ಮತದಾನದ ಪ್ರಮಾಣ ಹೆಚ್ಚಿಸಲು ಒಟ್ಟಾಗಿ ಶ್ರಮಿಸಿ: ರಾಹುಲ್ ಶರಣಪ್ಪ ಸಂಕನೂರ್

| Published : Mar 31 2024, 02:06 AM IST

ಸಾರಾಂಶ

ಯಾವ ಮತದಾರರು ಮತದಾನದಿಂದ ಹೊರಗುಳಿಯಬಾರದು. ಕ್ಷೇತ್ರದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಎಲ್ಲ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಒಟ್ಟಾಗಿ ಶ್ರಮಿಸಬೇಕು.

ಸಂಡೂರು: ಯಾವ ಮತದಾರರು ಮತದಾನದಿಂದ ಹೊರಗುಳಿಯಬಾರದು. ಕ್ಷೇತ್ರದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಎಲ್ಲ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಒಟ್ಟಾಗಿ ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ್ ಹೇಳಿದರು.ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ಬೂತ್ ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.೭೧ ಮತದಾನವಾಗಿದೆ. ಇದು ಬಹಳ ಕಡಿಮೆ ಪ್ರಮಾಣವಾಗಿದೆ. ದೋಣಿಮಲೈ, ತೋರಣಗಲ್ಲಿನ ಘೋರ್ಪಡೆ ನಗರ ಮುಂತಾದೆಡೆಯಲ್ಲಿನ ಕೆಲ ಮತಗಟ್ಟೆಗಳಲ್ಲಿ ಅತಿ ಕಡಿಮೆ ಪ್ರಮಾಣದ ಮತದಾನವಾಗಿದೆ. ಇದಕ್ಕೆ ಕಾರಣ ಏನೆಂದು ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳು ಸಂಬಂಧಿಸಿದ ಮತಗಟ್ಟೆಗಳ ಬಿಎಲ್‌ಒ ಗಳನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಎಲ್‌ಒಗಳು, ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ಪ್ರದೇಶದಲ್ಲಿ ಹೊರ ರಾಜ್ಯದವರು ಹೆಚ್ಚಿನ ಸಂಖೆಯಲ್ಲಿದ್ದಾರೆ. ರಜೆ ಸಂದರ್ಭದಲ್ಲಿ ಅವರು ತಮ್ಮ ಊರುಗಳಿಗೆ ತೆರಳಿರುತ್ತಾರೆ ಎಂದು ಸಮಜಾಯಿಸಿ ನೀಡಿದರು.

ಅಧಿಕಾರಿಗಳು ನೀಡಿದ ಸಮಜಾಯಿಸಿಯನ್ನು ಒಪ್ಪದ ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳು, ಯಾವುದೇ ಮತಗಟ್ಟೆಯಲ್ಲಿ ಶೇ ೭೫ ರಷ್ಟು ಮತದಾರರು ಪರಸ್ಥಳಗಳಿಗೆ ತೆರಳಿರುವುದಿಲ್ಲ. ಹಿಂದಿನ ಚುನಾವಣೆಯಲ್ಲಿ ಮತದಾನ ಮಾಡದವರ ಫೋನ್ ಸಂಖೆ ಪಡೆದುಕೊಂಡು, ಸಂಪರ್ಕಿಸಿ ಮತದಾನ ಮಾಡದಿರಲು ಕಾರಣ ತಿಳಿದುಕೊಳ್ಳಿ. ಅವರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು. ಅಂತಹ ಮತಗಟ್ಟೆಗಳಲ್ಲಿ ಮೈಕ್ರೊ ಯೋಜನೆ ರೂಪಿಸಿಕೊಳ್ಳಿ’ ಎಂದು ಸೂಚಿಸಿದರು.

ಈ ಬಾರಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿಯನ್ನು ಏ.೧ರಿಂದ ಹೆಚ್ಚಿಸಲಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ಯಾರಾದರು ಗುಳೆ ಹೋಗಿದ್ದರೆ ಅವರಿಗೂ ಈ ವಿಷಯ ತಿಳಿಸಿ ಮರಳಿ ಬರುವಂತೆ ಮತ್ತು ಮತದಾನದಲ್ಲಿ ಭಾಗವಹಿಸುವಂತೆ ಮಾಡಬೇಕು. ಯುವ ಮತದಾರರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದರು.

ಮನೆಮನೆಗೆ ಭೇಟಿ ಕೊಡಿ:

ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನದ ಪ್ರಮಾಣ ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಿಎಲ್‌ಒಗಳು ಮನೆಮನೆ ಭೇಟಿ ನೀಡಿ, ಮತದಾನದ ಕುರಿತು ಜಾಗೃತಿ ಮೂಡಿಸಬೇಕು. ಬಿಎಲ್‌ಒ ಗಳು ಸಹ ತಮ್ಮದೇ ಆದ ಯೋಜನೆಯನ್ನು ರೂಪಿಸಿಕೊಂಡು ಈ ಬಾರಿ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ತಾಪಂ ಇಒ ಎಚ್‌.ಷಡಾಕ್ಷರಯ್ಯ ಮಾತನಾಡಿ, ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಮೃತಪಟ್ಟವರ ಹೆಸರುಗಳನ್ನು ತೆಗೆದು ಹಾಕಲಾಗಿದೆ. ಮತಗಟ್ಟೆಗಳಲ್ಲಿ ಮತದಾರರಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ೮೫ ವರ್ಷ ಮೇಲ್ಪಟ್ಟವರನ್ನೂ ಮತಗಟ್ಟೆಗೆ ಬಂದು ಮತಚಲಾಯಿಸಿ ಇತರರಿಗೆ ಮಾದರಿಯಾಗಲು ತಿಳಿಸಬೇಕು. ಸಾಧ್ಯವಾಗದಿದ್ದಲ್ಲಿ ಅಂತಹವರಿಗೆ ಅವರ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಯುವ ಮತದಾರರು ಮತದಾರರ ಗುರುತಿನ ಚೀಟಿ ಪಡೆದರೆ ಸಾಲದು. ಅವರು ಬಂದು ಮತದಾನ ಮಾಡಿದಾಗ ಮಾತ್ರ ಅದು ಸಾರ್ಥಕವಾಗಲಿದೆ. ಈ ಕುರಿತು ಜಾಗೃತಿ ಮೂಡಿಸಬೇಕು. ಕ್ಷೇತ್ರದಲ್ಲಿ ಮತದಾನದ ಪ್ರಮಾಣವನ್ನು ಶೇ.೧೦೦ ಸಾಧಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.

ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಮತಗಟ್ಟೆಗಳಲ್ಲಿ ಮತದಾರರಿಗೆ ಒದಗಿಸಲಾಗುವ ಮೂಲ ಸೌಕರ್ಯಗಳ ಕುರಿತ ವಿವರಿಸಿದರು.

ನಂತರ ಬೂತ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.

ಸಹಾಯಕ ಚುನಾವಣಾಧಿಕಾರಿ ಸತೀಶ್, ಜಿಪಂ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್.ಅಕ್ಕಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುದೇವಯ್ಯ, ೨೫೩ ಮತಗಟ್ಟೆಗಳ ಬಿಎಲ್‌ಒಗಳು ಉಪಸ್ಥಿತರಿದ್ದರು.