ಸಾರಾಂಶ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 300 ಎಕರೆ ಜಮೀನನ್ನು ಈಗಾಗಲೇ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದ್ದು, 4-5 ತಿಂಗಳಲ್ಲಿ ಎರಡು ಸಾವಿರ ನಿವೇಶನಗಳನ್ನು ಹಂಚುವ ಕಾರ್ಯವಾಗಲಿದೆ
ಉಪ್ಪಿನಂಗಡಿ : ಒಂದು ಗ್ರಾ.ಪಂ. ವ್ಯಾಪ್ತಿಗೊಳಪಟ್ಟ ನಿವೇಶನ ರಹಿತರು, ತಮ್ಮ ಗ್ರಾ.ಪಂ.ನಲ್ಲೇ ನಿವೇಶನಕ್ಕೆ ಅರ್ಜಿ ಸಲ್ಲಿಸಬೇಕೆಂಬ ನಿಯಮ ಈ ಮೊದಲಿತ್ತು. ಅದನ್ನು ಬದಲಾಯಿಸಿ ಬೇರೆ ಯಾವ ಗ್ರಾ.ಪಂ.ನಲ್ಲಿ ಬೇಕಾದರೂ ಅರ್ಜಿ ಸಲ್ಲಿಸಹುದೆಂಬ ನಿಯಮವನ್ನು ಈಗ ರೂಪಿಸಲಾಗಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 300 ಎಕರೆ ಜಮೀನನ್ನು ಈಗಾಗಲೇ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದ್ದು, 4-5 ತಿಂಗಳಲ್ಲಿ ಎರಡು ಸಾವಿರ ನಿವೇಶನಗಳನ್ನು ಹಂಚುವ ಕಾರ್ಯವಾಗಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಪೆರ್ನೆ ವಲಯ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಪೆರ್ನೆಯಲ್ಲಿ ನಡೆದ ‘ಬಿಜೆಪಿ ಸುಳ್ಳಿಗೆ ಕಾಂಗ್ರೆಸ್ ಉತ್ತರ’ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಎಂಎಫ್‌ಗೆ ನನ್ನ ಕ್ಷೇತ್ರದಲ್ಲಿ ಜಾಗ ಮಂಜೂರು ಮಾಡುವ ಕೆಲಸವಾಗಿದೆ. ಸರ್ಕಾರಿ ಮೆಡಿಕಲ್ ಕಾಲೇಜು ತಾಲೂಕಿಗೆ ತರುವ ಕೆಲಸವಾಗಿದೆ. ಮುಂಡೂರಿನಲ್ಲಿ ಕ್ರೀಡಾಂಗಣಕ್ಕೆ ಅನುದಾನ ತಂದಿದ್ದೇನೆ.
ಶಾಸಕನಾದ ಒಂದೂವರೆ ವರ್ಷದಲ್ಲಿ 3,400 ಅಕ್ರಮ- ಸಕ್ರಮ ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಟೆಂಪಲ್ ಟೂರಿಸಂ ಬೆಳೆಸಬೇಕು ಎಂಬ ಕನಸಿದ್ದು, ಅದಕ್ಕಾಗಿ ಶ್ರೀ ಮಹಾಲಿಂಗೇಶ್ವರ ದೇವಾಲಯ ಹಾಗೂ ಶ್ರೀ ಸಹಸ್ರಲಿಂಗೇಶ್ವರ ದೇವಾಲಯಗಳ ಅಭಿವೃದ್ಧಿಗೆ ಯೋಜನೆಗಳೂ ಸಿದ್ಧವಾಗಿ ಅನುದಾನಗಳು ಬಿಡುಗಡೆಯಾಗಿವೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಂ ಕೆ.ಬಿ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಪೆರ್ನೆ ಸಿಎ ಬ್ಯಾಂಕ್ ಅಧ್ಯಕ್ಷ ತೋಯಜಾಕ್ಷ ಶೆಟ್ಟಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೌಸೀಫ್ ಯು.ಟಿ., ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಪೆರ್ನೆ ಗ್ರಾ.ಪಂ. ಅಧ್ಯಕ್ಷೆ ವಿಜಯ, ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಕೋಡಿಂಬಾಡಿ, ಕಾಂಗ್ರೆಸ್ ಉಸ್ತುವಾರಿ ವಿಕ್ರಂ ರೈ ಕೋಡಿಂಬಾಡಿ, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಪೆರ್ನೆ ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಶಾಫಿ ಮತ್ತಿತರರು ಉಪಸ್ಥಿತರಿದ್ದರು.