ಸಾರಾಂಶ
ಮುಂಡಗೋಡ: ವೈದ್ಯರನ್ನು ದೇವರೆಂದು ಭಾವಿಸುವ ಜನರ ಆಕ್ರೋಶಕ್ಕೆ ಗುರಿಯಾದರೆ ಸಮಾಜದಲ್ಲಿ ಬದುಕುವುದು ಕಷ್ಟವಾಗುತ್ತದೆ. ಜವಾಬ್ದಾರಿಯಿಂದ ಕೆಲಸ ಮಾಡಿ. ಇಲ್ಲವೇ ರಾಜೀನಾಮೆ ಕೊಟ್ಟು ತೆರಳಿ ಎಂದು ಶಾಸಕ ಶಿವರಾಮ ಹೆಬ್ಬಾರ ಆಕ್ರೋಶಭರಿತವಾಗಿ ವೈದ್ಯರಿಗೆ ಎಚ್ಚರಿಸಿದರು.ಇತ್ತೀಚೆಗೆ ಹಾವು ಕಚ್ಚಿ ಅಂಗನವಾಡಿ ಬಾಲಕಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದೆ ಎಂಬ ಆರೋಪದ ಹಿನ್ನೆಲೆ ತಾಲೂಕು ಆಸ್ಪತ್ರೆಯ ಸಭಾಂಗಣದಲ್ಲಿ ಶನಿವಾರ ಸಂಜೆ ಸಭೆ ನಡೆಸಿದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಭರತ್ ಅವರ ಅಸಮರ್ಪಕ ಹೇಳಿಕೆಯಿಂದ ಅತೃಪ್ತಿಗೊಂಡ ಶಾಸಕ ಶಿವರಾಮ ಹೆಬ್ಬಾರ ಅವರು ಟಿಎಚ್ಒ ಅವರನ್ನು ತರಾಟೆಗೆ ತೆಗೆದುಕೊಂಡರು. ಆರು ಜನ ವೈದ್ಯರಿದ್ದರೂ ಒಂದು ಮಗುವಿನ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಬಳಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸ್ವರೂಪರಾಣಿ ಪಾಟೀಲ್ ಅವರು, ಹಾವು ಕಚ್ಚಿದಾಗ ಫೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಕರ್ತವ್ಯದಲ್ಲಿದ್ದ ವೈದ್ಯೆ ದೀಪಾ ತಂತ್ರಿ ಅವರು ಕಿಮ್ಸ್ ಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದ್ದರು ಎಂದು ಮಾಹಿತಿ ನೀಡಿದರು.
ತಾಲೂಕು ಆಸ್ಪತ್ರೆಯ ವೈದ್ಯರು ಸರಿಯಾಗಿ ಕೆಲಸ ಮಾಡುವುದಿಲ್ಲ. ತಮ್ಮ ಖಾಸಗಿ ಆಸ್ಪತ್ರೆಗೆ ಕರೆಸಿ ಹಣ ಪೀಕುತ್ತಾರೆ. ಅಲ್ಲದೆ ಆಸ್ಪತ್ರೆಗೆ ಬರುವ ಬಹುತೇಕ ರೋಗಿಗಳನ್ನು ಅನವಶ್ಯಕವಾಗಿ ಹುಬ್ಬಳ್ಳಿಗೆ ಕಳುಹಿಸಿಕೊಡಲಾಗುತ್ತದೆ ಎಂಬ ಸಾರ್ವಜನಿಕರ ದೂರಿನನ್ವಯ ಶಾಸಕ ಹೆಬ್ಬಾರ ಅವರು ತಾಲೂಕು ಆಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್‌ಗೆ ಕಳಿಸಿಕೊಡಲಾದ ಕೇಸ್‌ಗಳ ಲಿಸ್ಟ್ ಪರಿಶೀಲನೆ ನಡೆಸಿದಾಗ, ಒಂದೇ ತಿಂಗಳಲ್ಲಿ ೧೪೪ ಕೇಸ್‌ಗಳು ರೆಫರ್ ಆಗಿರುವ ಕುರಿತು ಮಾಹಿತಿ ತಿಳಿದು ಬಂತು. ಇದರಿಂದ ಮತ್ತಷ್ಟು ಅಸಮಾಧಾನಗೊಂಡ ಶಾಸಕರು, ಎಲ್ಲದಕ್ಕೂ ಹುಬ್ಬಳ್ಳಿಗೆ ಕಳುಹಿಸುವುದಾರೆ ನಿಮ್ಮ ಅವಶ್ಯಕತೆ ಏನಿದೆ ಎಂದು ವೈದ್ಯರನ್ನು ಪ್ರಶ್ನಿಸಿದರು.ಶಾಸಕರ ಮಾತಿನ ನಡುವೆ ಧ್ವನಿಗೂಡಿಸಿದ ತಹಸಿಲ್ದಾರ್ ಶಂಕರ್ ಗೌಡಿ ಅವರು, ಸಾರ್ವಜನಿಕರು ತಹಸೀಲ್ದಾರ್ ಕಚೇರಿಗೆ ಬಂದು ತಾಲೂಕಾಸ್ಪತ್ರೆಯ ವೈದ್ಯರು ಪ್ರತಿಯೊಂದಕ್ಕೂ ಹುಬ್ಬಳ್ಳಿಯ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ ಎಂದು ದೂರು ನೀಡುತ್ತಾರೆ ಎಂದರು.ಇಂತಹ ಘಟನೆಗಳಾದಾಗ ಜನ ವ್ಯವಸ್ಥೆಯ ವಿರುದ್ಧ ಆಕ್ರೋಶಗೊಳ್ಳುತ್ತಾರೆ. ಎಷ್ಟೆಲ್ಲ ಆಧುನಿಕ ವ್ಯವಸ್ಥೆ, ಸಲಕರಣೆಗಳಿದ್ದರೂ ಬಾಲಕಿಯ ಜೀವವನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂಬುದು ತೀವ್ರವಾದ ನೋವು ತರುತ್ತದೆ. ಇಂತಹ ಪ್ರತಿಕೂಲ ಪರಿಸ್ಥಿತಿ ಆದಾಗ ಎಲ್ಲ ವೈದ್ಯರು ಒಂದಾಗಿ ಸೂಕ್ಷ್ಮವಾಗಿ ಪ್ರಕರಣವನ್ನು ನಿಭಾಯಿಸಬೇಕಿತ್ತು ಎಂದರು.ಇದೇ ವೇಳೆ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವ ವೈದ್ಯರನ್ನು ಕರೆಸಿ ಪ್ರತಿಯೊಬ್ಬ ವೈದ್ಯರಿಂದ ಮಾಹಿತಿ ಪಡೆದರು. ಇದೆ ವೇಳೆ ವೈದ್ಯರಿಂದ ತಾಲೂಕು ಆಸ್ಪತ್ರೆಯಲ್ಲಿ ಜನರಲ್ ಫಿಜಿಷಿಯನ್ ಹಾಗೂ ಅನಸ್ತೇಶಿಯಾ ಸ್ಪೆಷಲಿಸ್ಟ್‌ಗಳ ಕೊರತೆ ಕುರಿತು ಮಾಹಿತಿಯನ್ನೂ ಶಾಸಕರು ಪಡೆದು, ಈ ಎರಡು ವೈದ್ಯರ ನೇಮಕಾತಿ ಕುರಿತು ಕ್ರಮ ಕೈಗೊಳ್ಳುವಂತೆ ಡಿಎಚ್‌ಒ ನೀರಜ್ ಅವರಿಗೆ ನಿರ್ದೇಶಿಸಿದರು. ಬಾಲಕಿ ಸಾವಿನ ಘಟನೆಯನ್ನು ವಿಶೇಷ ಪ್ರಕರಣ ಪರಿಗಣಿಸಿ ಸರ್ಕಾರದಿಂದ ಮೃತ ಬಾಲಕಿ ಕುಟುಂಬಕ್ಕೆ ವಿಶೇಷ ಪರಿಹಾರ ದೊರಕಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಶಿವರಾಮ್ ಹೆಬ್ಬಾರ ಅವರು ತಹಸೀಲ್ದಾರ್ ಶಂಕರ್ ಗೌಡಿ ಅವರಿಗೆ ಸೂಚಿಸಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಸಿಪಿಐ ರಂಗನಾಥ ನೀಲಮ್ಮನವರ, ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಯಲ್ಲಾಪುರ ಟಿಎಚ್ಒ ನರೇಂದ್ರ ಪವಾರ ಉಪಸ್ಥಿತರಿದ್ದರು.