ಅಲೆಮಾರಿ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕು: ಪಲ್ಲವಿ

| Published : Nov 15 2024, 12:35 AM IST

ಅಲೆಮಾರಿ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕು: ಪಲ್ಲವಿ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಅಮಾಯಕ ಅಲೆಮಾರಿ ಜನರು ಅನಕ್ಷರಸ್ಥರಾಗಿರುವ ಕಾರಣ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ ಹಾಗಾಗಿ ಅಧಿಕಾರಿಗಳು ಮತ್ತು ನಾವು ಸೇರಿ ಅವರ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕು ಎಂದು ಕರ್ನಾಟಕ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗದ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.

ಹಳೆ ಸಂತೆ ಮೈದಾನದ ಕುವೆಂಪು ನಗರ ಮತ್ತು ಮಲ್ಲೇಶ್ವರದ ಅಲೆಮಾರಿ ಸಮುದಾಯದ ಬಡಾವಣೆಗೆ ಭೇಟಿ

ಕನ್ನಡಪ್ರಭ ವಾರ್ತೆ, ಕಡೂರು

ಅಮಾಯಕ ಅಲೆಮಾರಿ ಜನರು ಅನಕ್ಷರಸ್ಥರಾಗಿರುವ ಕಾರಣ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ ಹಾಗಾಗಿ ಅಧಿಕಾರಿಗಳು ಮತ್ತು ನಾವು ಸೇರಿ ಅವರ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕು ಎಂದು ಕರ್ನಾಟಕ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗದ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.

ಪಟ್ಟಣದ ಹಳೆ ಸಂತೆ ಮೈದಾನದ ಕುವೆಂಪು ನಗರ ಮತ್ತು ಮಲ್ಲೇಶ್ವರದ ಅಲೆಮಾರಿ ಸಮುದಾಯದ ಬಡಾವಣೆ ಮನೆಗಳಿಗೆ ಪುರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅವರ ಸಮಸ್ಯೆ ಆಲಿಸಿ ಮಾತನಾಡಿದರು. ಸುಮಾರು 30 ವರ್ಷಗಳಿಂದಲೂ ಅಲೆಮಾರಿ ಸಮುದಾಯದ ಜನರು ಮನೆ ಕಟ್ಟಿಕೊಂಡು ವಾಸವಿದ್ದರೂ ಈವರೆಗೂ ಅವರಿಗೆ ಮನೆ ಹಕ್ಕು ಪತ್ರ ಹಾಗೂ ಮೂಲಸವಲತ್ತುಗಳನ್ನು ನೀಡದಿರುವುದು ಬೇಸರದ ಸಂಗತಿ. ರಾಜ್ಯದ ಅಲೆಮಾರಿ ಸಮುದಾಯದ ಪ್ರತಿನಿಧಿಯಾಗಿ ತಾವು ಅಧ್ಯಕ್ಷರಾದ ಬಳಿಕ 2ನೇ ಬಾರಿ ಈ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.

ಸಿದ್ದರಾಮಯ್ಯನವರು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಈ ಸಮುದಾಯಗಳ ಅಭಿವೃದ್ಧಿಗೆ ಎಸ್.ಟಿ.ಪಿ ಮತ್ತು ಟಿ.ಎಸ್ ಪಿ ಯೋಜನೆ ಜಾರಿಗೊಳಿಸಿದರು. ಅಲೆಮಾರಿ ಸಮುದಾಯದ ಎಲ್ಲ ಕುಟುಂಬಗಳಿಗೂ ದಾಖಲೆ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂದಾಗ ಸ್ಥಳದಲ್ಲಿದ್ದ ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್ ಈ ಬಗ್ಗೆ ತಹಸೀಲ್ದಾರರ ಗಮನಕ್ಕೆ ತಂದು ಶಾಸಕರ ಬಳಿ ಚರ್ಚಿಸಿ ಕ್ರಮ ವಹಿಸುತ್ತೇವೆ ಎಂದು ಉತ್ತರಿಸಿದರು.

ನಿಗಮದಿಂದ ಈ ಸಮುದಾಯದ ಜನರು ಮನೆ ನಿರ್ಮಾಣ, ವ್ಯಾಪಾರ ಸೇರಿದಂತೆ ಇರುವ ಅನೇಕ ಯೋಜನೆಗಳನ್ನು ಬಳಸಿಕೊಳ್ಳಬೇಕು. ಮನೆಗಳ ದಾಖಲೆಗಳ ನೀಡಿಕೆ ಕುರಿತು ಶಾಸಕ ಕೆ.ಎಸ್.ಆನಂದ್ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಟರಾಜ್, ತಾಲೂಕು ಆಡಳಿತದಿಂದ ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ಕೆ.ಎಸ್ ಮಂಜುನಾಥ್‌, ಗ್ರಾಮ ಲೆಕ್ಕಿಗ ಲಿಂಗರಾಜು. ಪುರಸಭೆ ಅಧಿಕಾರಿ, ಸಿಬ್ಬಂದಿ ಶ್ರೀನಿವಾಸಮೂರ್ತಿ, ತಿಮ್ಮಯ್ಯ, ಮುಖಂಡರಾದ ಟಿ.ಮೂರ್ತಿ, ಕೆ. ವಿ. ಮಂಜುನಾಥ್, ಸಿ.ಎಚ್. ಮೂರ್ತಿ ಸೇರಿದಂತೆ ಸಮುದಾಯದ ನಿವಾಸಿಗಳು, ಮುಖಂಡರಿದ್ದರು.

-- ಬಾಕ್ಸ್--

ಅಭಿವೃದ್ಧಿ ನಿಗಮ ಅಧ್ಯಕ್ಷರ ಅಸಮಾಧಾನ

ಕೆಲ ಅಧಿಕಾರಿಗಳು ನಿಗಮದ ರಾಜ್ಯಾಧ್ಯಕ್ಷರು ಬಂದರೂ ಕೂಡ ಗೈರು ಹಾಜರಾಗಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಪಲ್ಲವಿ, ಕಳೆದ ಬಾರಿಯೂ ತಾವು ಕಡೂರಿಗೆ ಬಂದಾಗ ಅಧಿಕಾರಿಗಳು ಗೈರು ಹಾಜರಾಗಿದ್ದರು. ಇದನ್ನು ತಾವು ಸಹಿಸುವುದಿಲ್ಲ ಎಂದರು. 14ಕೆಕೆಡಿಯು1

ಕಡೂರು ಪಟ್ಟಣದ ಕೋಟೆ ಹಳೇ ಸಂತೆ ಮೈದಾನದ ಕುವೆಂಪು ಬಡಾವಣೆಯ ಅಲೆಮಾರಿ ಸಮುದಾಯದ ನಿವಾಸಿಗಳನ್ನು ಅಲೆಮಾರಿ ನಿಗಮದ ರಾಜ್ಯಾಧ್ಯಕ್ಷೆ ಜಿ.ಪಲ್ಲವಿ ಅವರು ಅಧಿಕಾರಿಗಳೊಂದಿಗೆ ಭೇಟಿ ಮಾಡಿದರು.