ಸಾರಾಂಶ
ಶ್ರೀ ಬೇರುಗಂಡಿ ಬೃಹನ್ಮಠ ಶ್ರೀ ಸಿದ್ಧೇಶ್ವರಸ್ವಾಮಿ ದೇವಾಲಯ ಕಳಸಾರೋಹಣ, ರೇಣುಕ ಮಹಂತ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸ್ವಾರ್ಥ ರಹಿತವಾದ ಬದುಕಿಗೆ ಬೆಲೆ ನೆಲೆ ಇದೆ. ಅದರಲ್ಲಿ ಅಂಥ ಅದ್ಭುತ ಶಕ್ತಿಯಿದೆ. ಜೀವನದಲ್ಲಿ ಉತ್ಸಾಹ ಇದ್ದರೆ ಸಾಧನೆ ಸಿದ್ಧಿಯಾಗುತ್ತದೆ. ಜನ ಮೆಚ್ಚುವಂತಹ ಕೆಲಸ ದೊಡ್ಡದಾದರೆ ದೈವ ಮೆಚ್ಚುವಂತಹ ಕೆಲಸ ಅದಕ್ಕಿಂತಲೂ ದೊಡ್ಡದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ನುಡಿದರು.
ತಾಲೂಕಿನ ಮಾಚಗೊಂಡನಹಳ್ಳಿಯಲ್ಲಿ ಗುರುವಾರ ನಡೆದ ಶ್ರೀ ಬೇರುಗಂಡಿ ಬೃಹನ್ಮಠದ ಶ್ರೀ ಸಿದ್ಧೇಶ್ವರಸ್ವಾಮಿ ದೇವಾಲಯದ ಕಳಸಾರೋಹಣ ಹಾಗೂ ರೇಣುಕ ಮಹಂತ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.ಮನುಷ್ಯ ಜೀವನದಲ್ಲಿ ನಿರ್ದಿಷ್ಟ ಗುರಿಯಿರಬೇಕು. ಆ ಗುರಿ ಸಾಧನೆಗೆ ನಿರಂತರ ಪ್ರಯತ್ನ ಬೇಕು. ಮನುಷ್ಯನಲ್ಲಿ ದೃಢ ಸಂಕಲ್ಪ ಗಟ್ಟಿಯಾಗಿದ್ದರೆ ಸತ್ಫಲ ಕಟ್ಟಿಟ್ಟ ಬುತ್ತಿ. ಕರ್ತವ್ಯದ ಕಾಲು ದಾರಿ ಕೀರ್ತಿಯ ಹೆದ್ದಾರಿ. ಸೌಂದರ್ಯ ಜನರ ಗಮನ ಸೆಳೆಯಬಹುದು. ಆದರೆ ವ್ಯಕ್ತಿತ್ವ ಮನಸ್ಸನ್ನು ಆವರಿಸುತ್ತದೆ. ಭಾರವಿಲ್ಲದ ನೋಟಿಗೆ ಇರುವ ಬೆಲೆ ಭಾವನೆಗಳಿರುವ ಮನುಷ್ಯನಿಗೆ ಇಲ್ಲ. ಬದುಕಿಗೆ ಬಲ ಬರಬೇಕಾಗಿದ್ದರೆ ಸತ್ಕಾರ್ಯ ಸೇವಾ ಮನೋಭಾವ ಮತ್ತು ಉತ್ತಮ ಸಂಸ್ಕಾರ ಪಡೆದರೆ ಬಾಳಿನಲ್ಲಿ ಶ್ರೇಯಸ್ಸು ಕಾಣಬಹುದು ಎಂದರು.
ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಆಧ್ಯಾತ್ಮಿಕ ಜ್ಞಾನ ಸಂಪತ್ತನ್ನು ಬೋಧಿಸಿದ್ದಾರೆ. ಕಾಯಕದಿಂದಲೇ ಚೈತನ್ಯ ಸಿಗುತ್ತದೆ. ಬೇರುಗಂಡಿ ಬೃಹನ್ಮಠ ಶ್ರೀ ರಂಭಾಪುರಿ ಪೀಠದ ಶಾಖಾ ಮಠ ವಾಗಿದ್ದು ಲಿಂ.ಚಂದ್ರಶೇಖರ ಶಿವಾಚಾರ್ಯರ ಪರಿಶ್ರಮದಿಂದ ಜನರ ಕಣ್ಣಿಗೆ ಕಂಡಿತು. ಇಂದಿನ ರೇಣುಕ ಮಹಂತ ಶ್ರೀಗಳು 12 ವರುಷದ ಸಂದರ್ಭದಲ್ಲಿ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ, ಬೆಂದು ಬಸವಳಿದ ಮನಸ್ಸಿಗೆ ನೆಮ್ಮದಿ ಸಿಗಲು ಮನುಷ್ಯ ಧಾರ್ಮಿಕ ಕ್ಷೇತ್ರಗಳಿಗೆ ಹೋಗಬೇಕಾಗುತ್ತದೆ. ಶಾಂತಿ ನೆಮ್ಮದಿಗಿಂತ ಮಿಗಿಲಾದ ಯಾವುದೇ ಸಂಪತ್ತಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆ ಸಕಲರ ಬದುಕಿನಲ್ಲಿ ಆಶಾ ಕಿರಣ ವಾಗಿವೆ. ಧರ್ಮ ಪಾಲನೆಯಿಂದ ಜೀವನ ಉಜ್ವಲಗೊಳ್ಳುವುದೆಂದರು.
ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿ ಮಾತನಾಡಿ, ಬದುಕಲು ಹಣ ಬೇಕು. ಹೊಂದಿ ಕೊಂಡು ಬಾಳಲು ಗುಣ ಬೇಕು. ಕೆಟ್ಟವರು ತುಂಬಾ ಬೆಳೆಯಬಹುದು. ಆದರೆ, ಉಳಿಯಲು ಸಾಧ್ಯವಿಲ್ಲ. ಒಳ್ಳೆಯವರನ್ನು ತುಂಬಾ ತುಳಿಯಬಹುದು ಆದರೆ ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.ನೊಣವಿನಕೆರೆ ಡಾ. ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿ ಲಿಂ.ಶ್ರೀಮದ್ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ವಿಶ್ವ ಬಂಧುತ್ವದ ಚಿಂತನೆಗಳನ್ನು ಹಂಚಿಕೊಂಡರು. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯರು, ಚಿಕ್ಕಮಗಳೂರು ಶಂಕರ ದೇವರಮಠ, ಹುಣಸಘಟ್ಟ ಹಾಲುಸ್ವಾಮಿಮಠ, ಬೀರೂರು ಬಾಳೆಹೊನ್ನೂರು ಖಾಸಾ ಮಠದ, ತೆಂಡೇಕೆರೆ ಮಠ, ಹೆಗ್ಗಡಹಳ್ಳಿ ಹಿರೇಮಠ, ಸಂಗೊಳ್ಳಿ ಹಿರೇಮಠ, ನೆಗಳೂರು ಹಿರೇಮಠ, ಹಣ್ಣೆ ಮಠದ ಶ್ರೀಗಳು ಉಪಸ್ಥಿತರಿದ್ದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಮ್.ಪಿ.ಕುಮಾರಸ್ವಾಮಿ, ಚಿಕ್ಕಮಗಳೂರಿನ ಎಚ್.ಎಮ್. ಲೋಕೇಶ್, ಕೆಳಗೂರಿನ ಕೆ.ವಿ.ವೀರರಾಜಗೌಡರು, ಆಲ್ದೂರಿನ ಮಹೇಶ್, ಜಿ.ಎಮ್.ರಾಜಶೇಖರ ಸೇರಿದಂತೆ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಅರ್ಪಿತಾ ಮತ್ತು ಎನ್.ಎನ್.ಯುವರಾಜ ದಂಪತಿಗೆ ವಿಶೇಷ ಗುರುರಕ್ಷೆಯಿತ್ತು ಆಶೀರ್ವದಿಸಿದರು. ದೇವಿ ಗುರುಕುಲದವರಿಂದ ಪ್ರಾರ್ಥನೆ, ಬಿ.ಎ.ಶಿವಶಂಕರ್ ಸ್ವಾಗತಿಸಿದರು. ವೇದಶ್ರೀ ಅವರಿಂದ ಭರತ ನಾಟ್ಯ ಜರುಗಿತು. ಗೋಣಿಬೀಡು ಮೋಹನ್ ರಾಜಣ್ಣ ಮತ್ತು ರಂಭಾಪುರಿ ಪೀಠದ ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಪೋಟೋ ಫೈಲ್ ನೇಮ್ 2 ಕೆಸಿಕೆಎಂ 6ಚಿಕ್ಕಮಗಳೂರು ತಾಲೂಕಿನ ಮಾಚಗೊಂಡನಹಳ್ಳಿಯಲ್ಲಿ ಗುರುವಾರ ನಡೆದ ಶ್ರೀ ಬೇರುಗಂಡಿ ಬೃಹನ್ಮಠದ ಶ್ರೀ ಸಿದ್ಧೇಶ್ವರ ಸ್ವಾಮಿ ದೇವಾಲಯದ ಕಳಸಾರೋಹಣ ಹಾಗೂ ರೇಣುಕ ಮಹಂತ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ ಧರ್ಮ ಸಮಾರಂಭವನ್ನು ಶಾಸಕ ಟಿ.ಡಿ. ರಾಜೇಗೌಡ ಉದ್ಘಾಟಿಸಿದರು.