ಸಾರಾಂಶ
‘ಸರ್ಕಾರದ ನಡೆ ಕಾರ್ಯಕರ್ತರ ಕಡೆ’ ಸಭಾ ಕಾರ್ಯಕ್ರಮ । ಬ್ಲಾಕ್ ಕಾಂಗ್ರೆಸ್ ಆಯೋಜನೆ
ಕನ್ನಡಪ್ರಭ ವಾರ್ತೆ ಹಿರಿಯೂರುರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಶ್ರಮಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ನಗರದ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಎಂಬ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮುಂದಿನ ಮೇ.20 ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಲಿದ್ದು ಪಕ್ಷಕ್ಕಾಗಿ ಹಗಲಿರುಳು ದುಡಿದ ಕಾರ್ಯಕರ್ತರ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ವರಿಷ್ಠರು ಸೂಚಿಸಿದ್ದು ಮುಂದೆ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುತ್ತೇವೆ. ಈ ಹಿಂದೆ ಅಧಿಕಾರದಲ್ಲಿದ್ದಾಗಿನ ನಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮೆಲುಕು ಹಾಕಬೇಕು ಎಂದು ಹೇಳಿದರು.
ಕಾಂಗ್ರೆಸ್ ದೇಶದ ಅಭಿವೃದ್ದಿ, ರಕ್ಷಣೆ ಹಾಗೂ ಬಡವರ ಏಳಿಗೆಗೆ ಶ್ರಮಿಸುವ ಪಕ್ಷವಾಗಿದೆ. ಭದ್ರಾ ಯೋಜನೆಗೆ 2600 ಕೋಟಿ ರು. ಅನುದಾನ ನೀಡಿದ್ದು ಪೂರ್ಣಗೊಳಿಸುವ ಕಾರ್ಯ ಮಾಡುತ್ತೇವೆ. ತಾಲೂಕಿನಲ್ಲಿ 1.85 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ನೀಡಿದ್ದೇವೆ. ಮುಂದಿನ ಆಕ್ಟೋಬರ್ ಒಳಗಾಗಿ ಮೊಳಕಾಲ್ಮುರಿನ 20 ಕೆರೆಗಳು ಹಾಗೂ ಈ ಭಾಗದ ಎಲ್ಲಾ ಕೆರೆಗಳಿಗೂ ನೀರು ಹರಿಸುವ ಪ್ರಯತ್ನ ಮಾಡುತ್ತೇನೆ. ಮುಂದಿನ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಕಾರ್ಯಕರ್ತರು ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಮರೆತು ಸಂಘಟಿತರಾಗಿ ಪಕ್ಷದ ಗೆಲುವಿಗೆ ದುಡಿಯಬೇಕು ಎಂದರು.ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ತತ್ವಾದರ್ಶಗಳ ಸಿದ್ಧಾಂತ, ತ್ಯಾಗ ಮನೋಭಾವನೆ ಹೊಂದಿರುವ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ. ಅಪಪ್ರಚಾರ ಹಾಗೂ ಬರೀ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬರುವುದು ಬಿಜೆಪಿಯ ಸಿದ್ಧಾಂತವಾಗಿದೆ ಎಂದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಕಾರ್ಯಕರ್ತರು ತಾಯಿ ಹೃದಯ ಹೊಂದಿರುವವರು. ಪಕ್ಷದ ಸಂಘಟನೆಗೆ ದುಡಿಯುವವರು. ಅವರ ಸಮಸ್ಯೆ ಆಲಿಸಲು ಸರ್ಕಾರವೇ ಅವರ ಕಡೆಗೆ ಬಂದಿದೆ. ಬಿಎಸ್‌ವೈ ಸಿಎಂ ಆಗಿದ್ದಾಗ ಅಂಬೇಡ್ಕರ್ ಪೋಟೊ ತೆಗೆಸಿದರು. ಆದರೆ ಅಂಬೇಡ್ಕರ್ ಅವರಿಗೆ ಸಂವಿಧಾನ ಬರೆಯುವ ಶಕ್ತಿ ನೀಡಿದ್ದು ಕಾಂಗ್ರೆಸ್. ನಾಲ್ಕುವರೆ ವರ್ಷ ಯಾವುದೇ ಅಭಿವೃದ್ದಿ ಕಾರ್ಯ ನಡೆಸದೇ ಜಾತಿಗಳ ಮಧ್ಯೆ ದ್ವೇಷ ಭಿತ್ತಿ ಜನತೆಯ ನೆಮ್ಮದಿಗೆ ಬೆಂಕಿ ಹಚ್ಚುವ ಕೆಲಸವನ್ನು ಮಾಡುವ ಬಿಜೆಪಿ ಮತಗಳಿಕೆಗೆ ಮಾತ್ರ ಅಂಬೇಡ್ಕರ್ ಭಾವಚಿತ್ರ ಹಿಡಿಯುತ್ತಾರೆ ಎಂದು ಆರೋಪಿಸಿದರು.ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಪಂ ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಜಿಪಂ ಮಾಜಿ ಸದಸ್ಯೆ ಗೀತಾನಾಗಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಶಿವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿದರು.
ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಗೀತಾನಂದಿನಿಗೌಡ, ನಗರಸಭೆ ಅಧ್ಯಕ್ಷ ಅಜಯ್ ಕುಮಾರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಹಾಲೇಶ್, ಸಂಪತ್ ಕುಮಾರ್, ಮೈಲಾರಪ್ಪ, ಸುರೇಖಾಮಣಿ, ನಾಗರತ್ನಮ್ಮ, ಕಾಂತರಾಜ್, ಆರ್.ನಾಗೇಂದ್ರನಾಯ್ಕ್, ಅನಿಲ್ ಕುಮಾರ್, ಡಾ.ಸುಜಾತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್, ಈರಲಿಂಗೇಗೌಡ, ನಗರಸಭೆ ಸದಸ್ಯೆ ಶಿವರಂಜಿನಿ ಮುಂತಾದವರು ಹಾಜರಿದ್ದರು.