ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ: ಶಾಸಕ ಶಿವರಾಮ ಹೆಬ್ಬಾರ್

| Published : Jul 18 2025, 12:45 AM IST

ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ: ಶಾಸಕ ಶಿವರಾಮ ಹೆಬ್ಬಾರ್
Share this Article
  • FB
  • TW
  • Linkdin
  • Email

ಸಾರಾಂಶ

ಗುಣಮಟ್ಟ ಕಾಮಗಾರಿ ಮಾಡಿಸಿಕೊಳ್ಳುವ ಹೊಣೆಗಾರಿಕೆ ಗ್ರಾಮಸ್ಥರದ್ದಾಗಿದೆ

ಮುಂಡಗೋಡ: ಮಾಡಿದ ಅಭಿವೃದ್ಧಿ ಕೆಲಸ ದೀರ್ಘ ಕಾಲ ಬಾಳಿಕೆ ಹಾಗೂ ಶಾಶ್ವತವಾಗಿ ಉಳಿಯಬೇಕೆಂಬ ಉದ್ದೇಶದಿಂದ ಸಿಮೆಂಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಗುಣಮಟ್ಟ ಕಾಮಗಾರಿ ಮಾಡಿಸಿಕೊಳ್ಳುವ ಹೊಣೆಗಾರಿಕೆ ಗ್ರಾಮಸ್ಥರದ್ದಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಬುಧವಾರ ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ₹೧.೩೦ ಕೋಟಿ ವೆಚ್ಚದಲ್ಲಿ ನಂದಿಗಟ್ಟಾ - ಉಗ್ಗಿನಕೇರಿ- ವಡಗಟ್ಟಾ ಮುಖ್ಯ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಶೇ.೯೦ರಷ್ಟು ಗ್ರಾಮೀಣ ಭಾಗದಲ್ಲಿ ಸಿಮೆಂಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮೀಣ ಭಾಗದ ಯಾವ ರಸ್ತೆಗಳು ಕೂಡ ಬಾಕಿ ಉಳಿದಿಲ್ಲ. ತಾಲೂಕಿನ ೧೬ ಗ್ರಾಪಂ ವ್ಯಾಪ್ತಿಯ ಕೆರೆ ತುಂಬಿಸುವ ಯೋಜನೆ ಕೆಲಸ ಬಹುತೇಕ ಪೂರ್ಣಗೊಂಡಿದೆ. ಮಳೆಗಾಲ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಂದ ಉದ್ಘಾಟಿಸಲಾಗುವುದು. ಇದರಿಂದ ಇಲ್ಲಿಯ ರೈತರ ಆರ್ಥಿಕತೆ ಉತ್ತುಂಗಕ್ಕೇರಲಿದೆ. ಬೇರೆ ಬೇರೆ ಊರಿನಿಂದ ಕೂಲಿ ಕಾರ್ಮಿಕರು ಇಲ್ಲಿಗೆ ವಲಸೆ ಬರುವ ವಾತಾವರಣ ನಿರ್ಮಾಣವಾಗಲಿದೆ ಎಂದರು.

ಕಬ್ಬಿನ ಕಾರ್ಖಾನೆ ತೆರೆದಿದ್ದರಿಂದ ಮುಂಡಗೋಡ ತಾಲೂಕಿನಲ್ಲಿ ಕೂಡ ಸುಮಾರು ೭೦೦೦ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಕಳೆದ ಬಾರಿ ಮುಂಡಗೋಡ ತಾಲೂಕಿನ ರೈತರು ಸುಮಾರು ₹೩ ಕೋಟಿಗೂ ಅಧಿಕ ಮೌಲ್ಯದ ಕಬ್ಬು ಬೆಳೆದಿದ್ದಾರೆ. ನೀರಾವರಿ ಯೋಜನೆ ಆರಂಭವಾದರೆ ಅದು ಮತ್ತಷ್ಟು ಹೆಚ್ಚಲಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ಹಣ ನೇರವಾಗಿ ಕೃಷಿಕರ ಖಾತೆಗೆ ಜಮಾ ಆಗುತ್ತದೆ. ಇದರಿಂದ ರೈತರ ಬದುಕು ಉಜ್ವಲಗೊಳ್ಳಲಿದೆ ಎಂದರು.

ತಾಲೂಕಿನ ಜನತೆ ಬೋರ್‌ವೆಲ್‌ ನೀರಿನಿಂದ ಮುಕ್ತವಾಗಬೇಂಬ ಉದ್ದೇಶದಿಂದ ತಾಲೂಕಿನ ಅತ್ತಿವೇರಿ, ಬಾಚಣಕಿ, ನ್ಯಾಸರ್ಗಿ ಹಾಗೂ ಚಿಗಳ್ಳಿ ಜಲಾಶಯದಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ ಎಂದರು.

ಕಳೆದ ೨ ವರ್ಷಗಳಿಂದ ಗ್ಯಾರಂಟಿ ಯೋಜನೆಯಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿದ್ದರಿಂದ ಅಭಿವೃದ್ಧಿ ಕಾಮಗಾರಿಗಳು ಸ್ವಲ್ವ ವಿಳಂಬವಾಗಿದೆ. ಆದರೆ ಈಗ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಭೋಸಲೆ, ಜ್ಞಾನೇಶ್ವರ ಗುಡಿಯಾಳ, ಮಾಜಿ ಜಿಪಂ ಮಾಜಿ ಸದಸ್ಯ ರವಿಗೌಡ ಪಾಟೀಲ್, ಎಚ್.ಎಂ.ನಾಯ್ಕ, ಸಿದ್ದಪ್ಪ ಹಡಪದ, ಕೆ.ಸಿ.ಗಲಬಿ, ದೇವು ಪಾಟೀಲ್, ಕಲ್ಲನಗೌಡ್ರು, ಗ್ರಾಪಂ ಅಧ್ಯಕ್ಷ ಸಂತೋಷ ಭೋಸಲೆ, ಸದಸ್ಯರು ಸೇರಿದಂತೆ ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.