಾಸಕರಾದ ಎಚ್.ಆರ್. ಗವಿಯಪ್ಪ, ನೇಮರಾಜ್‌ ನಾಯ್ಕ, ಡಾ.ಶ್ರೀನಿವಾಸ, ಎಂ.ಪಿ. ಲತಾ ಮಲ್ಲಿಕಾರ್ಜುನ, ಕೃಷ್ಣ ನಾಯ್ಕ, ಎಂ.ಪಿ.ಲತಾ ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಜಿಪಂ ಸಿಇಒ ಅಕ್ರಮ ಶಾ, ಎಸ್ಪಿ ಶ್ರೀಹರಿ ಬಾಬು, ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್ ಹಾಗೂ ವಿವಿಧ ತಾಲ್ಲೂಕುಗಳ ತಹಸೀಲ್ದಾರರು, ತಾಪಂ ಇಒಗಳು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.