ಸಾರಾಂಶ
ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಅಡಕವಾಗಿವೆ. ಮನುಷ್ಯನಿಗೆ ಬದುಕುವ ದಾರಿಯನ್ನು ತೋರಿಸುತ್ತದೆ. ಕರ್ನಾಟಕದಲ್ಲಿ ಕಂಸಾಳೆ, ಯಕ್ಷಗಾನ, ಬಯಲಾಟ, ಸೋಬಾನೆ, ತಂಬೂರಿ ಪದ, ಪೂಜಾ ಕುಣಿತ, ತಮಟೆ, ನಗಾರಿ, ಪಟದ ಕುಣಿತ, ಸೇರಿದಂತೆ ಹಲವು ಜಾನಪದ ಕಲಾ ಪ್ರಕಾರಗಳು ಅತ್ಯಂತ ಶ್ರೀಮಂತವಾಗಿವೆ.
ಕನ್ನಡಪ್ರಭ ವಾರ್ತೆ ಹಲಗೂರು
ಅಳಿವಿನಂಚಿನಲ್ಲಿರುವ ಸತ್ಯ, ನೀತಿ, ಮಾನವೀಯ ಮೌಲ್ಯಗಳನ್ನು ಸಾರುವ ಜಾನಪದ ಪರಂಪರೆಯನ್ನು ಪುನಶ್ಚೇತನಗೊಳಿಸುವ ಕೆಲಸವಾಗಬೇಕಿದೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಗಾಣಾಳು ಮಾದೇಶ್ ಕರೆ ನೀಡಿದರು.ಬ್ಯಾಡರಹಳ್ಳಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಚರಿತ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕುಂತೂರು ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಅಡಕವಾಗಿವೆ. ಮನುಷ್ಯನಿಗೆ ಬದುಕುವ ದಾರಿಯನ್ನು ತೋರಿಸುತ್ತದೆ. ಕರ್ನಾಟಕದಲ್ಲಿ ಕಂಸಾಳೆ, ಯಕ್ಷಗಾನ, ಬಯಲಾಟ, ಸೋಬಾನೆ, ತಂಬೂರಿ ಪದ, ಪೂಜಾ ಕುಣಿತ, ತಮಟೆ, ನಗಾರಿ, ಪಟದ ಕುಣಿತ, ಸೇರಿದಂತೆ ಹಲವು ಜಾನಪದ ಕಲಾ ಪ್ರಕಾರಗಳು ಅತ್ಯಂತ ಶ್ರೀಮಂತವಾಗಿವೆ ಎಂದರು.ಈ ಹಿಂದೆ ಎಲ್ಲರ ಮನೆ ಮಾತಾಗಿದ್ದ ಜಾನಪದ ಸಾಹಿತ್ಯ ನಂತರದ ದಿನಗಳಲ್ಲಿ ಲಿಖಿತ ರೂಪ ಪಡೆದು ಇಂದು ಅಳಿವಿನ ಅಂಚಿನ ಕಡೆಗೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಾನಪದ ಕಲಾ ಪ್ರಕಾರಗಳನ್ನು ಅಧುನಿಕ ತಲೆಮಾರಿಗೆ ಕೊಂಡುಯ್ಯುತ್ತಿರುವ ಚರಿತ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹರ್ಷ ಮತ್ತು ತಂಡದಿಂದ ತಮಟೆ ವಾದ್ಯ, ಶ್ರೀಧರ್ ಚಿಲಿಪಿಲಿಗೊಂಬೆ, ಪ್ರದೀಪ್ ಮತ್ರು ತಂಡ ಪೂಜಾ ಕುಣಿತ, ಮಲ್ಲೇಶ್ ತಂಡ ಮೈಸೂರು ನಗಾರಿ, ನೋಡುಗರ ಕಣ್ಮನ ಸೆಳೆಯಿತು. ಗಾಯಕರಾದ ಚಕ್ಕೆರೆ ಲೋಕೇಶ್ ತಂಡದ ಸದಸ್ಯರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು.ಈ ವೇಳೆ ಟ್ರಸ್ಟ್ ಅಧ್ಯಕ್ಷ ಮಲ್ಲೇಶ್, ಗ್ರಾಮದ ಮುಖಂಡರಾದ ಜಯರಾಮು, ರವಿಕುಮಾರ್, ತಮ್ಮಣ್ಣಗೌಡ, ದ್ಯಾಪೇಗೌಡ, ನಾಗಣ್ಣ, ಮಾದೇಗೌಡ, ಬಿ.ಎಚ್.ರಮೇಶ್, ಪುಟ್ಟಸ್ವಾಮಿ, ಡಿ.ಕೆ.ಹಳ್ಳಿ ಶಿವಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.