ಶಿಗ್ಗಾಂವಿಯಲ್ಲಿ ಪಶ್ಚಿಮ ಪದವೀಧರ ಚುನಾವಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದರು.

ಶಿಗ್ಗಾಂವಿ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯು ಮೋಹನ್ ಲಿಂಬಿಕಾಯಿಯವರ ಚುನಾವಣೆಯಲ್ಲ ಅದು ನಮ್ಮ, ನಿಮ್ಮೆಲ್ಲರ ಚುನಾವಣೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಪಶ್ಚಿಮ ಪದವೀಧರ ಚುನಾವಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗೆ ಬರಬೇಕಾದ ಸೆಕ್ಯುಲರ್ ಓಟ್‌ಗಳನ್ನು ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಗಮನ ಹರಿಸಬೇಕು, ಮೋಹನ್ ಲಿಂಬಿಕಾಯಿಯವರೇ ಬರಬೇಕು ಎಂಬ ಭಾವನೆಯನ್ನು ತೆಗೆದು ಹಾಕಿ ಇದು ನನ್ನ ಚುನಾವಣೆ ಎಂದು ಭಾವಿಸಿ, ಎಲ್ಲ ಪದವೀಧರರಲ್ಲಿ ಮತ ಹಾಕುವಂತೆ ಮನವಿ ಮಾಡಬೇಕು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿ ಉತ್ಸಾಹದಿಂದ ಕೆಲಸ ಮಾಡಿದ್ದೀರೋ ಅದೇ ರೀತಿ ಈ ಚುನಾವಣೆಯಲ್ಲಿಯೂ ಉತ್ತಮವಾಗಿ ಕೆಲಸ ಮಾಡಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ, ಈ ಕ್ಷೇತ್ರದಲ್ಲಿ ಈ ಚುನಾವಣೆ ಹೊಸ ಚುನಾವಣೆಯಾಗಿದೆ. ಇಷ್ಟು ಗಂಭೀರವಾದ ಚುನಾವಣೆಯನ್ನು ನಾವು ಮಾಡಿಲ್ಲ, ಆದರೂ ಈ ಚುನಾವಣೆಯನ್ನು ನಾವು ಗೆಲ್ಲಬೇಕಿದೆ, ಎಲ್ಲರೂ ಒಗ್ಗಟ್ಟಾಗಿ ಕಾರ್ಯ ಮಾಡಿ ಎಂದು ತಿಳಿಸಿದರು.

ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಮಾತನಾಡಿ, ಶತಾಯ-ಗತಾಯ ಕಾಂಗ್ರೆಸ್ ಅಭ್ಯರ್ಥಿಯನ್ನು ಈ ಬಾರಿ ಗೆಲ್ಲಿಸಲೇಬೇಕಿದೆ, ಶಿಗ್ಗಾಂವಿ- ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ 4 ಬೂತ್‌ಗಳು ಬರುತ್ತವೆ, 3650 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಶಿಗ್ಗಾಂವಿ ಮತ್ತು ಸವಣೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಗ್ಯಾರಂಟಿ ಸಮಿತಿಗಳ ಅಧ್ಯಕ್ಷರ ನೇತೃತ್ವದಲ್ಲಿ ಜಂಟಿಯಾಗಿ ಮತದಾರರನ್ನು ಭೇಟಿಯಾಗುವ ಕಾರ್ಯ ನಡೆದಿದೆ, ಒಂದು ಟೀಮ್ ಆಗಿ ಮೊದಲನೇ ಹಂತದ ಪ್ರಚಾರವನ್ನು ಮುಗಿಸಿದ್ದೇವೆ, ನಾಳೆಯೂ ಪ್ರಚಾರ ಕೈಗೊಂಡಿದ್ದೇವೆ ಎಂದು ತಿಳಿಸಿ, ಈ ಬಾರಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಗ್ಗಾಂವಿ ಹಾಗೂ ಸವಣೂರು ತಾಲೂಕಿನ ಕಾಂಗ್ರೆಸ್ ಮುಖಂಡರು ಇದ್ದರು.